logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

Umesh Kumar S HT Kannada

May 20, 2024 01:36 PM IST

google News

ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ರಸ್ತೆಯೊಂದರಲ್ಲಿ ನೀರು ಚರಂಡಿ ರೂಪದಲ್ಲೇ ಹರಿಯುತ್ತಿತ್ತು.

  • ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಮುಂದುವರಿದಿದ್ದು, 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೆಲವೆಡೆ ನಾಶ ನಷ್ಟಗಳು ಸಂಭವಿಸಿದ್ದು, ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ಜಲಾಶಯಗಳಿಗೆ ನೀರು ಹರಿಯತೊಡಗಿದೆ. ಮಳೆಗೆ ಸಂಬಂಧಿಸಿದ ಇತ್ತೀಚಿನ 10 ಸುದ್ದಿ ಮುಖ್ಯಾಂಶಗಳು ಇಲ್ಲಿವೆ.

ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ರಸ್ತೆಯೊಂದರಲ್ಲಿ ನೀರು ಚರಂಡಿ ರೂಪದಲ್ಲೇ ಹರಿಯುತ್ತಿತ್ತು.
ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ರಸ್ತೆಯೊಂದರಲ್ಲಿ ನೀರು ಚರಂಡಿ ರೂಪದಲ್ಲೇ ಹರಿಯುತ್ತಿತ್ತು.

ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಬರಡಾದಂತೆ ಕಂಡುಬಂದಿದ್ದ ಹೊಲ ಗದ್ದೆಗಳು ನೀರಿನಿಂದ ಆವೃತವಾಗಿವೆ. ಗಾಳಿಯಿಂದಾಗಿ ಬಾಳೆ, ಅಡಕೆ, ಭತ್ತದ ಬೆಳೆ, ತರಕಾರಿ ನಾಶವಾಗಿದೆ. ಕೊಪ್ಪಳ, ಧಾರವಾಡ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ಇಬ್ಬರು ಬಾಲಕರು ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಕೆಲವು ಕಡೆ ಪ್ರಾಣಿಗಳು ಮೃತಪಟ್ಟ ಘಟನೆಗಳೂ ವರದಿಯಾಗಿವೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರು ಸುತ್ತಮುತ್ತ ಕಳೆದ ಎರಡು ದಿನಗಳ ಮಳೆಗೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಹಳ ಕಡೆ ರಸ್ತೆಗಳಲ್ಲಿ ಚರಂಡಿ ನೀರು ಹರಿದು, ರಸ್ತೆ ಹಾಳಾದ ಘಟನೆಯೂ ಆಗಿದೆ. ಅನೇಕ ಕಡೆ ರಸ್ತೆ ಗುಂಡಿಗಳು ಮತ್ತೆ ಕಂಡುಬಂದಿದ್ದು, ಸಂಚಾರ ದುಸ್ತರವಾಗಿದೆ.

ಕರ್ನಾಟಕದಲ್ಲಿ ಪೂರ್ವ ಮುಂಗಾರು; ಇತ್ತೀಚಿನ 10 ಸುದ್ದಿ ಮುಖ್ಯಾಂಶ

1) ಬೆಂಗಳೂರಿನ ಯಲಹಂಕ ಭಾಗದಲ್ಲಿ ಪೂರ್ವ ಮುಂಗಾರು ಮಳೆಯಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಿಲ್ಲಾಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಯಲಹಂಕ ನಾರ್ಥ್ ವುಡ್ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದು, ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.

2) ಬೆಂಗಳೂರಿನ ಯಲಹಂಕದ ಪುಟ್ಟೇನಹಳ್ಳಿಯಲ್ಲಿ 20ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ನಿವಾಸಿಗಳು ಪರದಾಡುವಂತಾಗಿದೆ.ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ, ಚಿಕ್ಕಬಳ್ಳಾಪುರದಲ್ಲಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

3) ಕುಷ್ಟಗಿಯ ಬಚನಾಳ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಈಶಪ್ಪ ಕಳಮಳ್ಳಿ (36) ಎಂಬುವರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಸಿಡಿಲು ಬಡಿದಿದ್ದರಿಂದ ಈಶಪ್ಪ ಕರಡಪ್ಪ ಕಲಮಳ್ಳಿ ಎಂಬ ರೈತ ಅಸುನೀಗಿದ್ದಾನೆ. ಕೊಪ್ಪಳದಲ್ಲಿ ಒಟ್ಟು ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ಧಾರವಾಡ ಜಿಲ್ಲೆಯಲ್ಲಿ ಒಬ್ಬ ಮೃತಪಟ್ಟಿದ್ದು ಅವರ ಗುರುತು ವಿವರ ಬಹಿರಂಗವಾಗಿಲ್ಲ.

4) ವಿಜಯನಗರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿಡಿಲಿಗೆ ಮೂವರು ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಹನುಮಂತಿ ನಾಯಕ ಹಾಗೂ ಪರಮಣ್ಣ ನಾಯಕ ಎಂಬುವರು ಗಾಯಗೊಂಡಿದ್ದಾರೆ. ಕರು ಮೇಯಿಸುತ್ತಿದ್ದ ರವಿ ಕರಮಡ್ಡಿ (30) ಎಂಬುವರು ಸಿಡಿಲಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

5) ಧಾರವಾಡದ ದಡ್ಡಿ ಕಮಲಾಪುರದ ಬಳಿ ಎಮ್ಮೆ ಕರುವೊಂದು ಸಿಡಿಲಿಗೆ ಬಲಿಯಾಗಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಎರಡು ಎತ್ತುಗಳು ಬಲಿಯಾಗಿವೆ.

6) ಕಳೆದ ಕೆಲವು ದಿನಗಳ ಮಳೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ನಾಶನಷ್ಟಗಳಾಗಿವೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಮಂಜು ಮುಸುಕಿದ ವಾತಾವರಣ ಇದ್ದು, ವಾಹನ ಸಂಚಾರ ಮಂದಗತಿಯಲ್ಲಿದೆ. ಬೇಸಿಗೆ ರಜೆಯ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸಂಚಾರ ದಟ್ಟಣೆ ಹೆಚ್ಚಿದೆ.

7) ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಿರುಗಾಳಿ ಮಳೆಗೆ ಹಲವೆಡೆ ನಾಶ ನಷ್ಟವಾಗಿದೆ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಸಂಜೀವಿನಿ ಶಾಲೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಇಲ್ಲಿದ್ದ ನಾಲ್ಕು ಬೈಕ್​ಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಬೋರನಹಳ್ಳಿಯಲ್ಲಿ ಗೊಬ್ಬರದ ಅಂಗಡಿಗೆ ಮೋರಿ ನೀರು ನುಗ್ಗಿ ಲಕ್ಷಾಂತರ ರೂಪಾಯಿ ರಾಸಾಯನಿಕ ಗೊಬ್ಬರ, ಸಿಮೆಂಟ್ ನೀರುಪಾಲಾಗಿದೆ. ಆಲೂರು ಗ್ರಾಮದ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸ್ವಲ್ಪದರಲ್ಲೇ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯ ಪೀಠೋಪಕರಣಗಳು ನಾಶವಾಗಿವೆ.

8) ನಿರಂತರ ಮಳೆಯ ಕಾರಣ ಕೊಡಗಿನಲ್ಲಿ ತಲಕಾವೇರಿ, ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ನೀರು ಹರಿದು ಬರುತ್ತಿದೆ. ಕೆಆರ್‌ಎಸ್‌ನ ಒಳಹರಿವು ಹೆಚ್ಚಾಗಿದೆ. ಕುಶಾಲನಗರದ ಪ್ರಮುಖ ಪ್ರವಾಸಿ ತಾಣ ದುಬಾರೆಯಲ್ಲಿ ಸ್ಟಿಲ್ ವಾಟರ್‌ರಿವರ್ಗ್ ರಾಫ್ಟಿಂಗ್‌ಗೆ ಚಾಲನೆ ಸಿಕ್ಕಿದೆ.

9) ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಡೂರು ತಾಲೂಕಿನ ಕೆಲವೆಡೆ ಮನೆಗಳು ಕುಸಿದಿವೆ. ಭದ್ರಾ ನದಿಯ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವೇದಾವತಿಯ ಒಡಲು ತುಂಬಿ ಹರಿದ ಪರಿಣಾಮ  ಕೆಲ್ಲೋಡು ಬ್ಯಾರೆಜ್ ಭರ್ತಿಯಾಗಿದೆ.

10) ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಭಾರಿ ಮಳೆಯಾಗಿದೆ. ಕಳೆದ 2 ದಿನದಿಂದ ಭಾರಿ ಮಳೆ ಹಿನ್ನೆಲೆ ಕೆಲ್ಲೋಡು ಸೇತುವೆ ಭರ್ತಿಯಾಗಿ ಹರಿಯುತ್ತಿದೆ. ಇದರಿಂದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಯತೊಡಗಿದೆ. ಮಳೆಯಿಂದ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮಂಡ್ಯ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಗಾಳಿ ಮಳೆಗೆ ತೆಂಗಿನ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ಅವಾಂತರ ತಂದೊಡ್ಡಿದೆ.

ಮುಂದಿನ 3 ದಿನ ದಕ್ಷಿಣ ಒಳನಾಡಿನ 6 ಜಿಲ್ಲೆ, ಕರಾವಳಿಯ 2 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌

ಕರ್ನಾಟಕದ ದಕ್ಷಿಣ ಒಳನಾಡಿನ ಆರು ಜಿಲ್ಲೆಗಳು, ಕರಾವಳಿಯ ಎರಡು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮುಂದಿನ ಮೂರು ದಿನ 11ರಿಂದ 20 ಸೆಂ.ಮೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಉಳಿದಂತೆ ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ6 ರಿಂದ 11 ಸೆಂ.ಮೀವರೆಗೆ ಮಳೆಯಾಗುವ ಲಕ್ಷಣ ಇದೆ. ಆದುದರಿಂದ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ