ಕರ್ನಾಟಕ ಹವಾಮಾನ ಜುಲೈ 15: ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕು; ಗದಗ, ಕೊಪ್ಪಳ ಸೇರಿ 8 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
Jul 15, 2024 06:32 AM IST
ಕರ್ನಾಟಕ ಹವಾಮಾನ ಜುಲೈ 15: ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕು; ಗದಗ, ಕೊಪ್ಪಳ ಸೇರಿ 8 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
- ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಗದಗ, ಕೊಪ್ಪಳ, ಧಾರವಾಡ, ಬಾಗಲಕೋಟೆ, ಹಾಸನ ಹಾಗೂ ಮೈಸೂರು ಸೇರಿದಂತೆ ಒಟ್ಟು 8 ಜಿಲ್ಲೆಗಳಲ್ಲಿ ಜುಲೈ 15ರ ಸೋಮವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು: ನೈರುತ್ಯ ಮುಂಗಾರು (Southwest Monsoon) ಪರಿಣಾಮ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳು, ಹಳ್ಳ ಕೊಳ್ಳಗಳ ತುಂಬಿ ಹರಿಯುತ್ತಿವೆ. ಮುಂಗಾರು ಚುರುಕುಗೊಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಬಿತ್ತನೆ ಕಾರ್ಯಗಳಿಗೆ ಸಿದ್ದವಾಗುತ್ತಿದ್ದಾರೆ. ಕೆಲವೆಡೆ ಭಾರಿ ಹಲವು ಸಮಸ್ಯೆಗಳಿಗೂ ಕಾರಣವಾಗಿದೆ. ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಕ್ರಿಯವಾಗಿದ್ದು, ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್‌ನಲ್ಲಿ ನಿನ್ನೆ (ಜುಲೈ 14, ಭಾನುವಾರ) ಬರೋಬ್ಬರಿ 22 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 17, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 15, ಕದ್ರಾ, ಗೇರುಸೊಪ್ಪದಲ್ಲಿ ತಲಾ 13 ಹಾಗೂ ಹೊನ್ನಾವರದಲ್ಲಿ 12 ಸೆಂಟಿ ಮೀಟರ್‌ಗಳ ಅತಿ ಭಾರಿ ಮಳೆಯಾಗಿದೆ (Karnataka Weather).
ಉತ್ತರ ಕನ್ನಡ ಜಿಲ್ಲೆಯ ಕಾರವಾರ 11, ಶಿರಾಲಿ 10, ಗೋಕರ್ಣ, ಮಂಕಿಯಲ್ಲಿ ತಲಾ 9, ಸಿದ್ದಾಪುರದಲ್ಲಿ 8, ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ 8, ಕೊಡಗು ಜಿಲ್ಲೆಯ ನಾಪೋಕ್ಲು 8, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಕುಂದಾಪುರ ತಲಾ 7, ಕೊಡಗು ಜಿಲ್ಲೆಯ ಸೋಮವಾರಪೇಟೆ 7 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ 7 ಸೆಂಟಿ ಮೀಟರ್ ಮಳೆಯಾಗಿದೆ.
ಜುಲೈ 15ರ ಸೋಮವಾರ ಎಲ್ಲೆಲ್ಲಿ ಮಳೆಯಾಗುತ್ತೆ?
ಜುಲೈ 18ರ ಗುರುವಾರದ ವರೆಗೆ 4 ದಿನಗಳಕಾಲ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ ಹವಾಮಾನ ಕೇಂದ್ರ ಮಾಹಿತಿ ಪ್ರಕಾರ, ಇಂದು (ಜುಲೈ 15, ಸೋಮವಾರ) ಒಳನಾಡಿನ ಜಿಲ್ಲೆಗಳಾದ ಗದಗ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಹಾಸನ, ದಾವಣಗೆರೆ, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಕೆಲವೊಂದು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ತಲುವುವ ಸಾಧ್ಯತೆ ಇದೆ. ಒಳನಾಡಿನ ಇತರೆ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
ಎಚ್ಚರಿಕೆ ನೀಡಲಾಗಿರುವ ಜಿಲ್ಲೆಗಳು
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರುವ ಬಹಳಷ್ಟು ಸಾಧ್ಯತೆ ಇದೆ. ಬೆಳಗಾವಿ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಇದೇ ರೀತಿಯ ಮಳೆಯಾಗುವ ಮುನ್ಸೂಚನೆ ಇದೆ.
ಮೀನುಗಾರರಿಗೆ ಎಚ್ಚರಿಕೆ
ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಗಂಟೆಗೆ 35 ರಿಂದ 45 ಕಿಲೋ ಮೀಟರ್ ವೇಗದಲ್ಲಿ 55 ಕಿಮೀ ವರೆಗೆ ವೇಗವಾಗಿ ಬೀಸುವ ಗಾಳಿಯು ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ ಭಾಗದ ಮುಲ್ಕಿಯಿಂದ ಮಂಗಳೂರಿನವರೆಗೆ ಅಲೆಗಳ ಎಚ್ಚರಿಕೆಯನ್ನು ನೀಡಲಾಗಿದೆ. ಇಂದು (ಜುಲೈ 15, ಸೋಮವಾರ) ಬೆಳಗ್ಗೆ 5.30 ರಿಂದ ರಾತ್ರಿ 11.30ರ ವರೆಗೆ 2.8 ರಿಂದ 3.3 ಮೀಟರ್ ಎತ್ತರದ ವರೆಗೆ ಅಲೆಗಳು ಉಂಟಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ರಾಜ್ಯಧಾನಿ ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ಆಕಾಶ ಇದ್ದು, ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗವು ಗಂಟೆಗೆ 30 ರಿಂದ 40 ಕಿಮೀ ಇರಲಿದೆ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)