Karnataka Weather: ಬೆಂಗಳೂರು ಸೇರಿ ದಕ್ಷಿಣ ಒಳನಾಡಿ ಕೆಲವೆಡೆ ಇಂದು ಸಾಧಾರಣ ಮಳೆಯ ಮುನ್ಸೂಚನೆ; ಕರಾವಳಿ, ಉತ್ತರ ಒಳನಾಡಿನಲ್ಲಿ ಒಣಹವೆ
Dec 08, 2023 07:33 AM IST
ಬೆಂಗಳೂರಿನಲ್ಲಿ ಡಿಸೆಂಬರ್ 8ರ ಶುಕ್ರವಾರ ಸಾಧಾರಣ ಮಳೆಯ ಮುನ್ಸೂಚನೆ ಇದೆ (ಫೋಟೊ ಫೈಲ್ ಪಿಟಿಐ)
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಕಡೆ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು, ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇಂದು (ಡಿಸೆಂಬರ್ 8, ಶುಕ್ರವಾರ) ಸಾಧಾರಣ ಮಳೆಯಾಗುವ ಮುಸ್ಸೂಚನೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ ಹಾಗೂ ಇತರೆ ಕಡೆಗಳಲ್ಲಿ ವರುಣನ ಆಗಮನವಾಗುವ ಬಹಳಷ್ಟು ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆಯಾಗಿದೆ. ಡಿಸೆಂಬರ್ 7ರ ಗುರುವಾರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ವರದಿಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 2 ಸೆಂ ಮೀಟರ್ ಮಳೆಯಾಗಿದೆ.
ನಾಳೆ (ಡಿಸೆಂಬರ್ 9, ಶನಿವಾರ) ದಕ್ಷಿಣ ಒಳನಾಡಿನ ಕೆಲವು ಕಡೆ, ಮಂಗಳೂರು ಸೇರಿದಂತೆ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಈ ವರದಿಯ ಪ್ರಕಾರ, ಕರ್ನಾಟಕದಲ್ಲಿ ಚಂಡಮಾರುತದ ಭೀತಿ ಇಲ್ಲ. ಪರಿಣಾಮವಾಗಿ ಭಾರಿ ಮಳೆ, ಗುಡುಗು ಸಹಿತ ಮಳೆಯಿಲ್ಲ ಹಾಗೂ ಮೀನುಗಾರರಿಗೆ ಯಾವುದೇ ರೀತಿಯ ಮುನ್ನೆಚ್ಚರಿಕೆಯೂ ಇಲ್ಲ ಅಂತ ಹೇಳಿದೆ.
ಬೆಂಗಳೂರು ಹವಾಮಾನ ಹೇಗಿದೆ
ಇವತ್ತು ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಬೆಳಗಿನ ಜಾನ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
ಕರ್ನಾಟಕದ ದಕ್ಷಿಣ, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳು
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ.
ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ.
ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ನೆರೆಯ ತಮಿಳುನಾಡಿನ ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಕೂಡ ನಿಧಾನವಾಗಿ ಕಡಿಮೆಯಾಗುತ್ತಿದೆ. ಇತ್ತ ಆಂಧ್ರಪ್ರದೇಶದಲ್ಲೂ ಮಿಚಾಂಗ್ ಸೈಕ್ಲೋನ್ ನೂರಾರು ಎಕರೆ ಭತ್ತದ ಬೆಳೆಯನ್ನು ನಾಶ ಮಾಡಿ ಹೋಗಿದೆ.