logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕೊಡಗು, ಚಿಕ್ಕಮಗಳೂರಲ್ಲಿ ಹೊಸ ವರ್ಷಕ್ಕೆ ಮಳೆಯ ಸ್ವಾಗತದ ನಿರೀಕ್ಷೆ: ವಿಜಯಪುರ, ಕೊಪ್ಪಳ, ಬೀದರ್‌ನಲ್ಲಿ ಚಳಿ

Karnataka Rains: ಕೊಡಗು, ಚಿಕ್ಕಮಗಳೂರಲ್ಲಿ ಹೊಸ ವರ್ಷಕ್ಕೆ ಮಳೆಯ ಸ್ವಾಗತದ ನಿರೀಕ್ಷೆ: ವಿಜಯಪುರ, ಕೊಪ್ಪಳ, ಬೀದರ್‌ನಲ್ಲಿ ಚಳಿ

Umesha Bhatta P H HT Kannada

Dec 31, 2023 07:18 AM IST

google News

ಚಿಕ್ಕಮಗಳೂರಿನಲ್ಲಿ ಮುಸುಕಿದ ಚಳಿಯ ನೋಟ.

    • Karnataka Weather updates ಕರ್ನಾಟಕದಲ್ಲಿ ಹೊಸ ವರ್ಷದಂದು ಕೊಡಗಿನಲ್ಲಿ ಮಳೆಯಾಗುವ ಸೂಚನೆಯಿದೆ. ವಿಜಯಪುರ, ಚಿಕ್ಕಮಗಳೂರು,ಕೊಪ್ಪಳ, ಬೀದರ್‌ಗಳಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. 
ಚಿಕ್ಕಮಗಳೂರಿನಲ್ಲಿ ಮುಸುಕಿದ ಚಳಿಯ ನೋಟ.
ಚಿಕ್ಕಮಗಳೂರಿನಲ್ಲಿ ಮುಸುಕಿದ ಚಳಿಯ ನೋಟ.

ಬೆಂಗಳೂರು: ಇದು ಹೊಸ ವರ್ಷಕ್ಕೆ ಸಂತಸದ ಸುದ್ದಿಯೇ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷ ಬರ ಮಾಡಿಕೊಳ್ಳಲು ಸುಂದರ ಹವಾಮಾನವೂ ನಿಮ್ಮ ಜತೆಯಾಗಲಿದೆ.ಹೊಸ ವರ್ಷ ಆಚರಣೆಗೆಂದು ಕೊಡಗು ಹಾಗೂ ಚಿಕ್ಕಮಗಳೂರಿಗೆ ಹೋದವರು ಮಳೆಯೊಂದಿಗೆ 2024 ಕ್ಕೆ ವರುಣನ ಸಿಂಚನ ಪಡೆದು ಮುದಗೊಳ್ಳಬಹುದು.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ದಿನವನ್ನು ಕೊಡಗು ಜಿಲ್ಲೆಯಲ್ಲಿ ಮಳೆರಾಯ ಸ್ವಾಗತಿಸಬಹುದು. ಹೊಸ ವರ್ಷದ ಮರುದಿನವನ್ನುಕೊಡಗಿನ ಜತೆಯಲ್ಲಿ ಚಿಕ್ಕಮಗಳೂರಿನಲ್ಲಿಯೂ ಮಳೆ ಬರ ಮಾಡಿಕೊಳ್ಳಬಹುದು.

ಜನವರಿ 1ರಂದು ಕೊಡಗು ಜಿಲ್ಲೆಯ ಕೆಲವು ಭಾಗ ಹಾಗೂ ಜನವರಿ 2ರ ಮಂಗಳವಾರ ಕೊಡಗು ಹಾಗೂ ಚಿಕ್ಕ ಮಗಳೂರು ಜಿಲ್ಲೆಯ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ.

ಕರ್ನಾಟಕದ ಬಹುತೇಕ ಕಡೆಗಳಲ್ಲಿ ಚಳಿಯ ವಾತಾವರಣ ಹೊಸ ವರ್ಷದ ದಿನವೂ ಮುಂದುವರಿಯಲಿದೆ. ವಿಜಯಪುರ, ಕೊಪ್ಪಳ, ಬೀದರ್‌, ಚಿಕ್ಕಮಗಳೂರು, ಕೋಲಾರ ಭಾಗದಲ್ಲಿ ಚಳಿಯ ಪ್ರಮಾಣ ಕೊಂಚ ಅಧಿಕವಾಗಿಯೇ ಇದೆ.

ಮಳೆ ನಿರೀಕ್ಷೆ

ಬಹುತೇಕ 15 ದಿನಗಳಿಂದ ಕರ್ನಾಟಕದ ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ. ಅದಕ್ಕೂ ಮೊದಲು ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಆದರೆ ಹೊಸ ವರ್ಷದ ದಿನದಂದೇ ಕೊಡಗಿನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡಿನ ಕೊಡು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಸೋಮವಾರ ಸಂಜೆ ನಂತರ ಮಳೆಯಾಗಬಹುದು. ಕರ್ನಾಟಕದ ಇಳಿದ ಜಿಲ್ಲೆಗಳಲ್ಲಿ ಸೋಮವಾರ ಹಗಲಿನಲ್ಲಿ ಒಣ ಹವೆಯೇ ಮುಂದುವರಿಯಲಿದೆ.

ಮಂಗಳವಾರದಂದು ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚು. ಕರ್ನಾಟಕದ ಇತರೆ ಭಾಗಗಳಲ್ಲಿ ಒಣ ಹವೆಯ ವಾತಾವರಣವೇ ಕಂಡು ಬರಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆಯು ನೀಡಿದೆ.

ಉತ್ತರ ಕರ್ನಾಟದಲ್ಲಿ ಚಳಿ

ಕರ್ನಾಟಕದಲ್ಲಿಯೇ ಬೆಂಗಳೂರು, ಮೈಸೂರು, ಮಂಗಳೂರು ಭಾಗಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿಯೇ ಶನಿವಾರ ಹೆಚ್ಚಿನ ಚಳಿ ವಾತಾವರಣ ಕಂಡು ಬಂದಿತು. ವಿಜಯಪುರ ಜಿಲ್ಲೆಯಲ್ಲಿ ಅತಿ ಕಡಿಮೆ ಅಂದರೆ 10 ಡಿಗ್ರಿ ಸೆಲ್ಸಿಯಸ್‌ನಷ್ಟುಕನಿಷ್ಠ ತಾಪಮಾನ ದಾಖಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ 13.2 ಡಿಗ್ರಿ, ಬೀದರ್‌ನಲ್ಲಿ 13.5 ಡಿಗ್ರಿ, ಬಾಗಲಕೋಟೆಯಲ್ಲಿ 13.9 ಡಿಗ್ರಿ, ಧಾರವಾಡದಲ್ಲಿ 14.8 ಡಿಗ್ರಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 15.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿತು.

ಹಾವೇರಿಯಲ್ಲಿ 15.4 ಡಿಗ್ರಿ, ಗದಗದಲ್ಲಿ 16.3 ಡಿಗ್ರಿ, ಬೆಳಗಾವಿ ನಗರದಲ್ಲಿ 17.5 ಡಿಗ್ರಿ. ರಾಯಚೂರಿನಲ್ಲಿ 17.8 ಡಿಗ್ರಿ, ಕಲಬುರಗಿಯಲ್ಲಿ18.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವು ದಾಖಲಾಗಿತ್ತು.

ಕೋಲಾರದಲ್ಲಿ ಕಡಿಮೆ

ದಕ್ಷಿಣ ಒಳನಾಡಿನ ಕೋಲಾರ ಜಿಲ್ಲೆಯ ಚಿಕ್ಕನಹಳ್ಳಿಯಲ್ಲಿ 13.3 ಡಿಗ್ರಿ, ಚಿಕ್ಕಮಗಳೂರಿನಲ್ಲಿ 13.6 ಡಿಗ್ರಿ, ಚಾಮರಾಜನಗರದಲ್ಲಿ 15.4 ಡಿಗ್ರಿ, ಮಂಡ್ಯದಲ್ಲಿ 15.8 ಡಿಗ್ರಿ ಸೆಲ್ಸಿಯಸ್‌, ಶಿವಮೊಗ್ಗ, ಚಿತ್ರದುರ್ಗ ಹಾಗೂ ಮಡಿಕೇರಿಯಲ್ಲಿ 16.4 ಡಿಗ್ರಿ. ಚಿಂತಾಮಣಿಯಲ್ಲಿ 16.8 ಡಿಗ್ರಿ, ದಾವಣಗೆರೆಯಲ್ಲಿ 17 ಡಿಗ್ರಿ ಮೈಸೂರಲ್ಲಿ 17.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

ಕರಾವಳಿಯ ಕಾರವಾರದಲ್ಲಿ 21.2 ಡಿಗ್ರಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ21.5 ಡಿಗ್ರಿ. ಪಣಂಬೂರಿನಲ್ಲಿ 21.8 ಡಿಗ್ರಿ ಹಾಗೂ ಹೊನ್ನಾವರದಲ್ಲಿ 22.3 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಕಂಡು ಬಂದಿತು.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಸ ವರ್ಷಕ್ಕೂ ಚಳಿಯ ವಾತಾವರಣವೇ ಇರಲಿದೆ. ಆದರೆ ಮಳೆಯ ಮುನ್ಸೂಚನೆಯನ್ನಂತೂ ನೀಡಿಲ್ಲ.

ಬೆಂಗಳೂರಿನ ಮುಂದಿನ 24 ಗಂಟೆಗಳಲ್ಲಿ ಅಂದರೆ ಸೋಮವಾರ ಬೆಳಿಗ್ಗೆವರೆಗೆ ಭಾಗಶಃ ಮೋಡದ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ದಟ್ಟ ಮಂಜು ಮುಸುಕುವ ಸಾಧ್ಯತೆಗಳು ಹೆಚ್ಚಿವೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣವು 29 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನವು 18 ಡಿಗ್ರಿಯಷ್ಟು ದಾಖಲಾಗಬಹುದು. ಹೊಸ ವರ್ಷವನ್ನು ಭಾನುವಾರ ರಾತ್ರಿ ಸಂಭ್ರಮದಿಂದ ಸ್ವಾಗತಿಸಲು ಯಾವುದೇ ಅಡ್ಡಿಯೂ ಇರುವುದಿಲ್ಲ.

ಅದೇ ರೀತಿ ಮುಂದಿನ 48ಗಂಟೆಗಳಲ್ಲಿ ಅಂದರೆ ಮಂಗಳವಾರ ಬೆಳಿಗ್ಗೆವರೆಗೂ ಬೆಂಗಳೂರಿನ ಹವಾಮಾನದಲ್ಲಿ ಭಾರೀ ಏರಿಳಿತವೇನೂ ಕಂಡು ಬರುವುದಿಲ್ಲ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶದ ಪ್ರಮಾಣವೂ 18ಡಿಗ್ರಿ ಸೆಲ್ಸಿಯಸ್‌ನಷ್ಟು ಕಂಡು ಬರಬಹುದು. ಇದರಿಂದ ಹೊಸ ವರ್ಷದ ದಿನವೂ ಹವಾಮಾನ ನಿಮ್ಮ ಖುಷಿಯಲ್ಲಿ ಜತೆಯಾಗಲಿದೆ.

ಬೆಂಗಳೂರಿನಲ್ಲಿ ಶನಿವಾರವೂ ಕನಿಷ್ಠ ತಾಪಮಾನದಲ್ಲಿ ಏರಿಳಿತವಿತ್ತು. ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 16.8 ಡಿಗ್ರಿ, ಬೆಂಗಳೂರು ನಗರದಲ್ಲಿ 17.8 ಡಿಗ್ರಿ ಹಾಗೂ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 18.1 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಕಂಡು ಬಂದಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ