logo
ಕನ್ನಡ ಸುದ್ದಿ  /  ಕರ್ನಾಟಕ  /  Krs Kabini Reservoirs: ತುಂಬಿದ ಕೆಆರ್‌ಎಸ್‌, ಕಬಿನಿಗೆ ಇಂದು ಸಿಎಂ ಬಾಗಿನ, ಎಷ್ಟಿದೆ ಎರಡು ಜಲಾಶಯಗಳ ನೀರಿನ ಹರಿವು

KRS Kabini Reservoirs: ತುಂಬಿದ ಕೆಆರ್‌ಎಸ್‌, ಕಬಿನಿಗೆ ಇಂದು ಸಿಎಂ ಬಾಗಿನ, ಎಷ್ಟಿದೆ ಎರಡು ಜಲಾಶಯಗಳ ನೀರಿನ ಹರಿವು

Umesha Bhatta P H HT Kannada

Jul 29, 2024 09:47 AM IST

google News

ತುಂಬಿದ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ಸೋಮವಾರ ಬಾಗಿನ ಸಲ್ಲಿಸಲಾಗುತ್ತದೆ.

    • Karnataka dams ಈಗಾಗಲೇ ಭರ್ತಿಯಾಗಿರುವ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸೋಮವಾರ ನಿಗದಿಯಾಗಿದೆ.
ತುಂಬಿದ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ಸೋಮವಾರ ಬಾಗಿನ ಸಲ್ಲಿಸಲಾಗುತ್ತದೆ.
ತುಂಬಿದ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು, ಸೋಮವಾರ ಬಾಗಿನ ಸಲ್ಲಿಸಲಾಗುತ್ತದೆ.

ಮೈಸೂರು: ಕಳೆದ ವರ್ಷ ತುಂಬದೇ ಸೊರಗಿದ್ದ ಕೃಷ್ಣರಾಜ ಸಾಗರ ಜಲಾಶಯ( KRS Dam) ಈ ಬಾರಿ ಜುಲೈನಲ್ಲಿಯೇ ತುಂಬಿ ನಳ ನಳಿಸುತ್ತಿದೆ. ಅಷ್ಟೇ ಅಲ್ಲದೇ ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು ಈ ಬಾರಿ ಹೊರ ಹೋಗಿದೆ. ಇದರೊಟ್ಟಿಗೆ ಹಿಂದಿನ ವರ್ಷ ಒಂದೇ ಬಾರಿ ತುಂಬಿದ್ದ ಕಬಿನಿ ಜಲಾಶಯವೂ( Kabini Dam) ಈ ಬಾರಿ ಜೂನ್‌ ಅಂತ್ಯಕ್ಕೆ ಭರ್ತಿಯಾಗಿ ಕರ್ನಾಟಕ ಸರ್ಕಾರದ ತಮಿಳುನಾಡಿಗೆ ನೀರು ಹರಿಸುವ ಹೊರೆಯನ್ನು ಕಡಿಮೆ ಮಾಡಿದೆ. ಈ ಎರಡು ಜಲಾಶಯಗಳು ಈ ಬಾರಿ ಬೇಗನೇ ಭರ್ತಿಯಾಗಿರುವ ಜತೆಗೆ ಹೆಚ್ಚಿನ ಒಳ ಹರಿವು ಹಾಗೂ ಹೊರ ಹರಿವನ್ನು ಹೊಂದಿರುವ ನಡುವೆಯೇ ಕರ್ನಾಟಕ ಸರ್ಕಾರವೂ ಸಂತಸದಿಂದಲೇ ಬಾಗಿನ ಅರ್ಪಿಸಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜುಲೈ 29 ರ ಸೋಮವಾರ ಎರಡೂ ಜಲಾಶಯಗಳಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ.

ಕೆಆರ್‌ಎಸ್‌ ಭಾರೀ ನೀರು

ಕೊಡಗಿನ ಭಾಗದಲ್ಲಿ ಮಳೆಯಾಗಿರುವ ಜತೆಗೆ ಹಾರಂಗಿ ಹಾಗೂ ಹೇಮಾವತಿ ಜಲಾಶಯದಿಂದಲೂ ನೀರು ಹರಿಸುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಸೋಮವಾ ಬೆಳಿಗ್ಗೆಯೂ ಉತ್ತಮ ಒಳ ಹರಿವು ಇದೆ.ಜಲಾಶಯಕ್ಕೆ 57012 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು. ಹೊರ ಹರಿವಿನ ಪ್ರಮಾಣವನ್ನು 33462 ಕ್ಯೂಸೆಕ್‌ಗೆ ತಗ್ಗಿಸಲಾಗಿದೆ. ಜಲಾಶಯವು ಗರಿಷ್ಠ ಮಟ್ಟ 124.80 ಅಡಿ ತಲುಪಿದೆ. ಜಲಶಯದಲ್ಲಿ 49.452 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. ಎರಡು ದಿನದ ಹಿಂದೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಹೊರ ಹರಿವನ್ನು ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣಕ್ಕೆ ಏರಿಕೆ ಮಾಡಲಾಗಿತ್ತು. ಈಗ ಆ ಪ್ರಮಾಣ ತಗ್ಗಿದೆ. ಇನ್ನೂ ಎರಡು ತಿಂಗಳು ಮಳೆಗಾಲ ಇರುವುದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು ಮತ್ತಷ್ಟು ನೀರನ್ನು ಹೊರ ಬಿಡುವ ಸಾಧ್ಯತೆಗಳಿವೆ. ಕಳೆದ ವರ್ಷ ಜಲಾಶಯ ಮಳೇ ಕೊರತೆಯಿಂದ ತುಂಬಲೇ ಇಲ್ಲ. ಈ ಬಾರಿ ಬೇಗನೇ ತುಂಬಿದೆ. ಬಾಗಿನ ಅರ್ಪಣೆಯೂ ಬೇಗನೇ ಆಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯವೂ ಬಹುತೇಕ ಭರ್ತಿಯಾಗಿದೆ. ಜಲಾಶಯದ ನೀರನ ಮಟ್ಟವು 2282.51 ಅಡಿಯಷ್ಟಿದೆ. ಒಳ ಹರಿವಿನ ಪ್ರಮಾಣವು 22,334 ಕ್ಯೂಸೆಕ್‌ ಇದ್ದರೆ, ಹೊರ ಹರಿವನ್ನು 8,000 ಕ್ಯೂಸೆಕ್‌ ಗೆ ಇಳಿಕೆ ಮಾಡಲಾಗಿದೆ. ಜಲಾಶಯದಲ್ಲಿ 18.55 ಟಿಎಂಸಿ ನೀರು ಸಂಗ್ರಹವಾಗಿದೆ. ಕೇರಳದಲ್ಲಿ ಮಳೆ ತಗ್ಗಿರುವುದರಿಂದ ಒಳ ಹರಿವು ಕಡಿಮೆಯಾಗಿದೆ. ಮತ್ತೆ ಮಳೆ ಶುರುವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ಸಿಎಂ ಡಿಸಿಎಂ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಜುಲೈ 29 ರಂದು ಸೋಮವಾರ ಮಂಡ್ಯ, ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಅವರು ಬೆಳಿಗ್ಗೆ 10.30 ಗಂಟೆಗೆ ರಸ್ತೆ ಮೂಲಕ ಕೆ.ಆರ್.ಎಸ್ ಗೆ ಆಗಮಿಸಿ ಕಾವೇರಿ ನೀರಾವರಿ ನಿಗಮ ನಿಯಮಿತ ವತಿಯಿಂದ ಏರ್ಪಡಿಸಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಯಶವು ತುಂಬಿರುವ ಶುಭ ಸಂದರ್ಭದಲ್ಲಿ ಕೃಷ್ಣರಾಜಸಾಗರ ಜಲಾಯಶಯದ ಶ್ರೀ ಕಾವೇರಿ ಪ್ರತಿಮೆಯ ಬಳಿ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ನಿಂದ ರಸ್ತೆಯ ಮೂಲಕ ಮೈಸೂರು ಜಿಲ್ಲೆಗೆ ತೆರಳಲಿದ್ದಾರೆ. ಮಧ್ಯಾಹ್ನ 3ಕ್ಕೆ ಎಚ್‌ಡಿಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸುವರು ಎಂದು ಪ್ರಕಟಣೆ ತಿಳಿಸಿದೆ.

ಕೆ.ಆರ್.ಎಸ್ ಗೆ ಸಿಎಂ ಬಾಗಿನ: ಬಿಗಿ ಭದ್ರತೆ

ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ‌ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್. ಎಸ್ ಡ್ಯಾಂಗೆ ಬಾಗಿನ ಅರ್ಪಿಸಲಿದ್ದು ಇದಕ್ಕಾಗಿ ಸಕಲ ಸಿದ್ದತೆ ಆಗಿದೆ. ಈಗಾಗಲೇ ಜಲಾಶಯ 124 ಅಡಿ ತುಂಬಿದ್ದು, ಈ ಹಿನ್ನಲೆಯಲ್ಲಿ ಡ್ಯಾಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿವರ್ಷ ಕಾವೇರಿ ತುಂಬುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿಯಾದವರು ಬಂದು ಬಾಗಿನ ಅರ್ಪಿಸುವ ಸಂಪ್ರದಾಯದಂತೆ ಸಿಎಂ ಸಿದ್ದರಾಮಯ್ಯ ಇಂದು ಕಾವೇರಿ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಕೆ.ಆರ್.ಎಸ್ ಗೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ