KC Venugopal: ಕುದುರೆ ವ್ಯಾಪಾರದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿಗೆ ಜನರು ತಕ್ಕ ಉತ್ತರ ನೀಡುತ್ತಾರೆ; ಕೆಸಿ ವೇಣುಗೋಪಾಲ್
Apr 26, 2023 07:36 PM IST
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್
ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 2013ರ ಫಲಿತಾಂಶ ಮರುಕಳಿಸಲಿದೆ. ಕುದುರೆ ವ್ಯಾಪಾರದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ.
ಮಂಗಳೂರು: ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಶೇ.40 ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ಬುಧವಾರ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೂರು ವರ್ಷಗಳ ಕಾಲ ನರೇಂದ್ರ ಮೋದಿ ಮಾಡಿದ್ದೇನು?
ಕರ್ನಾಟಕದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಅವರಿಗೆ ಮತ ನೀಡುವಂತೆ ಅಮಿತ್ ಶಾ ಎಲ್ಲಾ ಸಭೆಗಳಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಹಾಗಾದರೆ ಕಳೆದ ಮೂರು ವರ್ಷಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದೇನು? ಈ ಮೂರು ವರ್ಷಗಳಲ್ಲಿ ನರೇಂದ್ರ ಮೋದಿ ಕರ್ನಾಟಕದ ಭವಿಷ್ಯವನ್ನು ಏಕೆ ಬದಲಿಸಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಶೇ 40 ಕಮಿಷನ್ ಪಡೆದಿದ್ದೇ ಬಿಜೆಪಿ ಸರ್ಕಾರದ ಸಾಧನೆ. 40 % ಕಮಿಷನ್ ಸರ್ಕಾರ್ ಎಂದು ಹೆಸರು ಕೊಟ್ಟಿದ್ದು ಜನರು, ಕಾಂಗ್ರೆಸ್ ಅಲ್ಲ ಎಂದರು.
ಜನರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದಾರೆ. 'ಯಥಾ ರಾಜಾ ತಥಾ ಪ್ರಜಾ' ಎಂಬ ಮಾತಿನಂತೆ ಸರ್ಕಾರಿ ಅಧಿಕಾರಿಗಳು ಕೂಡಾ ಭ್ರಷ್ಟರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ.
2013 ಫಲಿತಾಂಶ ಮರುಕಳಿಸುತ್ತದೆ
ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 2013ರ ಫಲಿತಾಂಶ ಮರುಕಳಿಸಲಿದೆ. ಕುದುರೆ ವ್ಯಾಪಾರದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಅದರಲ್ಲೂ ಬೊಮ್ಮಾಯಿ ಅವಧಿ, ಹಿಂದಿನ ಭ್ರಷ್ಟಾಚಾರದ ದಾಖಲೆಯನ್ನೇ ಮುರಿದಿದೆ. ಶೇ.40ರಷ್ಟು ಕಮಿಷನ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನೀಡಿದ ಭರವಸೆಗಳಲ್ಲಿ ಶೇ. 25ರಷ್ಟನ್ನೂ ಈಡೇರಿಸಿಲ್ಲ ಎಂದರು.
ಶೀಘ್ರದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು
ಭ್ರಷ್ಟಾಚಾರ ರಹಿತ, ಅಭಿವೃದ್ಧಿ ಪರವಾದ ಮತ್ತು ಸಮಗ್ರ ದೃಷ್ಟಿಕೋನ ಹೊಂದಿರುವ ಕಾಂಗ್ರೆಸ್ ಸರ್ಕಾರ ರಚಿಸುವ ಭರವಸೆಯನ್ನು ನಾವು ಜನರಿಗೆ ನೀಡುತ್ತಿದ್ದೇವೆ. ಇಂತಹ ಪಾರದರ್ಶಕ ಸರ್ಕಾರವನ್ನು ರಚಿಸುವ ನಿಟ್ಟಿನಲ್ಲಿ ಪ್ರಣಾಳಿಕೆಯನ್ನೂ ಸಿದ್ಧಪಡಿಸುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುವುದು.
ಏ.27 ಕ್ಕೆ ರಾಹುಲ್ ಗಾಂಧಿ ಮಂಗಳೂರಿಗೆ ಭೇಟಿ
ಏಪ್ರಿಲ್ 27ಕ್ಕೆ ಉಡುಪಿ ಹಾಗೂ ಮಂಗಳೂರಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಉಡುಪಿಯ ಕಾಪು ಎಂಬಲ್ಲಿ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಮಂಗಳೂರಿನಲ್ಲಿ ಸಂಜೆ 5 ಕ್ಕೆ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಅತಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಕರ್ನಾಟಕದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಲು ಜನರು ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಲಿದ್ದಾರೆ ಎಂದು ಕೆ.ಸಿ. ವೇಣುಗೋಪಾಲ್ ಭರವಸೆ ವ್ಯಕ್ತಪಡಿಸಿದರು.