Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಚಳಿ,ವಿಜಯಪುರ, ಬೀದರ್, ಚಿಕ್ಕಮಗಳೂರಲ್ಲಿ ಕನಿಷ್ಠ: ಮಳೆ ಮುನ್ಸೂಚನೆಯಿಲ್ಲ
Dec 21, 2023 06:34 AM IST
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಳಿಯ ವಾತಾವರಣ ಹೆಚ್ಚಾಗಿದೆ.
- Karnataka Cold weather ಕರ್ನಾಟಕದಲ್ಲಿ(Karnataka Temperature) ಕನಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಕುಸಿತ ಕಂಡಿದೆ. ಉತ್ತರ ಕರ್ನಾಟಕದ( North Karntaka) ಬಹುತೇಕ ಭಾಗಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ.
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಚಳಿಯ ವಾತಾವರಣ. ಉತ್ತರ ಕರ್ನಾಟಕದ ವಿಜಯಪುರ, ಬೀದರ್‌ನಲ್ಲಿ ಮತ್ತೆ ಉಷ್ಣಾಂಶ ಕುಸಿದು ಚಳಿ ಹೆಚ್ಚಿದೆ.
ಕರಾವಳಿ ಭಾಗ ಹೊರತುಪಡಿಸಿದರೆ ಕರ್ನಾಟಕದೆಲ್ಲೆಡೆ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 20 ಡಿಗ್ರಿ ಸೆಲ್ಸಿಯಸ್‌ಗೂ ಕಡಿಮೆ ಇದೆ. ಇದರಿಂದ ಧನುರ್ ಮಾಸದ ಚಳಿಯ ಅನುಭವ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ಆಗುತ್ತಿದೆ.
ಕುಸಿದ ಉಷ್ಣಾಂಶ
ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಕನಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಡಿಮೆಯಾಗಿದೆ. ಆದರೆ ವಿಜಯಪುರದಲ್ಲಿ ಮಾತ್ರ ಭಾರೀ ಪ್ರಮಾಣದಲ್ಲಿಯೇ ಕುಸಿದಿದೆ.
ವಿಜಯಪುರದಲ್ಲಿ ಕಳೆದ ವಾರ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಆನಂತರ ಏರಿಕೆ ಕಂಡು ಈಗ ಮತ್ತೆ ಕುಸಿದಿದೆ. ಬುಧವಾರದಂದು ವಿಜಯಪುರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 10.5 ಡಿಗ್ರಿ ಸೆಲ್ಸಿಯಸ್.
ಬೀದರ್‌ನಲ್ಲೂ ಹೀಗೆಯೇ ಏರಿಳಿತ ಕಂಡು ಬರುತ್ತಿದೆ. ಇಲ್ಲಿಯೂ 10 ಡಿಗ್ರಿ ಸೆಲ್ಸಿಯಸ್‌ಗೂ ಕನಿಷ್ಠ ಉಷ್ಣಾಂಶ ಇಳಿದಿತ್ತು. ಆನಂತರ ಏರಿಕೆಯಾಗಿತ್ತು. ಬುಧವಾರ ಬೀದರ್‌ನಲ್ಲಿ 12.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದಿತು.
ಹಾವೇರಿ, ರಾಯಚೂರಲ್ಲಿ ಹೆಚ್ಚು
ಹಾವೇರಿ, ರಾಯಚೂರು ಭಾಗದಲ್ಲೂ ಉಷ್ಣಾಂಶ ಕುಸಿದಿದೆ. 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದ್ದ ಎರಡೂ ನಗರಗಳಲ್ಲಿ ಬುಧವಾರ 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಹಾವೇರಿಯಲ್ಲಿ 16.2 ಡಿಗ್ರಿ ಹಾಗೂ ರಾಯಚೂರಿನಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವು ಬುಧವಾರ ದಾಖಲಾಗಿ ಚಳಿ ಅನುಭವ ಹೆಚ್ಚಿತ್ತು.
ಬೆಳಗಾವಿ ನಗರ ಹಾಗೂ ಬೆಳಗಾವಿ ವಿಮಾನ ನಿಲ್ದಣಾ ಪ್ರದೇಶ, ಬಾಗಲಕೋಟೆ, ಧಾರವಾಡದಲ್ಲೂ ಚಳಿಯ ಅನುಭವ ಕೊಂಚ ಹೆಚ್ಚೇ ಆಯಿತು. ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆಯಲ್ಲಿ 15.1 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.8 ಡಿಗ್ರಿ, ಬೆಳಗಾವಿ ನಗರದಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿತ್ತು. ಕೊಪ್ಪಳದಲ್ಲಿ 16.2 ಡಿಗ್ರಿ,, ಗದಗದಲ್ಲಿ 16 ಡಿಗ್ರಿ, ಕಲಬುರಗಿಯಲ್ಲಿ 17.4 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.
ಚಿಕ್ಕಮಗಳೂರಲ್ಲಿ ಚಳಿ
ದಕ್ಷಿಣ ಒಳನಾಡಿನ ಚಿಕ್ಕಮಗಳೂರಲ್ಲಿ 14.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರಿನಲ್ಲಿ ಚಳಿಯ ವಾತಾವರಣವೇ ಇದೆ.
ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ16.1ಡಿಗ್ರಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 17 ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೆಂಗಳೂರು ನಗರದಲ್ಲಿ 17.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿತ್ತು.
ದಾವಣಗೆರೆಯಲ್ಲಿ 16.5 ಡಿಗ್ರಿ, ಚಿತ್ರದುರ್ಗದಲ್ಲಿ 16.6 ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಶಿವಮೊಗ್ಗದಲ್ಲಿ17.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶದ ಪ್ರಮಾಣವಿತ್ತು.
ಮಡಿಕೇರಿಯಲ್ಲಿ 18.6 ಡಿಗ್ರಿ. ಮಂಡ್ಯದಲ್ಲಿ 18.4 ಡಿಗ್ರಿ, ಮೈಸೂರಿನಲ್ಲಿ 19 ಡಿಗ್ರಿ, ಚಾಮರಾಜನಗರದಲ್ಲಿ 18.9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವಿತ್ತು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ಚಿಂತಾಮಣಿಯಲ್ಲಿ 15.9 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಕಂಡು ಬಂದಿತು.
ಕರಾವಳಿಯಲ್ಲಿ ಯಥಾಸ್ಥಿತಿ
ಕರಾವಳಿಯಲ್ಲಿ ಹೊನ್ನಾವರ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ 23.7 ಡಿಗ್ರಿ, ಕಾರವಾರದಲ್ಲಿ 24.4 ಡಿಗ್ರಿ ಹಾಗೂ ಮಂಗಳೂರಿನ ಪಣಂಬೂರಿನಲ್ಲಿ 22.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಯಿತು.
ಬೆಂಗಳೂರು ಹವಾಮಾನ
ಮುಂದಿನ ಎರಡು ದಿನದಲ್ಲಿ ಅಂದರೆ ಗುರುವಾರ ಹಾಗೂ ಶುಕ್ರವಾರದಂದು ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯ ವಾತಾವರಣವಿಲ್ಲ. ಸಾಮಾನ್ಯವಾಗಿ ಎಲ್ಲೆಡೆ ಮೋಡ ಕವಿದ ವಾತಾವರಣವೇ ಕಂಡು ಬರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿವೆ. ಬೆಂಗಳೂರಿನ ಗರಿಷ್ಠ ಉಷ್ಣಾಂಶವು 26ರಿಂದ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್ ನಷ್ಟು ಕಂಡು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮಳೆಯಿಲ್ಲ
ಕರ್ನಾಟಕದ ಯಾವುದೇ ಭಾಗದಲ್ಲೂ ಮುಂದಿನ ಎರಡು ದಿನ ಮಳೆಯ ಸನ್ನಿವೇಶವಿಲ್ಲ. ಗುರುವಾರ ಹಾಗೂ ಶುಕ್ರವಾರದಂದು ಕರ್ನಾಟಕದಾದ್ಯಂತ ಒಣ ಹವೆಯ ವಾತಾವರಣವೇ ಇರಲಿದೆ. ಗುಡುಗು, ಮಿಂಚಿನ ಮುನ್ನೆಚ್ಚರಿಕೆಯೂ ಇಲ್ಲ. ಎರಡು ದಿನದಿಂದ ಯಾವ ಭಾಗದಲ್ಲಿ ಮಳೆಯೂ ಆಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.