Karnataka Weather: ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ ಸಹಿತ ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಚಳಿ ಪ್ರಮಾಣ
Dec 26, 2023 06:42 AM IST
ಬೀದರ್‌ನಲ್ಲಿ ಚಳಿಯಿಂದಾಗಿ ಜನ ಬೆಚ್ಚನೆಯ ವಾತಾವರಣಕ್ಕೆ ಮೊರೆ ಹೋದರು.
- North Karnataka Cold days ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಅಧಿಕವಾಗಿದೆ. ಯಾವ ಜಿಲ್ಲೆಯಲ್ಲಿ ಚಳಿ ಪ್ರಮಾಣ ಎಷ್ಟಿತ್ತು. ಇಲ್ಲಿದೆ ವರದಿ.
ಬೆಂಗಳೂರು: ಕರ್ನಾಟಕದಲ್ಲಿ ಚಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಧಾರವಾಡ, ಬೀದರ್, ಗದಗ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಕಡಿಮೆಯಾಗಿದ್ದರಿಂದ ಜನ ಚಳಿಯಲ್ಲಿ ನಡುಗುವಂತಾಗಿದೆ.
ದಕ್ಷಿಣ ಕರ್ನಾಟಕದ ಚಿಕ್ಕಮಗಳೂರು, ದಾವಣಗೆರೆ, ಚಿಂತಾಮಣಿ ಸಹಿತ ಕೆಲವು ಕಡೆ ಚಳಿಯ ವಾತಾವರಣವಿದೆ. ಬೆಂಗಳೂರು, ಮೈಸೂರು, ಕೊಡಗು ಭಾಗದಲ್ಲೂ ಸಾಧಾರಣ ಚಳಿಯಿದೆ. ಕರಾವಳಿ ಭಾಗದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ.
ಕರ್ನಾಟದ ರಾಜ್ಯದಾದ್ಯಂತ ಮುಂದಿನ ಎರಡು ದಿನ ಮಳೆಯ ವಾತಾವರಣವಿಲ್ಲ. ಇನ್ನೂ ಒಂದು ವಾರ ಒಣ ಹವೆಯೇ ಇರಲಿದೆ. 2024 ಜನವರಿ 1ರಿಂದ ರಾಜ್ಯದಾದ್ಯಂತ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಚಳಿಯ ಪ್ರಮಾಣ ಏರಿಳಿತ
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣವೇ ಸೋಮವಾರವೂ ಕಂಡು ಬಂದಿತು. ಮೂರ್ನಾಲ್ಕು ದಿನದಿಂದ ಕನಿಷ್ಠ ಉಷ್ಣಾಂಶ ಎಲ್ಲೆಡೆ ಕುಸಿದಿರುವುದರಿಂದ ಚಳಿಯ ಅನುಭವ ಅಧಿಕವಾಗಿದೆ.
ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶವು 10.5 ಡಿಗ್ರಿ ಸೆಲ್ಸಿಯಸ್‌ನಷ್ಟು ಸತತವಾಗಿ ಉತ್ತರ ಕರ್ನಾಟಕದ ವಿಜಯಪುರದಲ್ಲಿಯೇ ದಾಖಲಾಗಿದೆ.
ಧಾರವಾಡದಲ್ಲಿ 12.8 ಡಿಗ್ರಿ, ಬೀದರ್‌ನಲ್ಲಿ 13ಡಿಗ್ರಿ, ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಗದಗದಲ್ಲಿ 13.2 ಡಿಗ್ರಿ, ಬಾಗಲಕೋಟೆಯಲ್ಲಿ 14.5 ಡಿಗ್ರಿ., ಹಾವೇರಿಯಲ್ಲಿ 14.6 ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕೊಪ್ಪಳದಲ್ಲಿ 15.3 ಡಿಗ್ರಿ, ರಾಯಚೂರಿನಲ್ಲಿ 15.4 ಡಿಗ್ರಿ, ಬೆಳಗಾವಿ ನಗರದಲ್ಲಿ 15.5 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 17.8 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿದೆ.
ಚಿಕ್ಕಮಗಳೂರಲ್ಲಿ ಯಥಾರೀತಿ
ಉತ್ತರದ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಚಳಿ ಇಲ್ಲದೇ ಇದ್ದರೂ ಅಲ್ಲಲ್ಲಿ ಚಳಿಯ ದಟ್ಟ ಅನುಭವವಾಗಿದೆ. ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಚಳಿ ವಾತಾವರಣ ಹಲವು ದಿನದಿಂದ ಮುಂದುವರಿದಿದೆ. ಚಿಕ್ಕಮಗಳೂರಿನಲ್ಲಿ 14 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿಯಲ್ಲಿ 14.3 ಡಿಗ್ರಿ, ದಾವಣಗೆರೆಯಲ್ಲಿ 14.5 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.
ಹಾಸನದಲ್ಲಿ 15.8 ಡಿಗ್ರಿ. ಚಿತ್ರದುರ್ಗದಲ್ಲಿ 16.6 ಡಿಗ್ರಿ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ 17.6 ಡಿಗ್ರಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ 17.9 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮೈಸೂರಲ್ಲಿ 17 ಡಿಗ್ರಿ, ಮಂಡ್ಯದಲ್ಲಿ 18 ಡಿಗ್ರಿ, ಮಡಿಕೇರಿಯಲ್ಲಿ 18.2 ಡಿಗ್ರಿ, ಬೆಂಗಳೂರು ನಗರದಲ್ಲಿ 18.6 ಡಿಗ್ರಿ ಸೆಲ್ಸಿಯಸ್ ನಷ್ಟು ಕನಿಷ್ಠ ಉಷ್ಣಾಂಶವಿತ್ತು.
ಕರಾವಳಿ ಭಾಗ
ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಒಂದೇ ದಿನದಲ್ಲಿ ಕೊಂಚ ಏರಿಕೆ ಕಂಡು ಬಂದಿತು.
ಕಾರವಾರದಲ್ಲಿ 20.3 ಡಿಗ್ರಿ, ಹೊನ್ನಾವರದಲ್ಲಿ 21.8 ಡಿಗ್ರಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ 22.3 ಡಿಗ್ರಿ ಹಾಗೂ ಪಣಂಬೂರಿನಲ್ಲಿ 22.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 24ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದ ಸಮಯದಲ್ಲಿ ಮಂಜು ಇಲ್ಲವೇ ದಟ್ಟ ಮಂಜು ಮುಸುಕಿದ ವಾತಾವರಣ ಇರಬಹುದು. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 18 ಡಿಗ್ರಿ ಆಸುಪಾಸಿನಲ್ಲಿರಲಿದೆ.
ಮುಂದಿನ 48 ಗಂಟೆಗಳಲ್ಲಿ ಅಂದರೆ ಗುರುವಾರ ಬೆಳಿಗ್ಗೆವರೆಗೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಕವಿದ ಸನ್ನಿವೇಶ ಇರಲಿದೆ.ದಟ್ಟ ಮಂಜು ಮುಸುಕಿದ ವಾತಾವರಣ ಕೆಲವು ಕಡೆಗಳಲ್ಲಿ ಕಾಣಬಹುದು. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಗಣನೀಯ ವ್ಯತ್ಯಾಸಗಳೇನೂ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ವರದಿಯಲ್ಲಿ ತಿಳಿಸಿದೆ.