logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಬೆಂಗಳೂರು, ಮೈಸೂರಲ್ಲಿ ಚಳಿ ಗಾಳಿ: ಉತ್ತರ ಕರ್ನಾಟಕದೆಲ್ಲೆಡೆ ಚಳಿ ಅಧಿಕ, ಕರಾವಳಿಯಲ್ಲಿ ಒಣಹವೆ

Karnataka Weather: ಬೆಂಗಳೂರು, ಮೈಸೂರಲ್ಲಿ ಚಳಿ ಗಾಳಿ: ಉತ್ತರ ಕರ್ನಾಟಕದೆಲ್ಲೆಡೆ ಚಳಿ ಅಧಿಕ, ಕರಾವಳಿಯಲ್ಲಿ ಒಣಹವೆ

Umesha Bhatta P H HT Kannada

Dec 27, 2023 06:49 AM IST

google News

ಮೈಸೂರು ಭಾಗದಲ್ಲಿ ಚಳಿಯಿಂದ ಬೆಳಿಗ್ಗೆಯೇ ಬಿಸಿಗೆ ದೇಹ ಒಡ್ಡುವುದು ಅಲ್ಲಲ್ಲಿ ಕಂಡು ಬಂದಿದೆ.

    • Karnataka Weather Updates ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರಿದಿದೆ. 
ಮೈಸೂರು ಭಾಗದಲ್ಲಿ ಚಳಿಯಿಂದ ಬೆಳಿಗ್ಗೆಯೇ ಬಿಸಿಗೆ ದೇಹ ಒಡ್ಡುವುದು ಅಲ್ಲಲ್ಲಿ ಕಂಡು ಬಂದಿದೆ.
ಮೈಸೂರು ಭಾಗದಲ್ಲಿ ಚಳಿಯಿಂದ ಬೆಳಿಗ್ಗೆಯೇ ಬಿಸಿಗೆ ದೇಹ ಒಡ್ಡುವುದು ಅಲ್ಲಲ್ಲಿ ಕಂಡು ಬಂದಿದೆ.

ಬೆಂಗಳೂರು: ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣದ ಹಲವು ಭಾಗದಲ್ಲಿ ಚಳಿಯ ಜತೆಗೆ ಚಳಿ ಗಾಳಿಯೂ ಬೀಸುತ್ತಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಳಿಗ್ಗೆ ಹೊತ್ತಿನಲ್ಲಿ ಕೆಲವು ದಿನಗಳಿಂದ ಚಳಿ ಪ್ರಮಾಣ ದಕ್ಷಿಣ ಕರ್ನಾಟಕದ ಭಾಗದ ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲೂ ಅಧಿಕವಾಗಿದ್ದು, ಆಗಾಗ ಚಳಿ ಗಾಳಿಯೂ ಕಂಡು ಬಂದಿದೆ.

ಉತ್ತರ ಕರ್ನಾಟಕದ ವಿಜಯಪುರ, ಬೀದರ್‌, ಧಾರವಾಡ, ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದ ಪ್ರಮಾಣ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿಯಲ್ಲಿದ್ದು, ಚಳಿಯ ಪ್ರಮಾಣ ಯಥಾರೀತಿ ಮುಂದುವರಿದಿದೆ.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಮುಂದಿನ ಐದು ದಿನ ಮಳೆಯ ವಾತಾವರಣ ಇರುವುದಿಲ್ಲ. ಹಗಲಲ್ಲಿ ಓಣ ಹವೆಯ ವಾತಾವರಣ ಇರಲಿದ್ದು. ಬೆಳಗಿನ ಚಳಿಯಲ್ಲಿ ಏರಿಳಿತ ಇರಬಹುದು.

ಉತ್ತರ ತತ್ತರ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣವೇ ಮುಂದುವರಿದಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲೇ ಸತತವಾಗಿ ಕಡಿಮೆ ತಾಪಮಾನ ದಾಖಲಾಗುತ್ತಿದೆ. ಮಂಗಳವಾರದಂದು ವಿಜಯಪುರದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶದ ಪ್ರಮಾಣ 10.9 ಡಿಗ್ರಿ ಸೆಲ್ಸಿಯಸ್‌. ಒಂದು ದಿನದಲ್ಲಿ ಸುಮಾರು 2.4 ಡಿಗ್ರಿ ಕುಸಿತ ಕಂಡಿದೆ. ಆದರೆ ವಿಜಯಪುರ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್‌ ಇದ್ದು, ಹಗಲು ವೇಳೆ ಒಣ ಹವೆ ವಾತಾವರಣವೇ ಅಧಿಕವಾಗಿದೆ.

ಬೀದರ್‌ನಲ್ಲೂ 12.5 ಡಿಗ್ರಿ, ಧಾರವಾಡದಲ್ಲಿ 13.8 ಡಿಗ್ರಿ. ಗದಗದಲ್ಲಿ 14.2 ಡಿಗ್ರಿ, ಹಾವೇರಿ ಹಾಗೂ ಬಾಗಲಕೋಟೆಯಲ್ಲಿ 14.4 ಡಿಗ್ರಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 14.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಕಂಡು ಬಂದಿತು.

ರಾಯಚೂರಿನಲ್ಲಿ 16 ಡಿಗ್ರಿ. ಕೊಪ್ಪಳದಲ್ಲಿ 16.8 ಡಿಗ್ರಿ, ಬೆಳಗಾವಿ ನಗರದಲ್ಲಿ 17 ಡಿಗ್ರಿ ಹಾಗೂ ಕಲಬುರಗಿಯಲ್ಲಿ 18.1 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವು ದಾಖಲಾಗಿತ್ತು.

ದಕ್ಷಿಣದಲ್ಲಿ ಗಾಳಿ

ದಕ್ಷಿಣ ಕರ್ನಾಟಕದ ಹಲವು ಕಡೆ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿತು. ಕೋಲಾರ ಭಾಗದ ಚಿಕ್ಕನಹಳ್ಳಿಯಲ್ಲಿ 12.6 ಡಿಗ್ರಿ ಹಾಗೂ ಚಿಂತಾಮಣಿಯಲ್ಲಿ ಅತಿ ಕಡಿಮೆ 13.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ಚಾಮರಾಜನಗರದಲ್ಲಿ 14.1 ಡಿಗ್ರಿ. ಚಿಕ್ಕಮಗಳೂರು ಹಾಗೂ ದಾವಣಗೆರೆಯಲ್ಲಿ 14.2 ಡಿಗ್ರಿ, ಮಂಡ್ಯದಲ್ಲಿ 15.2 ಡಿಗ್ರಿ, ಶಿವಮೊಗ್ಗದಲ್ಲಿ 15.6 ಡಿಗ್ರಿ, ಹಾಸನದಲ್ಲಿ 15.6 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನವು ಕಂಡು ಬಂದಿತು.

ಮೈಸೂರಲ್ಲಿ 16 ಡಿಗ್ರಿ,. ಚಿತ್ರದುರ್ಗದಲ್ಲಿ 17.2 ಡಿಗ್ರಿ. ಮಡಿಕೇರಿಯಲ್ಲಿ 18.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನವಿತ್ತು.

ಕರಾವಳಿಯಲ್ಲಿ ಕುಸಿದ ಚಳಿ

ಎರಡು ಮೂರು ದಿನದಿಂದ ಕರಾವಳಿ ಭಾಗದಲ್ಲಿ ಇದ್ದ ಚಳಿಯ ಪ್ರಮಾಣ ಮಂಗಳವಾರ ಕಡಿಮೆಯಾಯಿತು, ಕಾರವಾರದಲ್ಲಿ ಕನಿಷ್ಠ ತಾಪಮಾನ 21.2 ಡಿಗ್ರಿ ಇದ್ದರೆ, ಹೊನ್ನಾವರದಲ್ಲಿ 23.1 ಡಿಗ್ರಿ, ಪಣಂಬೂರಿನಲ್ಲಿ 23.2 ಡಿಗ್ರಿ ಹಾಗೂ ಮಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ 23.3 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಕರ್ನಾಟಕದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 30 ಡಿಗ್ರಿ ಆಸುಪಾಸಿನಲ್ಲಿದ್ದರೆ, ಕರಾವಳಿಯಲ್ಲಿ ಮಾತ್ರ ಅಧಿಕವಾಗಿತ್ತು. ಕಾರವಾರ ಹಾಗೂ ಹೊನ್ನಾವರ ಭಾಗದಲ್ಲಿ 36.5 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಮಂಗಳೂರು ಭಾಗದಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಸುತ್ತಮುತ್ತ ಕಂಡು ಬಂದಿತು.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದೆ. ಇದು ಮುಂದಿನ ಮೂರ್ನಾಲ್ಕು ದಿನದಲ್ಲಿ ಇದೇ ಪ್ರಮಾಣದಲ್ಲಿ ಇರುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ಅಂದರೆ ಗುರುವಾರ ಬೆಳಿಗ್ಗೆವರೆಗೂ ಬೆಂಗಳೂರು ಭಾಗದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ದಟ್ಟ ಮಂಜು ಮುಸುಕುವ ಸಾಧ್ಯತೆಗಳು ಅಧಿಕವಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ನಷ್ಟಿದ್ದರೆ, ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು.

ಅದೇ ರೀತಿ ಮುಂದಿನ 48 ಗಂಟೆಗಳಲ್ಲಿ ಅಂದರೆ ಶುಕ್ರವಾರ ಬೆಳಗಿನವರೆಗೂ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಕನಿಷ್ಠ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್‌ ಇರಬಹುದು. ಎಲ್ಲೆಡೆ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಬೆಳಗಿನ ಹೊತ್ತಿನಲ್ಲಿ ದಟ್ಟವಾಗಿ ಮಂಜು ಮುಸುಕಿದ ಸನ್ನಿವೇಶ ಇರಲಿದೆ.

ಮಂಗಳವಾರವೂ ಬೆಂಗಳೂರು ನಗರ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನ ಹಾಗೂ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಭಾಗಲ್ಲಿ ಚಳಿಯಲ್ಲಿ ಏರಿಳಿತ ಕಂಡು ಬಂದಿತು. ಬೆಂಗಳೂರು ನಗರದಲ್ಲಿ 17 ಡಿಗ್ರಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ 16 ಡಿಗ್ರಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಭಾಗದಲ್ಲಿ ಕನಿಷ್ಠ ತಾಪಮಾನವೂ 15.4 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

=====

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ