ಕರ್ನಾಟಕ ಹವಾಮಾನ ಮಾರ್ಚ್ 8: ಉತ್ತರ ಒಳನಾಡಿನಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ; ಬಿಸಿಗೆ ಜನ ಹೈರಾಣ
Mar 08, 2024 06:34 AM IST
ಮಾರ್ಚ್ 8ರ ಶುಕ್ರವಾರ ಕರ್ನಾಟಕದ ಹವಾಮಾನ ಹೇಗಿದೆ ಎಂಬುದನ್ನು ತಿಳಿಯಿರಿ
- Karnataka Weather: ಹವಾಮಾನ ಇಲಾಖೆಯ ಪ್ರಕಾರ, ಈ ಬೇಸಿಗೆಯಲ್ಲಿ ಕರ್ನಾಟಕವು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಬೆಂಗಳೂರು: ಕರ್ನಾಟಕದಲ್ಲಿ (Karnataka Weather March 8) ದಿನದಿಂದ ದಿನಕ್ಕೆ ಬಿಸಿ ಹೆಚ್ಚಾಗುತಲೇ ಇದ್ದು, ಮೈಸುಡುವ ಬಿಸಿಲಿನ ಪರಿಣಾಮ ಬೆಳಗ್ಗೆ 10ರ ನಂತರ ಮನೆಯಿಂದ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ . ಇಂದು (ಮಾರ್ಚ್ 8, ಶುಕ್ರವಾರ) ರಾಜ್ಯದ ಕೆಲವು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ. ಕರಾವಳಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿ ಕೆಲವೊಂದು ಕಡೆಗಳಲ್ಲಿ ಉಷ್ಣಾಂಶ ಹೆಚ್ಚಿರಲಿದೆ. ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಾರ್ಚ್ 8ರ ಶುಕ್ರವಾರ ಮತ್ತು ಮಾರ್ಚ್ 9ರ ಶನಿವಾರ ಎರಡೂ ದಿನ ಮಳೆಯ ಮುನ್ಸೂಚನೆ ಇಲ್ಲ. ಎಲ್ಲಾ ಕಡೆ ಒಣಹವೆ ಮುಂದುವರಿದಿದೆ.
ಭಾರಿ ಮಳೆ, ಗುಡುಗು ಮಿಂಚು ಯಾವುದೂ ಇಲ್ಲದಿರುವ ಕಾರಣ ಮೀನುಗಾರರಿಗೆ ಮುನ್ನಚ್ಚರಿಕೆ ಇರುವುದಿಲ್ಲ. ಎಂದಿನಂತೆ ಮೀನುಗಾರಿಕೆ ನಡೆಸಬಹುದು. ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5.0 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿಯಲ್ಲಿ ಗರಿಷ್ಠ ಉಷ್ಣಾಂಶ ಕಲಬುರಗಿಯಲ್ಲಿ 38.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಹವಾಮಾನ
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಾರ್ಚ್ ನಿಂದ ಮೇ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದಾಗ್ಯೂ, ಮಾರ್ಚ್‌ನಲ್ಲಿ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ದಾಟುವುದಿಲ್ಲ ಮತ್ತು ಈ ತಿಂಗಳು ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಉತ್ತರ ಒಳನಾಡಿನ ಪ್ರದೇಶಗಳು ಬಿಸಿಗಾಳಿ ಪರಿಸ್ಥಿತಿಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. ದಾಖಲೆಗಳ ಪ್ರಕಾರ, 2005 ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು - 35.9 ಡಿಗ್ರಿ ಸೆಲ್ಸಿಯಸ್. 2016, 2017, 2018 ಮತ್ತು 2019 ರಲ್ಲಿ ಫೆಬ್ರವರಿಯಲ್ಲಿ ದಾಖಲಾದ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಮಾರ್ಚ್ ಮೊದಲ ವಾರ ಬೆಂಗಳೂರಿನಲ್ಲಿ ದಾಖಲೆಯ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಮಾರ್ಚ್ 5ರ ಮಂಗಳವಾರ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಈ ವರ್ಷದ ಅತ್ಯಂತ ಬಿಸಿಯಾದ ದಿನವಾಗಿದೆ. 2017ರ ಮಾರ್ಚ್ ನಲ್ಲಿ 4ನೇ ವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 2019 ರಲ್ಲಿ ಮಾರ್ಚ್ 8 ರಂದು 37.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. "ನಮ್ಮ ಮುನ್ಸೂಚನೆಗೆ ಸಂಬಂಧಿಸಿದಂತೆ, ಇದಕ್ಕೆ (ಹೆಚ್ಚಿನ ತಾಪಮಾನ) ಅನೇಕ ಕಾರಣಗಳಿವೆ. ಇದು ಜಾಗತಿಕ ನಿಯತಾಂಕವಾದ ಎಲ್‌ನಿನೋ ಬಗ್ಗೆಯೂ ಆಗಿದೆ.
ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಬಹುಶಃ ಮಾನ್ಸೂನ್ ಋತುವಿನ ಆರಂಭದಲ್ಲಿ, ಅದು ತಟಸ್ಥವಾಗಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಎ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ