ಕರ್ನಾಟಕ ಹವಾಮಾನ ಜೂನ್ 23: ಕರಾವಳಿ, ಮಲೆನಾಡು ಭಾಗದಲ್ಲಿಂದು ಭಾರಿ ಮಳೆ ಸಾಧ್ಯತೆ, ಉಡುಪಿ, ದ.ಕ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್
Jun 23, 2024 06:36 AM IST
ಕರಾವಳಿ, ಮಲೆನಾಡು ಭಾಗದಲ್ಲಿಂದು ಭಾರಿ ಮಳೆ ಸಾಧ್ಯತೆ, ಉಡುಪಿ, ದ.ಕ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್
- Karnataka Weather June 23rd: ಕಳೆದ ಮೂರ್ನ್ಕಾಲು ದಿನಗಳಿಂದ ರಾಜ್ಯದಲ್ಲಿ ವರುಣನ ಅರ್ಭಟ ಜೋರಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇಂದು ಕರಾವಳಿ ಜಿಲ್ಲೆಗಳು ಹಾಗೂ ಉತ್ತರ-ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಉತ್ತಮವಾಗಿದೆ. ಜೂನ್ ತಿಂಗಳ ಆರಂಭದಿಂದಲೂ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಫೋಷಿಸಲಾಗಿದೆ. ಇದೀಗ ಜೂನ್ 23 ರಂದು ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ರೆಡ್/ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ತಿಳಿಸಿದೆ.
ಜೂನ್ 25ರವರೆಗೆ ಮಳೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೂನ್ 25ರವರೆಗೆ ಉತ್ತಮ ಮಳೆಯಾಗಲಿದೆ. ಜೂನ್ 23 ರಿಂದ 25ರವರೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಎಲ್ಲೆಲ್ಲಿ ಮಳೆಯಾಗಲಿದೆ?
ಇಂದು ಉಡುಪಿ ಹಾಗೂ ದಕ್ಷಿಣಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಉತ್ತರ ಕನ್ನಡದಲ್ಲೂ ವರುಣ ಅರ್ಭಟ ಜೋರಾಗಿ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಾಳಿಯ ವೇಗವು ಜೋರಾಗಿರಲಿದೆ. ಬೀದರ್ ಹಾಗೂ ಕಲಬುರಗಿಯಲ್ಲಿ ಉತ್ತಮ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಮಲೆನಾಡಿನ ಪ್ರದೇಶದಲ್ಲಿ ಗಾಳಿ ವೇಗವು ಹೆಚ್ಚಿರಲಿದ್ದು, ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇಂದು ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಹಾಗೂ ಮೈಸೂರಿನಲ್ಲಿ ಯೆಲ್ಲೋ ಅಲರ್ಟ್ ಫೋಷಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲೂ ಉತ್ತಮ ಮಳೆ ನಿರೀಕ್ಷಿಸಿಬಹುದು.
ಬೆಂಗಳೂರು ಹವಾಮಾನ
ಬೆಂಗಳೂರಿನ ಕೆಲವೆಡೆ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಸಿಲಿಕಾನ್ ಸಿಟಿಯಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಸಂಜೆ ವೇಳೆಗೆ ಕೆಲವು ಏರಿಯಾಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದ್ದು ಭಾನುವಾರ ಸಂಜೆ ಶಾಪಿಂಗ್, ಪಾರ್ಟಿ ಎಂದು ಹೋಗುವವರು ಎಚ್ಚರಿಕೆ ವಹಿಸುವುದು ಉತ್ತಮ.
ರಾಜ್ಯದ ಪ್ರಮುಖ ನಗರಗಳ ಹವಾಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 23) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ಹವಾಮಾನದ ವಿವರ ಹೀಗಿದೆ.
ಬೆಂಗಳೂರು: ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ - ಗರಿಷ್ಠ 28 ಡಿಗ್ರಿ ಸೆಲ್ಸಿಯಸ್
ಮಂಗಳೂರು: 24 ಡಿಗ್ರಿ ಸೆಲ್ಸಿಯಸ್ - 27 ಡಿಗ್ರಿ ಸೆಲ್ಸಿಯಸ್
ಶಿವಮೊಗ್ಗ - 22 ಡಿಗ್ರಿ ಸೆಲ್ಸಿಯಸ್ - 28 ಡಿಗ್ರಿ ಸೆಲ್ಸಿಯಸ್
ಬೆಳಗಾವಿ - 21 ಡಿಗ್ರಿ ಸೆಲ್ಸಿಯಸ್ - 27 ಡಿಗ್ರಿ ಸೆಲ್ಸಿಯಸ್
ಮೈಸೂರು - 21 ಡಿಗ್ರಿ ಸೆಲ್ಸಿಯಸ್ - 27 ಡಿಗ್ರಿ ಸೆಲ್ಸಿಯಸ್
ದಾವಣಗೆರೆ - 22 ಡಿಗ್ರಿ ಸೆಲ್ಸಿಯಸ್ - 29 ಡಿಗ್ರಿ ಸೆಲ್ಸಿಯಸ್