Karnataka Weather: ತಿಂಗಳ ಮುಂಚೆಯೇ ಚಳಿ ಅನುಭವ; ಬೆಂಗಳೂರು, ಬೆಳಗಾವಿ, ಶಿವಮೊಗ್ಗದಲ್ಲಿ ಉಷ್ಣಾಂಶ ಕುಸಿತ, ಮಂಡ್ಯ, ಹಾಸನದಲ್ಲಿ ಏರಿಕೆ !
Aug 31, 2024 07:09 AM IST
ಬೆಳಿಗ್ಗೆಗೆ ಚಳಿಯ ದಟ್ಟ ಅನುಭವ ಕರ್ನಾಟಕದ ಹಲವು ಕಡೆ ಆಗುತ್ತಿದೆ.
- Bangalore Temperature ಬೆಂಗಳೂರಿನಲ್ಲಿ ಈಗಲೇ ಚಳಿ ಅನುಭವ ದಟ್ಟವಾಗಿದೆ. ಬೆಳಗಾವಿ, ಶಿವಮೊಗ್ಗ, ಮೈಸೂರಲ್ಲಿ ಚಳಿಯ ಸನ್ನಿವೇಶ ಕಂಡು ಬಂದಿದೆ.
ಬೆಂಗಳೂರು: ಮುಂಗಾರು ಹಾಗೂ ನೈರುತ್ಯ ಮಳೆಯ ನಾಲ್ಕು ತಿಂಗಳ ಅವಧಿಯಲ್ಲಿ ಮೂರು ತಿಂಗಳು ಈಗಾಗಲೇ ಮುಗಿದೇ ಹೋಯಿತು. ಇನ್ನೇನಿದ್ದರೂ ಸೆಪ್ಟಂಬರ್ ತಿಂಗಳು ಮಾತ್ರ. ಸೆಪ್ಟಂಬರ್ ತಿಂಗಳಲ್ಲಿ ಮಳೆ ಹಾಗೂ ಚಳಿಯ ಅನುಭವ( Winter) ದಟ್ಟವಾಗಿಯೇ ಇರುತ್ತದೆ. ಈ ಅನುಭವ ಆಗಸ್ಟ್ ಅಂತ್ಯದಲ್ಲೇ ಕಾಣುತ್ತಿವೆ. ಬೆಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ ಸಹಿತ ಹಲವು ಜಿಲ್ಲೆಗಳಲ್ಲಿ ಈಗಲೇ ಚಳಿ ಶುರುವಾಗಿದೆ. ಸಾಮಾನ್ಯ ಗರಿಷ್ಠ ಉಷ್ಣಾಂಶಕ್ಕಿಂತ ಮೂರ್ನಾಲ್ಕು ಡಿಗ್ರಿ ಕಡಿಮೆಯಾಗಿದ್ದು, ಬೆಳ್ಳಂಬೆಳಿಗ್ಗೆ ಚಳಿ ಗಾಳಿಯೊಂದಿಗೆ ದಿನ ಆರಂಭಿಸುವ ವಾತಾವರಣವಿದೆ. ಸಂಜೆ ನಂತರವೂ ಚಳಿಯ ಅನುಭವ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತ ಕಂಡು ಬಂದರೆ, ಕೆಲವೆಡೆ ಸಾಮಾನ್ಯವಾಗಿದೆ. ಮಂಡ್ಯ, ಹಾಸನ ಸಹಿತ ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆ ಕಂಡಿದೆ.
ಬೆಂಗಳೂರಲ್ಲಿ ಹೇಗಿದೆ
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ದೈನಂದಿನ ವರದಿ ಪ್ರಕಾರ, ಬೆಂಗಳೂರಿನ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಕುಸಿತ ಕಂಡಿದೆ.
ಬೆಂಗಳೂರು ನಗರದಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್, ಇದು ಸಾಮಾನ್ಯಕ್ಕಿಂತ -2.3 ಡಿಗ್ರಿ ಸೆಲ್ಸಿಯಸ್ ಕಡಿಮೆ. ಅದೇ ರೀತಿ ಬೆಂಗಳೂರು ಎಚ್‌ಎಎಲ್ ವಿಮಾಣ ನಿಲ್ದಾನ ಪ್ರದೇಶದಲ್ಲಿ26 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ಇದು ಕೂಡ -2.5 ಡಿಗ್ರಿ ಸೆಲ್ಸಿಯಸ್ ಕಡಿಮೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದರೆ, ಇದೂ ಕೂಡ -1.8 ಡಿಗ್ರಿ ಸೆಲ್ಸಿಯಸ್ ಕಡಿಮೆಯೇ.
ಬೆಂಗಳೂರು ನಗರದಲ್ಲಿ ಹಿಂದಿನ ಬಾರಿಗಿಂತ ಈ ಬಾರಿ ಚಳಿಯ ವಾತಾವರಣ ಕೊಂಚ ಹೆಚ್ಚು ಇರುವುದು ಈಗಲೇ ಕಂಡು ಬರುತ್ತಿದೆ. ಕನಿಷ್ಠ ಉಷ್ಣಾಂಶದಲ್ಲೂ ಕೊಂಚ ಇಳಿಕೆಯಾಗಿದೆ. ಈ ಬಾರಿ ಚಳಿಗಾಲದಲ್ಲಿ ಚಳಿ ಹೆಚ್ಚೇ ಇರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಬೆಳಗಾವಿ, ಶಿವಮೊಗ್ಗ
ಪಶ್ಚಿಮ ಘಟ್ಟಗಳ ಸೆರಗಿನ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲೂ ಚಳಿ ಅನುಭವವಿದೆ. ಬೆಳಗಾವಿ ನಗರದಲ್ಲಿ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಇದು ಸಾಮಾನ್ಯಕ್ಕಿಂತ 2.2 ಡಿಗ್ರಿ ಕಡಿಮೆ. ಬೆಳಗಾವಿ ವಿಮಾನ ನಿಲ್ದಾನ ಪ್ರದೇಶದಲ್ಲಿ 27.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಶಿವಮೊಗ್ಗದಲ್ಲಿ24.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದ್ದರೆ, ಇದು -4.3 ಡಿಗ್ರಿಯಷ್ಟು ಸಾಮಾನ್ಯಕ್ಕಿಂತ ಕಡಿಮೆ. ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿ 24.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಶುಕ್ರವಾರ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ 25.4 ಡಿಗ್ರಿ ಸೆಲ್ಸಿಯಸ್ ಇದ್ದರೆ ಇಲ್ಲಿಯೂ -0.81 ರಷ್ಟು ಸಾಮಾನ್ಯಕ್ಕಿಂತ ಇಳಿಕೆಯಾಗಿದೆ. ಚಿಂತಾಮಣಿಯಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಇದ್ದರೂ ಅದೂ -1.3 ಡಿಗ್ರಿ ಕುಸಿತವೇ.
ಮೈಸೂರಿನಲ್ಲಿ 28.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ -0.2ರಷ್ಟು ಕಡಿಮೆಯಿದೆ.
ಉತ್ತರದಲ್ಲೂ ಕುಸಿತ
ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಧಾರವಾಡ ಜಿಲ್ಲೆಗಳಲ್ಲೂ ಉಷ್ಣಾಂಶ ಕೊಂಚ ಕುಸಿತವಾಗಿದೆ. ವಿಜಯಪುರದಲ್ಲಿ 30.4 ಡಿಗ್ರಿ ಸೆಲ್ಸಿಯಸ್ ಇದ್ದರೆ ಸಾಮಾನ್ಯಕ್ಕಿಂತ -0.21 ಡಿಗ್ರಿ ಕಡಿಮೆಯಿದೆ. ಧಾರವಾಡದಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಸಾಮಾನ್ಯಕ್ಕಿಂತ ಕುಸಿತ ಪ್ರಮಾಣ -0.3 ಡಿಗ್ರಿ ಸೆಲ್ಸಿಯಸ್.
ಉತ್ತರ ಕರ್ನಾಟಕದ ಬೀದರ್ ನಲ್ಲಿ 30.2 ಡಿಗ್ರಿ, ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ 33 ಡಿಗ್ರಿ, ರಾಯಚೂರಿನಲ್ಲಿ 32.4 ಡಿಗ್ರಿ, ಕೊಪ್ಪಳದಲ್ಲಿ 31.8 ಡಿಗ್ರಿ, ಹಾವೇರಿಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.
ಹಾಸನ ಮಂಡ್ಯದಲ್ಲಿ ಏರಿಕೆ
ಆದರೆ ಮಲೆನಾಡಿನ ಹಾಸನ, ಮೈಸೂರು ಸೀಮೆಯ ಮಂಡ್ಯದಲ್ಲಿ ಈಗ ಕೊಂಚ ಹೆಚ್ಚೇ ಉಷ್ಣಾಂಶವಿದೆ. ಹಾಸನದಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ, ಇದು ಇಲ್ಲಿನ ಸಾಮಾನ್ಯ ಉಷ್ಣಾಂಶಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಅಧಿಕ. ಅದೇ ರೀತಿ ಮಂಡ್ಯದಲ್ಲಿ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಇದು ಸಾಮಾನ್ಯಕ್ಕಿಂತ 3.4 ಡಿಗ್ರಿ ಅಧಿಕ.
ಚಿತ್ರದುರ್ಗ29.4 ಡಿಗ್ರಿ, ದಾವಣಗೆರೆ 29 ಡಿಗ್ರಿ, ಉಷ್ಣಾಂಶವನ್ನು ದಾಖಲಿಸಿವೆ. ಮಡಿಕೇರಿ 25.2 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 28.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದು, ಇಲ್ಲಿಯೂ ಚಳಿಯ ಅನುಭವವಾಗುತ್ತಿದೆ
ಕರಾವಳಿಯಲ್ಲಿ ಹೇಗಿದೆ
ಕರಾವಳಿಯ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಉಷ್ಣಾಂಶ ಕೊಂಚ ಇಳಿಕೆಯಾಗಿದೆ. ಇಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದ್ದರೆ, -0.6 ರಷ್ಟು ಕುಸಿತ ಕಂಡಿದೆ. ಆದರೆ ಪಣಂಬೂರಲ್ಲಿ 29.2 ಡಿಗ್ರಿ,. ಕಾರವಾರದಲ್ಲಿ 32.2 ಡಿಗ್ರಿ, ಶಿರಾಲಿಯಲ್ಲಿ 31.8 ಡಿಗ್ರಿ, ಹೊನ್ನಾವರದಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಶಿರಾಲಿಯ ಕನಿಷ್ಠ ಉಷ್ಣಾಂಶದಲ್ಲಿ 6 ಡಿಗ್ರಿ ಸೆಲ್ಸಿಯಸ್ ಕುಸಿತದೊಂದಿಗೆ 17.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ವಿಶೇಷ.