Karnataka Weather: ಬೆಂಗಳೂರು ಸೇರಿ ಕರ್ನಾಟಕದ ಕೆಲವೆಡೆ ಉಷ್ಣಾಂಶ ತುಸು ಹೆಚ್ಚಳ; ಮಂಡ್ಯದಲ್ಲಿ ಇನ್ನೂ ಚಳಿಚಳಿ
Feb 10, 2024 06:43 AM IST
ಬೆಂಗಳೂರು ಸೇರಿ ಕರ್ನಾಟಕದ ಕೆಲವೆಡೆ ಉಷ್ಣಾಂಶ ತುಸು ಹೆಚ್ಚಳವಾಗಿದ್ದರೆ ಮಂಡ್ಯದಲ್ಲಿ ಇನ್ನೂ ಚಳಿಚಳಿಯ ವಾತಾವರಣ ಮುಂದುವರೆದಿದೆ.
Karnataka weather today: ಕರ್ನಾಟಕದ ಕೆಲವು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಾಗುತ್ತಿದೆ. ಆದರೆ ಮಂಡ್ಯದಲ್ಲಿ ತಂಪಾದ ವಾತಾವರಣ ವರದಿಯಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ (Karnataka Weather Today) ದಿನದಿಂದ ದಿನಕ್ಕೆ ಬಿಸಿ ಹೆಚ್ಚಾಗುತ್ತಿದೆ. ಬೆಳಗ್ಗೆ ಸ್ವಲ್ಪ ತಂಪಾದ ವಾತಾವರಣವಿದ್ದರೂ 10 ಗಂಟೆಯ ನಂತರಮೈ ಸುಡುವಂತ ಅನುಭವವಾಗುತ್ತಿದೆ. ಇಂದು (ಫೆಬ್ರವರಿ 10, ಶನಿವಾರ) ಕೂಡ ರಾಜ್ಯದ ಕೆಲವು ಕಡೆಗಳಲ್ಲಿ ಉಷ್ಣಾಂಶ ತುಸು ಹೆಚ್ಚಾಗಲಿದೆ. ಆದರೆ ಹಳೆ ಮೈಸೂರು ಭಾಗದ ಕೆಲವು ಪ್ರದೇಶಗಳಲ್ಲಿ ಚಳಿಯವ ವಾತಾವರಣ ಮುಂದುವರಿದಿದೆ.
ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಎಲ್ಲಾ ಕಡೆ ಒಣಹವೆ ಮುಂದುವರಿದಿದೆ. ಭಾರಿ ಮಳೆ, ಗುಡುಗು ಮಿಂಚು ಯಾವುದೂ ಇಲ್ಲದಿರುವ ಕಾರಣ ಮೀನುಗಾರರಿಗೆ ಮುನ್ನಚ್ಚರಿಕೆ ಇರುವುದಿಲ್ಲ. ಎಂದಿನಂತೆ ಮೀನುಗಾರಿಕೆ ನಡೆಸಬಹುದು. ಮುಂದಿನ ಎರಡ್ಮೂರು ದಿನಗಳ ಕಾಲ ಇದೇ ವಾತಾವರಣ ಇರಲಿದೆ.
ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. 3.1 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳವಾಗಿದೆ. ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಅಂದರೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಮಂಡ್ಯದಲ್ಲಿ 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಇಂದಿನ ಹವಾಮಾನ
ಇದನ್ನೂ ಓದಿ: ಮಾಘ ಮಾಸದ ಚಳಿಯೊಂದಿಗೆ ಹಲವೆಡೆ ಹೆಚ್ಚಿದ ತಾಪಮಾನ; ಕರ್ನಾಟಕದ ಹವಾಮಾನ ಹೀಗಿದೆ
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಿರ್ಮಲ ಆಕಾಶಇರಲಿದ್ದು, ಬೆಳಗಿನ ಜಾವ ಕೆಲವೆಡೆ ಮಂಜು ಮುಸುಕಿದ ವಾತಾವರಣ ಇದೆ. ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ನಗರದಲ್ಲಿ ನಾಳೆಯೂ ಇದೇ ರೀತಿಯ ವಾತಾವರಣ ಇರಲಿದೆ.
ಕರ್ನಾಟಕದಲ್ಲಿ ನಾಳಿನ ಹವಾಮಾನ
ನಾಳೆ (ಫೆಬ್ರವರಿ 11, ಭಾನುವಾರ) ರಾಜ್ಯದಾದ್ಯಂತ ಕೆಲವು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ