ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ; ಶಾಖಾಘಾತದಿಂದ ಶರೀರ ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆ ಕೊಟ್ಟಿರುವ ಸಲಹೆಗಳಿವು -Karnataka Heat Wave
Apr 06, 2024 10:13 AM IST
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 6 ರವರೆಗೆ ಬಿಸಿಗಾಳಿ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
- ಕರ್ನಾಟಕದಲ್ಲಿ ಮುಂದಿನ ಕೆಲ ದಿನಗಳ ಮಟ್ಟಿಗೆ ಬಿಸಿಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಟ್ ವೇವ್‌ನಿಂದ ಪಾರಾಗಲು ಸರ್ಕಾರ ಜನರಿಗೆ ಒಂದಿಷ್ಟು ಸಲಹೆಗಳನ್ನು ನೀಡಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಸುಡು ಬಿಸಿಲಿಗೆ ತತ್ತರಿಸಿ ಹೋಗಿರುವ ಕರ್ನಾಟಕದ ಜನತೆ ಬಿಸಿಗಾಳಿಯನ್ನು (Heat Wave) ಎದುರಿಸುವಂತಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿಯ ವಾತಾವರಣ ಏಪ್ರಿಲ್ 6 (ಶನಿವಾರ) ರವರೆಗೆ ಇರಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಶಾಖದ ಅಲೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಒಳನಾಡಿನ ಕರ್ನಾಟಕದ ಪ್ರದೇಶದ ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ಬಿಸಿಗಾಳಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಈ ನಡುವೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ರಾಜ್ಯದ ಜನತೆಗೆ ಹಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಜನರು ಆದಷ್ಟು ಮನೆಯೊಳಗೆ ಇರಬೇಕೆಂದು ಸಲಹೆ ನೀಡಿದೆ. ನಿರ್ಜಲೀಕರಣಕ್ಕೆ ಪಾರಾಗಲು ಸಾಕಷ್ಟು ನೀರು ಕುಡಿಯಬೇಕು, ಹೆಚ್ಚಾಗಿ ದ್ರವ ರೂಪದ ಆಹಾರವನ್ನು ಸೇರಿಸಬೇಕು. ನಿರ್ಜಲೀಕರಣಕ್ಕೆ ಕಾರಣವಾಗುವ ಆಲ್ಕೋಹಾಲ್, ಟೀ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಉಳಿದು ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕೆಂದು ಸೂಚಿಸಿದೆ.
ತಿಳಿ ಬಣ್ಣದ ಹಾಗೂ ಹತ್ತಿ ಬಟ್ಟೆಗಳನ್ನು ಧರಿಸುವಂತೆಯೂ ಕೆಎಸ್‌ಡಿಎಂಎ ಶಿಫಾರಸು ಮಾಡಿದೆ. ಬಿಸಿಲಿನ ತಾಪದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೊರಗಡೆ ಹೋದಾಗ ಸನ್‌ಗ್ಲಾಸ್, ಛತ್ರಿ ಅಥವಾ ಟೋಪಿಗಳನ್ನು ಧರಿಸಬೇಕು. ತಲೆತಿರುಗುವಿಕೆ ಅಥವಾ ಅನಾರೋಗ್ಯದ ಅನುಭವವಾದರೆ ತಡಮಾಡದೆ ವೈದ್ಯರನ್ನು ಸಲಹೆಗಳನ್ನು ಪಡೆಯಬೇಕು. ಸಾಕುಪ್ರಾಣಿಗಳ ರಕ್ಷಣೆಯೂ ಆದ್ಯತೆ ನೀಡಬೇಕೆಂದು ಹೇಳಿದ್ದು, ಸಾಕುಪ್ರಾಣಿಗಳು ನೆರಳಿನಲ್ಲಿ ಇರುವಂತೆ ನೋಡಿಕೊಳ್ಳಿ. ಅವುಗಳಿಗೆ ಅಗತ್ಯಕ್ಕೆ ತಕ್ಕಷ್ಟು ಕುಡಿಯುವ ನೀರನ್ನು ನೀಡಬೇಕೆಂದು ಸಲಹೆ ನೀಡಿದೆ.
ಪ್ರಸ್ತುತ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿನ ಕೆಲವು ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುತ್ತಿದೆ. ಇದು ಮನುಷ್ಯರು ಹಾಗೂ ಪ್ರಾಣಿಗಳಿಗೆ ಹಾನಿಕಾರಕವಾಗಿದೆ. ಮುಂದಿನ ದಿನಗಳಲ್ಲಿ ಬಿಸಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಐಡಿಎಂ ಎಚ್ಚರಿಕೆ ನೀಡಿದೆ. 2024ರ ಏಪ್ರಿಲ್-ಮೇ ಅವಧಿಯಲ್ಲಿ ಕರ್ನಾಟಕದ ಹವಾಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಮುನ್ಸೂಚನೆಯಂತೆ ರಾಜ್ಯಾದ್ಯಂತ 2 ರಿಂದ 14 ದಿನಗಳವರೆಗೆ ಸಾಮಾನ್ಯ ಬಿಸಿಯನ್ನು ಮೀರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಏಪ್ರಿಲ್ 7 ರಿಂದ 10 ವರೆಗೆ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ
ಮುಂದಿನ ಮೂರು ದಿನಗಳಲ್ಲಿ (ಏಪ್ರಿಲ್ 6 ರಿಂದ 8 ರವರೆಗೆ) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮೇಲುಗೈ ಸಾಧಿಸುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಮುಂದಿನ ಐದು ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿಯ ವೇಳೆಯೂ ಬಿಸಿ ಇರಲಿದೆ ಎಂದು ತಿಳಿಸಿದೆ. ಇದರ ನಡುವೆಯೇ ಸಿಹಿ ಸುದ್ದಿಯನ್ನೂ ನೀಡಿರುವ ಐಎಂಡಿ, ಏಪ್ರಿಲ್ 7 ರಿಂದ 10 ವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.