ಕರ್ನಾಟಕ ಹವಾಮಾನ ಜುಲೈ 21: ರಾಜ್ಯಾದ್ಯಂತ ನೈರುತ್ಯ ಮುಂಗಾರು ಚುರುಕು; ಕರಾವಳಿಯ 3 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
Jul 21, 2024 07:32 AM IST
ಜುಲೈ 21ರ ಭಾನುವಾರ ಕರ್ನಾಟಕದ ಹವಾಮಾನ
- ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜುಲೈ 21ರ ಭಾನುವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉಳಿದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ ಎಂಬುದನ್ನು ಹವಾಮಾನ ವರದಿಯಲ್ಲಿ ತಿಳಿಯಿರಿ.
ಬೆಂಗಳೂರು: ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಅಬ್ಬರಿಸುತ್ತಿರುವ ಪರಿಣಾಮ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಇದರಿಂದಾಗಿ ನದಿಗಳು, ಹಳ್ಳ ಕೊಳ್ಳಗಳ ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಮಳೆಯಾಗಿದೆ. ಶಿವಮೊಗ್ಗದ ಆಗುಂಬೆಯಲ್ಲಿ ಗರಿಷ್ಠ 13 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಗೇರ್ಸೊಪ್ಪ 12, ಕ್ಯಾಸಲ್ ರಾಕ್ 11, ಸಿದ್ದಾಪುರ 11, ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ 11, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಜಿಲ್ಲೆಯಲ್ಲಿ 10, ಕದ್ರಾ 10, ಕುಮಟಾ, ಮಂಕಿ, ಚಿಕ್ಕಮಗಳೂರು ಜಿಲ್ಲೆಯ ಜಯಪುರ ಹಾಗೂ ಶೃಂಗೇರಿ ತಲಾ 9, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 8 ಹಾಗೂ ಸುಳ್ಯದಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದೆ.
ಜುಲೈ 21ರ ಭಾನುವಾರ 3 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ಮುನ್ಸೂಚನೆ ನೀಡಿದೆ. ಇಲ್ಲಿ ನಿರಂತರ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ಇರುವ ಸಾಧ್ಯತೆ ಇದೆ. ಉಳಿದಂತೆ ಬೆಳಗಾವಿ, ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಂಭವ ಇದೆ.
ಒಳನಾಡಿನಲ್ಲೂ ವರುಣ ಅಬ್ಬರಿಸುವ ಸಾಧ್ಯತೆ
ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜುಲೈ 26 ರ ಶುಕ್ರವಾರದ ವರೆಗೆ ಕರಾವಳಿಯ ಬಹುತೇಕ ಜಿಲ್ಲೆಗಳ ಬಹುತೇಕ ಸ್ಥಗಳು, ಉತ್ತರ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮೀನುಗಾರರಿಗೆ ಎಚ್ಚರಿಕೆ
ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ಕಿಮೀ ನಿಂದ 45 ಕಿಲೋ ವೇಗದಲ್ಲಿ 55 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಜುಲೈ 21 ರ ಭಾನುವಾರದ ಹವಾಮಾನ
ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಮೀಗೆ ತಲುಪುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)