logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಮೋಕಾ ಚಂಡಮಾರುತಕ್ಕೆ ಮ್ಯಾನ್ಮಾರ್ ತತ್ತರ; ಇತ್ತ ರಾಜ್ಯದ ಕೊಡಗು, ಮಂಡ್ಯ, ಮೈಸೂರಿನಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

Karnataka Weather: ಮೋಕಾ ಚಂಡಮಾರುತಕ್ಕೆ ಮ್ಯಾನ್ಮಾರ್ ತತ್ತರ; ಇತ್ತ ರಾಜ್ಯದ ಕೊಡಗು, ಮಂಡ್ಯ, ಮೈಸೂರಿನಲ್ಲಿ ಇಂದು, ನಾಳೆ ಮಳೆಯ ಮುನ್ಸೂಚನೆ

Raghavendra M Y HT Kannada

May 16, 2023 07:49 AM IST

google News

ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಮೇ 17ರ ವರೆಗೆ ರಾಜ್ಯದ  ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಹಾಗೂ ರಾಮನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮೋಕಾ ಚಂಡಮಾರುತ (Mocha Cyclone) ಮ್ಯಾನ್ಮಾರ್ (Myanmar) ಪಶ್ಚಿಮ ಭಾಗದ ಕರಾವಳಿ ಹಾಗೂ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ.

ಈ ಭಾಗದಲ್ಲಿ ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿರುವ ಮೋಕಾ ಸೈಕ್ಲೋನ್‌ನಿಂದಾಗಿ ಮ್ಯಾನ್ಮಾರ್‌ನ ವಾಯುವ್ಯ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಲವಾರು ಮನೆಗಳಿಗೆ ಹಾನಿಯಾಗಿದೆ. ಮರಗಳು ಹಾಗೂ ವಿದ್ಯುತ್ ಕಂಬನಿಗಳು ನೆಲಕ್ಕುರುಳಿವೆ. ಮೋಕಾ ಚಂಡಮಾರುತ್ತಕ್ಕೆ ಮ್ಯಾನ್ಮಾರ್‌ಗೆ ಈವರೆಗೆ 29 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

1982ರ ನಂತರ ರೂಪಗೊಂಡ ಅತಿ ದೊಡ್ಡ ಚಂಡಮಾರುತ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬಾಂಗ್ಲಾದೇಶದಲ್ಲಿ ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದರೂ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಒಳನಾಡಿನಲ್ಲಿ ಇಂದು, ನಾಳೆ ಮಳೆ

ರಾಜ್ಯದ ಕರಾವಳಿಯ ಒಂದೆರಡು ಕಡೆಗಳಲ್ಲಿ ನಿನ್ನೆ (ಮೇ 15, ಸೋಮವಾರ) ಮಳೆಯಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಇಂದು (ಮೇ 16, ಮಂಗಳವಾರ) ಮತ್ತು ನಾಳೆ (ಮೇ 17, ಬುಧವಾರ) ಮಳೆಯಾಗುವ (Karnataka Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮಾಹಿತಿ ನೀಡಿದೆ.

ಇನ್ನು ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣ ಹವೆ ಮುಂದುವರೆದಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶ ಹೆಚ್ಚಾಗಿದೆ. ಅಂದರೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಸಾಮಾನ್ಯ ಉಷ್ಣಾಂಶವೇ ಇದೆ. ರಾಜ್ಯದಲ್ಲಿ ಅತಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.

ಕರಾವಳಿ ಕರ್ನಾಟಕದ ಹೆನ್ನಾವರದಲ್ಲಿ 33.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕಾರವಾರದಲ್ಲಿ 36.2, ಶಿರಾಲಿ 36.7, ಮಂಗಳೂರು ವಿಮಾನ ನಿಲ್ದಾಣ 35, ಪಣಂಬೂರು 35.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದರೆ, ಉತ್ತರ ಒಳನಾಡಿನ ಕರ್ನಾಟಕದ ಬೆಳಗಾವಿ ನಗರ 33, ಬೆಳಗಾವಿ ವಿಮಾನ ನಿಲ್ದಾಣ 33.9, ಬೀದರ್ 38, ವಿಜಯಪುರ 39, ಬಾಗಲಕೋಟೆ 35.6, ಧಾರವಾಡ 35, ಗದಗ 36.8, ಕಲಬುರ್ಗಿ 41, ಹಾವೇರಿ 35, ಕೊಪ್ಪಳ 39.6, ರಾಯಚೂರು 39.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ದಕ್ಷಿಣ ಒಳನಾಡಿನ ಬೆಂಗಳೂರಿನ ಎಚ್‌ಎಎಲ್ 32.6, ಬೆಂಗಳೂರು ನಗರ 32.8, ಬೆಂಗಳೂರು ಕೆಐಎಎಲ್‌ ವಿಮಾನ ನಿಲ್ದಾಣ 33.3, ಬಳ್ಳಾರಿ 39.2, ಚಿಕ್ಕಮಗಳೂರು 30.2, ಚಿತ್ರದುರ್ಗ 35.1, ದಾವಣಗೆರೆ 35.2, ಹಾಸನ 34.6, ಚಿಂತಾಮಣಿ 34.7, ಮಂಡ್ಯ 35.2, ಮಡಿಕೇರಿ 29.5, ಮೈಸೂರು 36.1 ಹಾಗೂ ಚಿಕ್ಕನಹಳ್ಳಿ 36.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ನಾಳೆಯೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ