Karnataka Weather: ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚನೆ; ಬೀದರ್ ನಲ್ಲಿ ಕನಿಷ್ಠ ತಾಪಮಾನ ದಾಖಲು
Jan 21, 2025 07:08 AM IST
ಜನವರಿ 21ರ ಮಂಗಳವಾರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹವಾಮಾನ ವರದಿ ತಿಳಿಯಿರಿ (ಫೋಟೊ-ಸಂಗ್ರಹ)
- ಬೆಂಗಳೂರಿನಲ್ಲಿಂದು ಮುಂಜಾನೆಯಿಂದಲೇ ಮೋಡ ಇಲ್ಲದ ಆಕಾಶವಿದೆ, ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ರಾಜಧಾನಿ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನವರಿ 21ರ ಮಂಗಳವಾರ ಒಣ ಹವೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದು (ಜನವರಿ 21, ಮಂಗಳವಾರ) ಬೆಳಗ್ಗೆ ಅಲಲ್ಲಿ ಮಂಜು ಇದ್ದು, ಸಾಧಾರಣ ಚಳಿಯ ಪರಿಸ್ಥಿತಿ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶುಭ್ರ ಅಕಾಶವಿದೆ. ಬೆಳಗ್ಗೆ 10 ಗಂಟೆಯ ನಂತರ ಬಿಸಿಲಿನ ವಾತಾವರಣ ನಿಧಾನವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇರಲಿದೆ. ಕೆಲವೊಂದು ಕಡೆಗಳಲ್ಲಿ ಮಾತ್ರ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ನಿನ್ನೆ (ಜನವರಿ 20, ಸೋಮವಾರ) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಆದರೆ ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿದಿತ್ತು ಎಂದು ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಜನವರಿ 19 ರ ಭಾನುವಾರ ಬೆಂಗಳೂರು ಹಾಗೂ ಸುತ್ತಮತ್ತಲಿನ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿತ್ತು. ಜನವರಿ 20ರ ಸೋಮವಾರ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯಾಗಿರಲಿಲ್ಲ. ಇಂದು ಕೂಡ ಮಳೆಯಾಗುವ ಮುನ್ಸೂಚನೆ ಇಲ್ಲ. ನಗರದಲ್ಲಿ ಜನ ಜೀವನ ಎಂದಿನಂತೆ ಸಾಮಾನ್ಯವಾಗಿದೆ, ಮುಂಜಾನೆಯ ಮಾರುಕಟ್ಟೆಗಳು ನಡೆಯುತ್ತಿದ್ದು, ಚಳಿ ಅಥವಾ ಮಂಜಿನ ಪರಿಸ್ಥಿತಿ ವ್ಯಾಪಾರ, ವಹಿವಾಟುಗಳ ಮೇಲೆ ಪರಿಣಾಮ ಬೀರಿಲ್ಲ. ವಾಹನ ಸಂಚಾರಕ್ಕೂ ಯಾವುದೇ ರೀತಿಯ ಅಡ್ಡಿಯುಂಟಾಗಿಲ್ಲ. ಜನರು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ರಸ್ತೆಗಳಿದಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ಹವಾಮಾನ ವರದಿಯ ಪ್ರಕಾರ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಗರ್ಮನಾರ್ಹವಾಗಿ ಹೆಚ್ಚಳವಾಗಿದೆ. 3.1 ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಹೆಚ್ಚಾಗಿದೆ. ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 11 ಡಿಗ್ರಿ ಸೆಲ್ಸಿಯಸ್ ಬೀದರ್ ನಲ್ಲಿ ದಾಖಲಾಗಿದೆ. ಇಂದಿನಿಂದ (ಜನವರಿ 21, ಮಂಗಳವಾರ) ಜನವರಿ 26ರ ಭಾನುವಾರದ ವರೆಗೆ ಕರ್ನಾಟಕದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜಿನ ಪರಿಸ್ಥಿತಿ ಇರುವ ಮುನ್ಸೂಚನೆ ಇದೆ ಎಂದು ಹವಾಮಾನ ಕೇಂದ್ರ ದೈನಂದಿನ ವರದಿಯಲ್ಲಿ ಮಾಹಿತಿ ನೀಡಿದೆ.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ವಾತಾವರಣವನ್ನು ಗಮನಿಸುವುದಾದರೆ, ಮುಖ್ಯವಾಗಿ ಮುಂಜಾನೆಯಿಂದಲೇ ಮೋಡ ಇಲ್ಲದ ಆಕಾಶವಿದೆ, ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16 ಡಿಗ್ರಿ ಸಲ್ಸಿಯಸ್ ತಾಪಮಾನ ಇರುವ ನಿರೀಕ್ಷೆ ಇದೆ.