Karnataka Weather: ಕರ್ನಾಟಕದಲ್ಲಿ ಮುಂದುವರಿದ ಚಳಿಯ ವಾತಾವರಣ; ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ
Jan 29, 2024 06:16 AM IST
ಜನವರಿ 29ರ ಸೋಮವಾರ ಬೆಂಗಳೂರಿನಲ್ಲಿ ಚಳಿಯ ವಾತಾವರಣ ಮುಂದುವರಿದಿದೆ
ರಾಜಧಾನಿ ಬೆಂಗಳೂರಿನ ಕೆಲವು ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಇದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಹವಾಮಾನ ಮಾಹಿತಿ ಹೀಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಜನವರಿ 29, ಸೋಮವಾರ) ಕೂಡ ಚಳಿಯ ವಾತಾವರಣ ಇದೆ. ಕೆಲವು ಕಡೆಗಳಲ್ಲಿ ಭಾರಿ ಮಂಜಿನ ಪರಿಣಾಮ ವಾಹನ ಸಂಚಾರಕ್ಕೆ ಅಲ್ಪ ಅಡ್ಡಿಯಾಗಿದೆ. ಚಳಿಯ ನಡುವೆಯೇ ಜನರು ತಮ್ಮ ದೈನಂದಿನ ಕೆಲಸಗಳಿಗೆ ಮುಂದಾಗಿದ್ದಾರೆ. ಕರಾವಳಿ ಮತ್ತು ಉತ್ತರ ಒಳನಾಡನ ಬಹುತೇಕ ಕಡೆಗಳಲ್ಲಿ ಸಾಮಾನ್ಯ ಚಳಿ ಇದೆ. ಆದರೆ ದಕ್ಷಿಣ ಕರ್ನಾಟಕದ ಕೆಲವೊಂದು ಕಡೆಗಳಲ್ಲಿ ಚಳಿ ಪ್ರಭಾವ ಬೀರಿದೆ.
ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಎಲ್ಲಾ ಕಡೆ ಒಣಹವೆ ಮುಂದುವರಿದಿದೆ. ಭಾರಿ ಮಳೆ, ಗುಡುಗು ಮಿಂಚು ಯಾವುದೂ ಇಲ್ಲದಿರುವ ಕಾರಣ ಮೀನುಗಾರರಿಗೆ ಮುನ್ನಚ್ಚರಿಕೆ ಇರುವುದಿಲ್ಲ. ಎಂದಿನಂತೆ ಮೀನುಗಾರಿಕೆ ನಡೆಸಬಹುದು. ಮುಂದಿನ ಎರಡ್ಮೂರು ದಿನಗಳ ಕಾಲ ಇದೇ ವಾತಾರಣ ಇರಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ 4.1 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ವಿಜಯಪುರದಲ್ಲಿ 14.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಒಣ ಹವೆ ಮುಂದುವರಿದಿದೆ.
ಬೆಂಗಳೂರು ಹವಾಮಾನ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿದೆ, ಬೆಳಗಿನ ಜಾವ ಕೆಲವೆಡೆ ಮಂಜು ಮುಸುಕಿದ ವಾತಾವರಣ ಇದೆ. ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ನಗರದಲ್ಲಿ ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ