Karnataka Weather: ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ಮಂಜಿನ ವಾತಾವರಣ; ಕರ್ನಾಟಕದಲ್ಲಿ ಮುಂದುವರಿದ ಚಳಿ
Jan 26, 2024 06:14 AM IST
ಬೆಂಗಳೂರಿನಲ್ಲಿ ಜನವರಿ 26ರ ಶುಕ್ರವಾರ ಬೆಳ್ಳಂ ಬೆಳಗ್ಗೆ ಮಂಜಿನ ವಾತಾವರಣ ಇದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಂಜಿನ ವಾತಾವರಣವಿದ್ದು, ಕೊರೆಯುವ ಚಳಿ ಮೈ ನಡುಗಿಸುವಂತಿದೆ. ಇತರೆ ಜಿಲ್ಲೆಗಳಲ್ಲಿ ಹವಾಮಾನ ಹೇಗಿದೆ ಅನ್ನೋದನ್ನ ನೋಡೋಣ.
ಬೆಂಗಳೂರು: ದೇಶದಾದ್ಯಂತ ಇಂದು (ಜನವರಿ 26, ಶುಕ್ರವಾರ) 75ನೇ ಗಣರಾಜ್ಯೋತ್ಸವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸರ್ಕಾರದ ವತಿಯಿಂದ ಗಣತಂತ್ರ ದಿವಸವನ್ನು ಆಚರಿಸಲಾಗುತ್ತದೆ. ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಇತರೆ ಜಿಲ್ಲೆಗಳ ಇವತ್ತಿನ ಹವಾಮಾನ ನೋಡುವುದಾದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕೊರೆಯುವ ಚಳಿಯ ವಾತಾವರಣ ಇದೆ.
ಕಳೆದ ಎರಡ್ಮೂರು ದಿನಗಳಿಂದ ಚಳಿ ಹೆಚ್ಚಾಗುತಲೇ ಇದ್ದು, ಮೈ-ಕೈ ನಡುಗಿಸುವಂತೆ ಮಾಡುತ್ತಿದೆ. ಮಂಜಿನ ವಾತಾವರಣದ ನಡುವೆಯೇ ಜನರು ತಮ್ಮ ದಿನ ನಿತ್ಯದ ಕೆಲಸಗಳನ್ನು ಹೋಗುತ್ತಿದ್ದಾರೆ. ಕರಾವಳಿ ಮತ್ತು ದಕ್ಷಿಣ ಒಳನಾಡಿಗಿಂತ ಉತ್ತರ ಒಳನಾಡಿನಲ್ಲಿ ಕೆಲವೊಂದು ಕಡೆಗಳಲ್ಲಿ ಚಳಿ ಪ್ರಭಾವ ಬೀರಿದೆ.
ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಎಲ್ಲಾ ಕಡೆ ಒಣಹವೆ ಮುಂದುವರಿದಿದೆ. ಭಾರಿ ಮಳೆ, ಗುಡುಗು ಮಿಂಚು ಯಾವುದೂ ಇಲ್ಲದಿರುವ ಕಾರಣ ಮೀನುಗಾರರಿಗೆ ಮುನ್ನಚ್ಚರಿಕೆ ಇರುವುದಿಲ್ಲ. ಎಂದಿನಂತೆ ಮೀನುಗಾರಿಕೆ ನಡೆಸಬಹುದು. ಮುಂದಿನ ಎರಡ್ಮೂರು ದಿನಗಳ ಕಾಲ ಇದೇ ವಾತಾರಣ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5.0 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಹವಾಮಾನ
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ ಕೆಲವೆಡೆ ಮಂಜು ಮುಸುಕಿದ ವಾತಾವರಣ ಇದೆ. ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ನಾಳೆ (ಜನವರಿ 27, ಶನಿವಾರ) ಕೂಡ ಇದೇ ವಾತಾವರಣ ಇರಲಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com)
ವಿಭಾಗ