Karnataka Rain: ಕರ್ನಾಟಕ ಹವಾಮಾನ: ಬೆಂಗಳೂರು ನಗರ, ಕರಾವಳಿ, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ನಾಳೆ ಭಾರಿ ಮಳೆ ಸಾಧ್ಯತೆ
May 15, 2023 07:17 AM IST
ಬೆಂಗಳೂರು ಸೇರಿದಂತೆ ರಾಜ್ಯ ಕೆಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಇವತ್ತು ವರುಣ ಆರ್ಭಟಿಸುವ ಸಾಧ್ಯತೆ ಇದೆ.
ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಬೆಂಗಳೂರು ನಗರ (Bengaluru City), ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಇಂದು (ಮೇ 15, ಸೋಮವಾರ) ಮಳೆಯಾಗುವ (Rain) ಮುನ್ಸೂಚನೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ (Met Centre Bengaluru - IMD) ಹೇಳಿದೆ.
ಬಂಗಾಳಕೊಲ್ಲಿ ಸಮುದ್ರ ತೀರದಲ್ಲಿ ಸೃಷ್ಟಿಯಾಗಿರುವ ಮೋಚಾ ಚಂಡಮಾರುತವು ನಿನ್ನೆಯಿಂದ (ಮೇ 14, ಭಾನುವಾರ) ತೀವ್ರ ಸ್ವರೂಪ ಪಡೆಯಲಿದೆ ಎನ್ನಲಾಗುತ್ತಿದೆ. ಚಂಡಮಾರುತ ಪರಿಣಾಮ ಎದುರಿಸಲು ಪಶ್ಚಿಮಬಂಗಾಳ, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳು ಸಿದ್ಧತೆ ಮಾಡಿಕೊಂಡಿವೆ.
ಮೋಚಾ ಚಂಡಮಾರುತ ಪರಿಣಾಮದಿಂದ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಮಳೆಯಾಗಿದೆ. ಆದರೆ ಕೇರಳ, ಕರ್ನಾಟಕದ ಕರಾವಳಿ ಭಾಗದಲ್ಲೂ ಇದರ ಪರಿಣಾಮ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮ್ಯಾನ್ಮಾರ್ ಸೇರಿದಂತೆ ಹಲವೆಡೆ ನಿನ್ನೆ ಭಾರಿ ಮಳೆಯಾಗಿದ್ದು, ಸಾಮಾನ್ಯರ ಜೀವನ ಅಸ್ತವ್ಯಸ್ತಗೊಂಡಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿದೆ. ರಸ್ತೆಗಳ ತುಂಬ ನೀರು ಹರಿದಿದ್ದು, ವಾನಹ ಸವಾರರಿಗೂ ತೊಂದರೆಯಾಗಿದೆ.
ಇತ್ತ ಕರ್ನಾಟಕದ ಕೆಲವು ಕಡೆಗಳಲ್ಲಿ ನಿನ್ನೆ ಮಳೆಯಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮಳೆಯಾದರೆ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಮಣಿ, ಕಾರ್ಕಳ, ಭಾಗಮಂಡಲದಲ್ಲಿ ತಲಾ 2, ಕೋಟ, ಪಣಂಬೂರು, ಹುಣಸೂರು ಹಾಗೂ ಸಿರಾದಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಒಳನಾಡು ಮತ್ತು ಕರಾವಳಿಯ ಬಹುತೇಕ ಕಡೆಗಳಲ್ಲಿ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಕರಾವಳಿಯ ಒಂದೆರಡು ಕಡೆಗಳಲ್ಲಿ ಮಾತ್ರ ಉಷ್ಣಾಂಶ ಗಮನಾರ್ಹವಾಗಿ ಏರಿಕೆಯಾಗಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಅಂದರೆ 1.6 ಡಿಗ್ರಿ ಸೆಲ್ಸಿಯಸ್ ನಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಿದೆ. ರಾಜ್ಯದಲ್ಲಿ ಅತಿ ಗರಿಷ್ಠ ಉಷ್ಣಾಂಶ 41.6 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ನಾಳೆ ಎಲ್ಲಿಲ್ಲಿ ಭಾರಿ ಮಳೆ ಸಾಧ್ಯತೆ
ನಾಳೆ, (ಮೇ 16, ಮಂಗಳವಾರ) ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯಲ್ಲಿ ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ತಿಳಿದೆ.