Karnataka Weather: ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿಂದು ಭಾರಿ ಮಳೆಯ ಮುನ್ಸೂಚನೆ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
Jun 13, 2023 06:30 AM IST
ಕರ್ನಾಟಕದ ಕರಾವಳಿಯಲ್ಲಿಂದು ಭಾರಿ ಮಳೆಯ ಮುನ್ಸೂಚನೆ ಇದೆ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಭಾರಿ ಮಳೆಯಾಗಿದ್ದು, ಇಂದು ಕೂಡ ಬೆಂಗಳೂರು ನಗರ ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ವರುಣ ಆರ್ಭಟಿಸುವ ಸಾಧ್ಯತೆ ಇದೆ.
ಬೆಂಗಳೂರು: ಕರ್ನಾಟಕಕ್ಕೆ ಮುಂಗಾರಿನ ಆಗಮನವಾಗಿದ್ದು, ರಾಜಧಾನಿ ಬೆಂಗಳೂರು ಹಲವು ಜಿಲ್ಲೆಗಳಲ್ಲಿ ಮಳೆರಾಯ (Karnataka Rain) ಅಬ್ಬರಿಸುತ್ತಿದ್ದಾನೆ. ಮುಂದಿನ ಎರಡ್ಮೂರು ದಿನಗಳ ಕಾಲ ಇದೇ ರೀತಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ (Bengaluru city) ನಿನ್ನೆ (ಜೂನ್ 12, ಸೋಮವಾರ) ಸಂಜೆಯಿಂದ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ತಗ್ಗು ಪ್ರದೇಶದ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ತೊಂದರೆ ಅನುಭವಿಸಿದ್ದಾರೆ. ವಾರ್ಡ್ 118ರಲ್ಲಿರುವ ವಿನೋಬ ನಗರದಲ್ಲಿ ರಾಜಕಾಲುವೆ ಪಕ್ಕದ ಕೆಲ ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿದೆ.
ಆರ್‌ಟಿ ನಗರ, ಶಿವಾಜಿನಗರ, ಹೆಬ್ಬಾಳ, ಎಂಜಿ ರಸ್ತೆ, ಸದಾಶಿವನಗರ, ಮಲ್ಲೇಶ್ವಂ, ಯಶವಂತಪುರ, ಸಂಜಯನಗರ, ಲಗ್ಗರೆ, ಪೀಣ್ಯ, ಮಡಿವಾಳ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಸಂಜೆ ಮಳೆಯಾಗಿದೆ.
ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ ಎರಡ್ಮೂರು ದಿನಗಳ ವರೆಗೆ ವರುಣ ಅಬ್ಬರಿಸುವ ಮುನ್ಸೂಚನೆ ಇದೆ. ನಗರದಲ್ಲಿ ಇವತ್ತು ಕೂಡ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವ ಇದೆ.
ಬೆಂಗಳೂರು ಮಾತ್ರವಲ್ಲದೆ, ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ವರುಣ ಅಬ್ಬರಿಸಿದ್ದು, ಮಂಗಳೂರಿನಲ್ಲಿ 5 ಸೆಂಟಿ ಮೀಟರ್ ಮಳೆಯಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ, ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ತಲಾ 4, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಾಲಿ, ಜನ್ಮನೆ, ಉಡುಪಿಯ ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ರಾಯಚೂರು ಜಿಲ್ಲೆಯ ಕುರ್ಡಿ, ಮಾನನ್ವಿ, ಚಿಕ್ಕಮಗಳೂರು ಜಿಲ್ಲೆಯ ಯುಗಟಿ, ಕೊಟ್ಟಿಗೆಹಾರ, ವಿಜಯನಗರದ ಕೂಡ್ಲಿಗಿ, ಕೊಟ್ಟೂರಿನಲ್ಲಿ ತಲಾ 3 ಸೆಂಟಿ ಮೀಟರ್ ಮಳೆಯಾಗಿದೆ.
ಮಳೆಯಾಗುತ್ತಿರುವುದರಿಂದ ದಕ್ಷಿಣ ಒಳನಾಡಿನ ಕೆಲವೆಡೆ ಉಷ್ಣಾಂಶದಲ್ಲಿ ಗಮನಾರ್ಹವಾದ ಬದಲಾವಣೆಯಾಗುತ್ತಿದೆ. ಆದರೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಅತ್ಯಂತ ಗಮನಾರ್ಹವಾದ 4.1 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಮತ್ತು ನಾಳೆ ಭಾರಿ ಮಳೆಯ ಮುನ್ಸೂಚನೆ
ರಾಜ್ಯದಲ್ಲಿ ಇಂದು (ಜೂನ್ 13, ಮಂಗಳವಾರ) ಮತ್ತು ನಾಳೆ (ಜೂನ್ 14, ಬುಧವಾರ) ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಅಂದರೆ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
ಕರಾವಳಿ ಭಾಗದಲ್ಲಿ ಇಂದು ಬಿರುಗಾಳಿ ಗಂಟೆಗೆ 40-45 ಕಿಲೋ ಮೀಟರ್ ನಿಂದ 55 ಕಿಲೋ ಮೀಟರ್ ವೇಗದಲ್ಲಿ ಬೀಸುವ ವಾತಾವರಣ ಇದ್ದು, ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.