Karnataka Polls: ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆ ಮೇಲೆ ಬಿಜೆಪಿ ಕಣ್ಣು; ಫೆ.20ಕ್ಕೆ ಮಂಡ್ಯದಲ್ಲಿ ಯುವ ಮೋರ್ಚಾ ಸಮಾವೇಶ
Feb 15, 2023 09:51 AM IST
ಬಿ.ವೈ.ವಿಜಯೇಂದ್ರ
Karnataka Polls: ಕೇಂದ್ರ ಮತ್ತು ರಾಜ್ಯ ನಾಯಕರು ಹಳೆ ಮೈಸೂರು ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಒತ್ತು ನೀಡಿದ್ದಾರೆ. ಹೀಗಾಗಿ ನಾವು ಯುವ ಮೋರ್ಚಾದ ಸಮಾವೇಶವನ್ನು ಮೊದಲು ಇಲ್ಲಿಂದಲೇ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಫೆ.20 ರಂದು ಮಂಡ್ಯದಲ್ಲಿ ಇಂತಹ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಬೆಂಗಳೂರು: ವಿಧಾನಸಭೆ ಚುನಾವಣಾ ತಂತ್ರದ ಭಾಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಸಲ ಹಳೆ ಮೈಸೂರು ಪ್ರಾಂತ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಇದಕ್ಕೆ ಪೂರಕವಾಗಿ ಈಗ ಫೆ.20ರಂದು ಬಿಜೆಪಿ ಯುವ ಮೋರ್ಚಾದ ಬೃಹತ್ ಸಮಾವೇಶ ಮಂಡ್ಯದಲ್ಲಿ ಆಯೋಜನೆ ಆಗಿದೆ.
ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ನೆಲೆ ಊರುವುದಕ್ಕೆ ಬೇಕಾದ ಕ್ರಮಗಳನ್ನು ಬಿಜೆಪಿ ಈಗಾಗಲೇ ತೆಗೆದುಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾರ್ವಜನಿಕ ಸಮಾವೇಶದ ಮುನ್ನುಡಿಯೂ ಸಿಕ್ಕಿದೆ.
ರಾಜ್ಯ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಕಾರಣ, ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಅಣ್ಣಾಮಲೈ ಸಹ -ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಫೆ.20ರಂದು ನಡೆಯಲಿರುವ ಬಿಜೆಪಿ ಯುವ ಮೋರ್ಚಾದ ಸಮಾವೇಶದಲ್ಲಿ ಧರ್ಮೇಂದ್ರ ಪ್ರಧಾನ್ ಭಾಗವಹಿಸುವ ನಿರೀಕ್ಷೆ ಇದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯದ ಪ್ರತಿ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಬಿಜೆಪಿ ಯುವ, ಮಹಿಳೆ, ರೈತ, ಎಸ್‌ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಮುಂತಾದ ಪಕ್ಷದ ಎಲ್ಲ ಮೋರ್ಚಾಗಳ ಸಮಾವೇಶಗಳನ್ನು ರಾಜ್ಯಾದ್ಯಂತ ಆಯೋಜಿಸಲು ಪಕ್ಷ ನಿರ್ಧರಿಸಿದೆ. ಇದಕ್ಕಾಗಿ ನನ್ನನ್ನು ಸಂಚಾಲಕನನ್ನಾಗಿ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋರ್ಚಾಗಳನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸಿ, ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿ, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುವ ಗುರಿ ಈ ನಡೆಯಲ್ಲಿ ಅಡಗಿದೆ ಎಂದು ಹೇಳಿದರು.
"ನಾವು ಸುಮಾರು 140-150 ಸ್ಥಾನಗಳನ್ನು (224 ಸದಸ್ಯ ಬಲದ ಅಸೆಂಬ್ಲಿಯಲ್ಲಿ) ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ನಾಯಕರು ಹಳೆ ಮೈಸೂರು ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಒತ್ತು ನೀಡಿದ್ದಾರೆ. ಹೀಗಾಗಿ ನಾವು ಯುವ ಮೋರ್ಚಾದ ಸಮಾವೇಶವನ್ನು ಮೊದಲು ಇಲ್ಲಿಂದಲೇ ಪ್ರಾರಂಭಿಸಲು ನಿರ್ಧರಿಸಿದ್ದೇವೆ. ಫೆಬ್ರವರಿ 20 ರಂದು ಮಂಡ್ಯದಲ್ಲಿ ಇಂತಹ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಪ್ರದೇಶದ ಜನರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲು ಧರ್ಮೇಂದ್ರ ಪ್ರಧಾನ್ ಅವರಂತಹ ಕೇಂದ್ರ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ”ಎಂದು ಅವರು ಹೇಳಿದರು.
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹಳೆ ಮೈಸೂರು ಜೆಡಿಎಸ್‌ನ ಭದ್ರಕೋಟೆ. ಅಲ್ಲಿ ಕಾಂಗ್ರೆಸ್ ಕೂಡ ಪ್ರಬಲವಾಗಿದೆ. ಈ ಎರಡೂ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಗಣನೀಯವಾಗಿ ದುರ್ಬಲವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದತ್ತ ಗಮನಹರಿಸುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ರಾಜ್ಯ ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಿದ್ದಾರೆ. ವಿಜಯೇಂದ್ರ ಅವರು 2019 ಮತ್ತು 2020 ರಲ್ಲಿ ನಡೆದ ಉಪಚುನಾವಣೆಯಲ್ಲಿ ಹಳೆ ಮೈಸೂರು ಭಾಗದ ಕೆಆರ್ ಪೇಟೆ ಮತ್ತು ಸಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಜಯೇಂದ್ರ ಈ ಹಿಂದೆ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು.