DK Shivakumar: ನೂತನ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್‌ರನ್ನು ಬಿಜೆಪಿ ಏಜೆಂಟ್, ನಾಲಾಯಕ್ ಅಂದಿದ್ರು ಡಿಕೆ ಶಿವಕುಮಾರ್
May 15, 2023 03:19 PM IST
ಕರ್ನಾಟಕದ ನೂತನ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್‌ರನ್ನು ಬಿಜೆಪಿ ಏಜೆಂಟ್, ನಾಲಾಯಕ್ ಅಂದಿದ್ರು ಡಿಕೆ ಶಿವಕುಮಾರ್
Praveen Sood: ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ನೂತನ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್‌ಗೂ ಕಾಂಗ್ರೆಸ್‌ಗೂ ಅಷ್ಟಕಷ್ಟೇ ಎಂಬ ಮಾತು ಕೇಳಿಬಂದಿದೆ. ಹಿಂದೊಮ್ಮೆ ಸೂದ್‌ರನ್ನು ಡಿಕೆಶಿ ನಾಲಾಯಕ್, ಬಿಜೆಪಿ ಏಜೆಂಟ್ ಎಂದ ಘಟನೆಯನ್ನು ಇಲ್ಲಿ ನೆನಪಿಸಲಾಗಿದೆ.
ಬೆಂಗಳೂರು: ಕರ್ನಾಟಕ ಚುನಾವಣಾ ಫಲಿತಾಂಶ ಸಂದರ್ಭದಲ್ಲಿ ನೇಮಕಗೊಂಡಿರುವ ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರಿಗೂ ಕಾಂಗ್ರೆಸ್‌ಗೂ ಹಳೆಯ ಕಹಿನೆನಪುಗಳಿವೆ. 2017ರಲ್ಲಿ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಪ್ರವೀಣ್ ಸೂದ್ ವಿರುದ್ಧ ಹಲವು ದೂರುಗಳನ್ನು ಪಡೆದ ಬಳಿಕ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವೀಣ್ ಸೂದ್‌ರನ್ನು ವರ್ಗಾವಣೆ ಮಾಡಿದ್ದರು.
ಆರು ವರ್ಷದ ಬಳಿಕ, ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಸೂದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಡಿಕೆಶಿ ಅವರು ಬಿಜೆಪಿಯ ಕ್ರಮವನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಪ್ರವೀಣ್ ಸೂದ್ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಕೆ ಶಿವಕುಮಾರ್ ಎಚ್ಚರಿಸಿದ್ದರು. ಆ ಸಂದರ್ಭದಲ್ಲಿ ಪ್ರವೀಣ್ ಸೂದ್ ಅವರನ್ನು ಡಿಕೆ ಶಿವಕುಮಾರ್ ಬಿಜೆಪಿ ಏಜೆಂಟ್ ಎಂದಿದ್ದರು.
“ನಮ್ಮ ಡಿಜಿಪಿ ಒಬ್ಬ ನಾಲಾಯಕ್ (ನಿಷ್ಪ್ರಯೋಜಕ). ಅವರು ತಮ್ಮ ಕೆಲಸಕ್ಕೆ ಯೋಗ್ಯರಲ್ಲ. ಅವರು ಕಳೆದ ಮೂರು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಇನ್ನೂ ಎಷ್ಟು ದಿನ ಅಂತ ಬಿಜೆಪಿಯ ಕಾರ್ಯಕರ್ತರಾಗಿ ಮುಂದುವರಿಯುತ್ತಾರೆ? ಕಾಂಗ್ರೆಸ್ ನಾಯಕರ ವಿರುದ್ಧ ಸುಮಾರು 25 ಪ್ರಕರಣಗಳನ್ನು ದಾಖಲಿಸಿರುವ ಅವರು ರಾಜ್ಯದಲ್ಲಿ ಬಿಜೆಪಿ ನಾಯಕರ ಮೇಲೆ ಒಂದೇ ಒಂದು ಪ್ರಕರಣವನ್ನೂ ದಾಖಲಿಸಿಲ್ಲ. ಅವರ ಕರ್ತವ್ಯ ಮತ್ತು ನಡತೆ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇವೆ" ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಡಿಜಿಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಇರುವ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದರು.
ಮಾರ್ಚ್ 18ರಂದು ಮೈಸೂರು ದೊರೆ ಟಿಪ್ಪು ಸುಲ್ತಾನ್ ಮತ್ತು ಉರಿಗೌಡ ನಂಜೇಗೌಡ ವಿಷಯದ ಸಮದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಮಾನು ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಸ್ವಾಗತ ಕಮಾನು ನಿರ್ಮಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿಕೆಶಿ ಆರೋಪಿಸಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 224 ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದ ಒಂದು ದಿನದ ನಂತರ ಪ್ರವೀಣ್ ಸೂದ್ ಅವರ ನೇಮಕ ನಡೆದಿದೆ.
ಯಾರು ಪ್ರವೀಣ್ ಸೂದ್?
- ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಮೇ 25 ರಂದು ಪೂರ್ಣಗೊಂಡಿತ್ತು. ಬಳಿಕ 59 ವರ್ಷ ವಯಸ್ಸಿನ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡರು. ಇವರು ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
- ಪ್ರವೀಣ್ ಸೂದ್ ಕರ್ನಾಟಕ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿ.
- ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಇವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
- ಮುಂದಿನ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ಆಯ್ಕೆ ಮಾಡುವ ಕುರಿತು ಕಾಂಗ್ರೆಸ್ ನಾಯಕರಾದ ಚೌಧರಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿ ಇಲ್ಲ.
- ಪ್ರವೀಣ್ ಸೂದ್ ಅವರು ಅತ್ಯುತ್ತಮ ಶೈಕ್ಷಣಿಕ ಹಿನ್ನಲೆಯಿಂದ ಬಂದವರು. ಐಐಟಿ-ದೆಹಲಿ, ಐಐಎಂ-ಬೆಂಗಳೂರು ಮತ್ತು ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.