logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಕರ್ನಾಟಕದಲ್ಲಿ ಚಳಿ ಹೆಚ್ಚಳ, ಬೀದರ್‌ನಲ್ಲಿ ಕನಿಷ್ಠ: ಮುಂದಿನ ವಾರವೂ ಮಳೆಯಿಲ್ಲ

Karnataka Weather: ಕರ್ನಾಟಕದಲ್ಲಿ ಚಳಿ ಹೆಚ್ಚಳ, ಬೀದರ್‌ನಲ್ಲಿ ಕನಿಷ್ಠ: ಮುಂದಿನ ವಾರವೂ ಮಳೆಯಿಲ್ಲ

Umesha Bhatta P H HT Kannada

Dec 23, 2023 06:44 AM IST

google News

ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ.

    • Cold days in North Karnataka ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಅಧಿಕವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಇದು ಇನ್ನೂ ಅಧಿಕವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ( IMD) ಮುನ್ಸೂಚನೆ ನೀಡಿದೆ. 
ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ.
ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಹೆಚ್ಚಿದೆ.

ಬೆಂಗಳೂರು: ಕರ್ನಾಟಕದ ಕರಾವಳಿ ಹೊರತುಪಡಿಸಿದರೆ ಬಹುತೇಕ ಕಡೆ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದೆ. ಇದರಿಂದ ಚಳಿಯ ಪ್ರಮಾಣ ಹೆಚ್ಚಳವಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಎರಡು ದಿನದಲ್ಲಿ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್‌ ಕುಸಿತ ಕಾಣಲಿದ್ದು, ಚಳಿಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನಲ್ಲಿ ಶುಕ್ರವಾರದಂದು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಲೆನಾಡಿನ ಚಿಕ್ಕಮಗಳೂರಿನಲ್ಲೂ ಚಳಿಯ ವಾತಾವರಣ ಯಥಾರೀತಿ ಮುಂದುವರಿದಿದೆ. ಬೆಂಗಳೂರು, ಮೈಸೂರು ಭಾಗದಲ್ಲೂ ಚಳಿ ಮುಂದುವರಿದಿದ್ದು, ಮುಂದಿನ ವಾರವೂ ಚಳಿ ಇರಲಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಮುಂದಿನ ವಾರವೂ ಕರ್ನಾಟಕದಲ್ಲಿ ಮಳೆ ಇರುವುದಿಲ್ಲ. ಕ್ರಿಸ್‌ಮಸ್‌ ಹಬ್ಬದ ದಿನ ದಕ್ಷಿಣ ಒಳನಾಡಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಮಾತ್ರ ನೀಡಲಾಗಿದೆ.

ಎರಡು ದಿನದಲ್ಲಿ ಕುಸಿತ

ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೆರಡು ದಿನದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಚಳಿ ಇನ್ನಷ್ಟು ಹೆಚ್ಚಲಿದೆ. ನೆರೆಯ ತೆಲಂಗಾಣ ಭಾಗದಲ್ಲಿ ಕನಿಷ್ಠ ಉಷ್ಣಾಂಶ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಅಧಿಕ ಚಳಿ ಇರುವ ಪ್ರಭಾವ ಕರ್ನಾಟಕದ ಬೀದರ್‌ ಜಿಲ್ಲೆ ಮೇಲೂ ಆಗಿದೆ. ಬೀದರ್‌ನಲ್ಲಿ ಅತೀ ಕಡಿಮೆ ಎಂದರೆ 10.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಕಂಡು ಬಂದಿದೆ. ವಿಜಯಪುರದಲ್ಲಿ 12.1 ಡಿಗ್ರಿ, ರಾಯಚೂರಿಯಲ್ಲಿ 13.8 ಡಿಗ್ರಿ. ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆಯಲ್ಲಿ 15.3 ಡಿಗ್ರಿ, ಕಲಬುರಗಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.6 ಡಿಗ್ರಿ, ಗದಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಶುಕ್ರವಾರವಿತ್ತು.

ಕೊಪ್ಪಳದಲ್ಲಿ 16.6 ಡಿಗ್ರಿ, ಹಾವೇರಿಯಲ್ಲಿ 16.8 ಡಿಗ್ರಿ ಸೆಲ್ಸಿಯಸ್‌, ಬೆಳಗಾವಿ ನಗರದಲ್ಲಿ 18.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವು ಕಂಡು ಬಂದಿತು.

ದಕ್ಷಿಣ ಒಳನಾಡಿನ ಭಾಗದಲ್ಲೂ ಚಳಿಯ ವಾತಾವರಣವಿತ್ತು. ಚಿಕ್ಕಮಗಳೂರಿನಲ್ಲಿ 14.2 ಡಿಗ್ರಿ, ಚಿಂತಾಮಣಿಯಲ್ಲಿ 16.4 ಡಿಗ್ರಿ, ದಾವಣಗೆರೆಯಲ್ಲಿ 16.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಹಾಸನ ಹಾಗೂ ಮೈಸೂರಿನಲ್ಲಿ 17 ಡಿಗ್ರಿ, ಮಂಡ್ಯದಲ್ಲಿ 17.1 ಡಿಗ್ರಿ, ಚಾಮರಾಜನಗರದಲ್ಲಿ 17.3 ಡಿಗ್ರಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 17.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿತು.

ಬೆಂಗಳೂರು ನಗರ ಹಾಗೂ ಚಿತ್ರದುರ್ಗದಲ್ಲಿ 18 ಡಿಗ್ರಿ, ಶಿವಮೊಗ್ದಲ್ಲಿ 18.4 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ಇನ್ನು ಕರಾವಳಿ ಭಾಗದಲ್ಲಿ ಹೊನ್ನಾವರದಲ್ಲಿ 22.3 ಡಿಗ್ರಿ, ಕಾರವಾರದಲ್ಲಿ 22.9 ಡಿಗ್ರಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ 24.6 ಡಿಗ್ರಿ, ಪಣಂಬೂರಿನಲ್ಲಿ 24.8 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿತು.

ಮಳೆ ಇಲ್ಲ

ಕರ್ನಾಟದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ. 23 24, 26, 27ರಂದು ಒಣಹವೆಯ ವಾತಾವರಣ ಕರ್ನಾಟಕದಲ್ಲಿ ಇರಲಿದೆ. ಡಿ.25 ರ ಸೋಮವಾರ ಸಂಜೆ ಇಲ್ಲವೇ ರಾತ್ರಿಯಂದು ಕರ್ನಾಟಕದ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉಳಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗಲು ವೇಳೆ ಒಣಹವೆಯ ವಾತಾವರಣ ಇರಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹವಾಮಾನ

ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಮಳೆಯ ಮುನ್ಸೂಚನೆಯಿಲ್ಲ. ಬದಲಿಗೆ ಚಳಿಯೇ ಅಧಿಕವಾಗಿ ಇರಲಿದೆ.

ಮುಂದಿನ 24 ಗಂಟೆಗಳಲ್ಲಿ ಅಂದರೆ ಶನಿವಾರದಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಮುಂಜಾನೆ ಸಮಯದಲ್ಲಿ ಮಂಜು ಮುಸುಕುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು.

ಅದೇ ರೀತಿ ಮುಂದಿನ 48 ಗಂಟೆಗಳಲ್ಲಿ ಸೋಮವಾರ ಬೆಳಿಗಿನವರೆಗೂ ಮೋಡ ಕವಿದ ವಾತಾವರಣವೇ ಇರಲಿದ್ದು. ಮಂಜು ಮುಸುಕಿದ ವಾತಾವರಣವನ್ನು ಬೆಳಗಿನ ಜಾವವೇ ಅನುಭವಿಸಲಿದ್ದೀರಿ. ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಖಲಾಗಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ