ಅವಲಂಬಿತರ ಆಸರೆಗೆ ಒದಗಿದ ಅಪಘಾತ ವಿಮೆ: ನಂಬಿದವರ ಭವಿಷ್ಯಕ್ಕೆ ಇರಲಿ ವಿಮೆಯ ಆಸರೆ
Published Jun 16, 2025 06:02 PM IST
ಅವಲಂಬಿತರ ಆಸರೆಗೆ ಒದಗಿದ ಅಪಘಾತ ವಿಮೆ: ನಂಬಿದವರ ಭವಿಷ್ಯಕ್ಕೆ ಇರಲಿ ವಿಮೆಯ ಆಸರೆ
- ದೊಡ್ಡಬಳ್ಳಾಪುರದ ಕರ್ಣಾಟಕ ಬ್ಯಾಂಕ್‌ನಲ್ಲಿ ಇತ್ತೀಚಿಗೆ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಸದ್ದುಗದ್ದಲವಿಲ್ಲದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ವಿವಿಧ ವ್ಯವಹಾರಗಳಿಗೆಂದು ಬಂದಿದ್ದ ಗ್ರಾಹಕರೇ ಅತಿಥಿಗಳು. ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ರೀತಿಯ ಧನ್ಯತಾ ಭಾವದಲ್ಲಿದ್ದರು. ಕೇವಲ ಗ್ರಾಹಕ-ಸಿಬ್ಬಂದಿ ಸಂಬಂಧಕ್ಕೆ ಹೊರತಾದ ವಾತಾವರಣ ಅಲ್ಲಿತ್ತು. ವಿಷಯ ಇಷ್ಟೇ.

ದೊಡ್ಡಬಳ್ಳಾಪುರದ ಕರ್ಣಾಟಕ ಬ್ಯಾಂಕ್‌ನಲ್ಲಿ ಇತ್ತೀಚಿಗೆ ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಸದ್ದುಗದ್ದಲವಿಲ್ಲದ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ವಿವಿಧ ವ್ಯವಹಾರಗಳಿಗೆಂದು ಬಂದಿದ್ದ ಗ್ರಾಹಕರೇ ಅತಿಥಿಗಳು. ಸಿಬ್ಬಂದಿ ಮತ್ತು ಅಧಿಕಾರಿಗಳು ಒಂದು ರೀತಿಯ ಧನ್ಯತಾ ಭಾವದಲ್ಲಿದ್ದರು. ಕೇವಲ ಗ್ರಾಹಕ-ಸಿಬ್ಬಂದಿ ಸಂಬಂಧಕ್ಕೆ ಹೊರತಾದ ವಾತಾವರಣ ಅಲ್ಲಿತ್ತು. ವಿಷಯ ಇಷ್ಟೇ.
ಬ್ಯಾಂಕಿನ ಗ್ರಾಹಕರಾದ ಎಚ್.ಪಿ.ಶ್ಯಾಮ ಪ್ರಸಾದ್ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಕೆಬಿಎಲ್ ಸುರಕ್ಷಾ ವಿಮಾ ಕಂತನ್ನೂ ಕಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿಮಾ ಮೊತ್ತವಾದ ಹತ್ತು ಲಕ್ಷ ರೂಪಾಯಿ ಮತ್ತು ಅವರ ಮಗುವಿನ ವಿದ್ಯಾಭ್ಯಾಸಕ್ಕಾಗಿ ಹೆಚ್ಚುವರಿಯಾಗಿ ಹದಿನೈದು ಸಾವಿರ ರೂಪಾಯಿ ಮೊತ್ತವನ್ನು ನಾಮನಿರ್ದೇಶನ ಮಾಡಿದ್ದ ಶಿವರುದ್ರಮ್ಮ ಅವರಿಗೆ ನೀಡಲಾಯಿತು.
ವಿಮಾ ಮೊತ್ತ ಮತ್ತು ಶಿಕ್ಷಣ ನೆರವಿನ ಚೆಕ್‌ಗಳನ್ನು ಕರ್ಣಾಟಕ ಬ್ಯಾಂಕ್‌ನ ತುಮಕೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ರಾಮಶೇಷು ಅವರು ಹಸ್ತಾಂತರಿಸಿದರು. ವಿಮೆಯ ಅಗತ್ಯ ಮತ್ತು ಸೂಕ್ತ ಕಾಲದಲ್ಲಿ ವಿಮಾ ಮೊತ್ತವನ್ನು ಸಮರ್ಪಕ ರೀತಿಯಲ್ಲಿ ನಾಮಿನಿಯಾದವರಿಗೆ ತಲುಪುವಂತೆ ಮಾಡುವ ವ್ಯವಸ್ಥೆಯ ಅಗತ್ಯದ ಬಗ್ಗೆಯೂ ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಯಿತು.
ಏನಿದು ಕೆಬಿಎಲ್ ಸುರಕ್ಷಾ?
ಕರ್ಣಾಟಕ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ (ಎಸ್‌ಬಿ ಅಕೌಂಟ್) ಇರುವ ಎಲ್ಲ ಗ್ರಾಹಕರಿಗೂ ಲಭ್ಯವಿರುವ ವೈಯಕ್ತಿಕ ಅಪಘಾತ ವಿಮಾ ಯೋಜನೆ (ಪರ್ಸನಲ್ ಆಕ್ಸಿಡೆಂಟ್ ಇನ್‌ಶುರೆನ್ಸ್) ಕೆಬಿಎಲ್ ಸುರಕ್ಷಾ. ಅಪಘಾತದಿಂದ ಸಾವು ಸಂಬಂಧಿಸಿದರೆ ನಾಮನಿರ್ದೇಶನ (ನಾಮಿನಿ) ಮಾಡಿರುವವರಿಗೆ ವಿಮಾ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತದೆ. ವಿಮೆ ಮಾಡಿಸಿದವರ ಕುಟುಂಬದಲ್ಲಿ ವಿದ್ಯಾರ್ಥಿಯಿದ್ದರೆ ಅವರ ವಿದ್ಯಾಭ್ಯಾಸಕ್ಕಾಗಿಯೂ ಹೆಚ್ಚುವರಿ ಮೊತ್ತವನ್ನು ನೀಡಲಾಗುತ್ತದೆ.
ಈ ಪಾಲಿಸಿ ಖರೀದಿಸಿದವರಿಗೆ ವೈದ್ಯರಿಂದ ದೂರವಾಣಿ ಸಮಾಲೋಚನೆ (ಟೆಲಿ ಕನ್ಸಲ್‌ಟೇಶನ್) ಸೌಲಭ್ಯವೂ ಇದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಗರಿಷ್ಠ ಮಿತಿಯನ್ನು ಬ್ಯಾಂಕ್ ವಿಧಿಸಿಲ್ಲ. ಇದರ ಜೊತೆಗೆ ಈ ಪಾಲಿಸಿ ಖರೀದಿಸಿದವರಿಗೆ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಯ ಸೌಲಭ್ಯ ಇರುತ್ತದೆ. ಇದರಲ್ಲಿ ಪಿತ್ತಜನಕಾಂಗದ ಕಾರ್ಯಕ್ಷಮತೆ, ಮೂತ್ರ ಪರೀಕ್ಷೆ, ಮಧುಮೇಹ, ಮೂತ್ರಪಿಂಡದ ಕಾರ್ಯನಿರ್ವಹಣೆ, ಥೈರಾಯ್ಡ್ ಸೇರಿದಂತೆ ಹಲವು ಪರೀಕ್ಷೆಗಳು ಸೇರಿವೆ.
ಯಾರು ಖರೀದಿಸಬಹುದು?
ಕೆಬಿಎಲ್ ಸುರಕ್ಷಾ ಪಾಲಿಸಿಯನ್ನು 18 ರಿಂದ 80 ವರ್ಷ ವಯೋಮಾನದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಉಳಿತಾಯ ಖಾತೆ ಗ್ರಾಹಕರು ಖರೀದಿಸಬಹುದು. ಪಾಲಿಸಿ ಖರೀದಿಸಿದವರು ದುರದೃಷ್ಟವಶಾತ್ ಅಪಘಾತದಿಂದ ಮೃತಪಟ್ಟರೆ ನಾಮಿನಿದಾರರಿಗೆ 10 ಲಕ್ಷ ರೂಪಾಯಿ ವಿಮಾ ಮೊತ್ತ, ಮಕ್ಕಳ ವಿದ್ಯಾಭ್ಯಾಸಕ್ಕೆ 15 ಸಾವಿರ ಮೊತ್ತ ಸಿಗುತ್ತದೆ. ಈ ಪಾಲಿಸಿಯನ್ನು ವರ್ಷಕ್ಕೆ ಒಮ್ಮೆ ನವೀಕರಿಸಬೇಕು.
ಕೆಬಿಎಲ್ ಸುರಕ್ಷಾ ಪ್ಲಾನ್-ಎ ಮತ್ತು ಪ್ಲಾನ್-ಬಿ ಎನ್ನುವ ಎರಡು ಬಗೆಯ ಪಾಲಿಸಿಗಳು ಲಭ್ಯವಿವೆ. ಪ್ಲಾನ್-ಎ ಪಾಲಿಸಿಗೆ ರೂ 5 ಲಕ್ಷ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಇದರ ಪ್ರೀಮಿಯಂ ರೂ 200, ಪ್ಲಾನ್-ಬಿ ವಿಮೆಗೆ ರೂ 10 ಲಕ್ಷ ವಿಮಾ ಮೊತ್ತ ಸಿಗಲಿದೆ. ಇದರ ಪ್ರೀಮಿಯಂ ರೂ 369. ದೊಡ್ಡಬಳ್ಳಾಪುರ ಶಾಖೆಯ ಪಾಲಿಸಿದಾರರು ಪ್ಲಾನ್-ಬಿ ವಿಮೆ ಖರೀದಿಸಿದ್ದರು. ಇದರ ಪರಿಹಾರ ಮೊತ್ತವಾದ 10.15 ಲಕ್ಷ (10,15,000/-) ಮೊತ್ತವನ್ನು ನಾಮಿನಿದಾರರಾದ ಶಿವರುದ್ರಮ್ಮ ಅವರಿಗೆ ಕರ್ಣಾಟಕ ಬ್ಯಾಂಕ್ ಪಾವತಿ ಮಾಡಿದೆ.
'ಅಪಘಾತ ವಿಮೆಯು ಎಲ್ಲರಿಗೂ ಅಗತ್ಯವಾದುದು. ಗ್ರಾಹಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಬ್ಯಾಂಕ್ ಸಿಬ್ಬಂದಿ ಮಾಡುತ್ತಿದ್ದಾರೆ. ನಮ್ಮ ಆಪ್ತರ ಸಂಕಷ್ಟ ಕಾಲದಲ್ಲಿ ವಿಮೆಯ ಮೊತ್ತ ಅವರ ನೆರವಿಗೆ ಬರುತ್ತದೆ. ವಿಮೆ ಮಾಡಿಸುವ ವಿಚಾರವನ್ನು ಯಾರೂ ನಿರ್ಲಕ್ಷಿಸಬಾರದು' ಎಂದು ಶಾಖಾ ವ್ಯವಸ್ಥಾಪಕರಾದ ಭಾಸ್ಕರ್ ರೆಡ್ಡಿ ತಿಳಿಸಿದರು.