logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಉಕ, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭಾರೀ ಮಳೆ, ಕೊಡಗು, ಬೆಳಗಾವಿ, ಉಡುಪಿ, ದಕಗೆ ಅಲರ್ಟ್‌ ; ಕೊಡಗಲ್ಲಿ ಶಾಲೆ ರಜೆ

Karnataka Rains: ಉಕ, ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಭಾರೀ ಮಳೆ, ಕೊಡಗು, ಬೆಳಗಾವಿ, ಉಡುಪಿ, ದಕಗೆ ಅಲರ್ಟ್‌ ; ಕೊಡಗಲ್ಲಿ ಶಾಲೆ ರಜೆ

Umesha Bhatta P H HT Kannada

Jul 30, 2024 10:42 AM IST

google News

ಭಾರೀ ಮಳೆಯಿಂದ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ.

    • Rain Updates ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಂಗಳವಾರ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.
ಭಾರೀ ಮಳೆಯಿಂದ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ.
ಭಾರೀ ಮಳೆಯಿಂದ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ.

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಂಗಳವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು, ಕರಾವಳಿ ಹಾಗೂ ಮಲೆನಾಡು ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀಯಿಂದ ಹೆಚ್ಚು ಮಳೆಯಾಗುವ ಸೂಚನೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಆರೆಂಜ್‌ ಅಲರ್ಟ್‌ ಅನ್ನು ಘೋಷಣೆ ಮಾಡಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದೆ. ಇದಲ್ಲದೇ ಬೆಂಗಳೂರು, ಮೈಸೂರು ಸಹಿತ ದಕ್ಷಿಣ ಒಳನಾಡಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ.

ಕರ್ನಾಟಕದ ಒಳನಾಡು, ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳವಾರವೂ ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀಯಿಂದ ಹೆಚ್ಚಿನ ಮಳೆಯಾಗಲಿದೆ. ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆಯಾಗಲಿದೆ. ಈ ಜಿಲ್ಲೆಗಳಿಗೆ ಅಲರ್ಟ್‌ ಕೂಡ ಘೋಷಿಸಲಾಗಿದೆ. ಉಳಿದಂತೆ ಇತರೆ ಸಾಧಾರಣ ಮಳೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿಯನ್ನು ಈಗಾಗಲೇ ನೀಡಿದೆ.

ಕರಾವಳಿ ಭಾಗದಲ್ಲಿ ಸಮುದ್ರ ಕೂಡ ಹೆಚ್ಚಿನ ಅಲೆಗಳನ್ನು ತರಲಿದೆ. ಬೈಂದೂರಿನಿಂದ ಕಾಪುವರೆಗೆ ಹೈ ವೇವ್‌ ಅಲರ್ಟ್‌ ನೀಡಲಾಗಿದೆ. ಎತ್ತರ ಅಲೆಗಳು ಇರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡದ ಮೂಲ್ಕಿಯಿಂದ ಮಂಗಳೂರು ಭಾಗ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಿಂದ ಭಟ್ಕಳದವರೆಗೂ ಅಲೆಗಳ ಎಚ್ಚರಿಕೆಯನ್ನು ನೀಡಲಾಗಿದೆ. ಈ ಕಾರಣದಿಂದ ಈ ಭಾಗದಲ್ಲಿ ಮನರಂಜನಾ ಚಟುವಟಿಕೆ ನಿಲ್ಲಿಸಲಾಗಿದೆ.

ಶಿವಮೊಗ್ಗದಲ್ಲಿ ಭಾರೀ ಮಳೆ

ಶಿವಮೊಗ್ಗ ಜಿಲ್ಲೆಯಲ್ಲೂ ಎಡಬಿಡದೇ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ಮಂಗಳವಾರ ಬೆಳ್ಳಂಬೆಳಿಗ್ಗೆ ಆರಂಭವಾದ ಮಳೆ ಸತತ 5 ಗಂಟೆಯಿಂದ ಸುರಿಯುತ್ತಿದೆ. ಇದರ ಪರಿಣಾಮ ನಗರ ಹೋಬಳಿ‌ ನೆರೆಗೆ ತುತ್ತಾಗಿದೆ. ಸಂಡೋಡಿಯಲ್ಲಿ ಕಿರು ಸೇತುವೆ ಮುಳುಗಿ ಹೋಗಿದೆ. ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಮನೆ ದ್ವೀಪದಂತಾಗಿದೆ. ಮಳೆಯ ಆರ್ಭಟ ಎಷ್ಟಿದೆ ಎಂದರೆ ಯಾರು ಮನೆಯಿಂದ ಹೊರಬರದಂತೆ ವಾತಾವರಣ ನಿರ್ಮಾಣವಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕೊಡಗಿನಲ್ಲೂ ಭಾರೀ ಮಳೆಯಾಗುತ್ತಿದೆ. ಮಂಗಳವಾರ ಬೆಳಗಿನ ಜಾವದಿಂದಲೇ ಮಳೆ ಕಂಡು ಬಂದಿದೆ. ತಲಕಾವೇರಿ, ಭಾಗಮಂಡಲ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಭಾಗಮಂಡಲ ಸಂಗಮ ಬಳಿ ಪ್ರವಾಹದ ವಾತಾವರಣವಿದೆ. ದೇಗುಲವೂ ದ್ವೀಪದಂತಾಗಿದೆ. ಇದಲ್ಲದೇ ಕೊಡಗಿನ ಹಲವು ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೂ ರಜೆ ನೀಡಲಾಗಿದೆ ಎಂದು ಡಿಡಿಪಿಐ ಹಾಗೂ ಪಿಯುಡಿಡಿ ಪ್ರಕಟಣೆ ತಿಳಿಸಿದೆ.

ಶ್ರೀಮಂಗಲ - ಕುಟ್ಟ ನಡುವಿನ ಮಂಚಳ್ಳಿ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ

ಶ್ರೀಮಂಗಲ - ಕುಟ್ಟ ನಡುವಿನ ಕಾಯಿಮನೆ, ಮಂಚಳ್ಳಿ ಗ್ರಾಮದ ರಸ್ತೆಯಲ್ಲಿ ಭೂಕುಸಿತವಾಗಿರುವ ಹಿನ್ನೆಲೆ ಮುಂಜಾಗ್ರತಾಕ್ರಮವಾಗಿ ಮಂಚಳ್ಳಿ ಭಾಗದ ರಸ್ತೆಯಲ್ಲಿ ಎಲ್ಲಾ ವರ್ಗದ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆ2024 ಆಗಸ್ಟ್‌ 27 ವರೆಗೆ ಚಾಲ್ತಿಯಲ್ಲಿರಲಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ನೀಡಿರುವ ವರದಿಯಂತೆ ಮುಂದಿನ ಕೆಲವು ದಿನಗಳ ಕಾಲ ಅತಿ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ಇರುತ್ತದೆ. ಹವಾಮಾನ ಇಲಾಖೆಯ ವರದಿಯಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ, ಮಡಿಕೇರಿ - ಕುಟ್ಟ ರಾಜ್ಯ ಹೆದ್ದಾರಿಯ ಸಂ. 89ರ ಕಿ.ಮೀ. 80.40ರಲ್ಲಿನ ಮಂಚಳ್ಳಿ ಗ್ರಾಮದ (ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸುವುದು ಮತ್ತು ಬದಲೀ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವುದು ಸೂಕ್ತವೆಂದು ಕಂಡುಬಂದ ಕಾರಣ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕರು ಈ ರಸ್ತೆಗೆ ಬದಲಾಗಿ ಕುಟ್ಟ - ಕೇಂಬುಕೊಲ್ಲಿ - ಕಾನೂರು ಜಿಲ್ಲಾ ಮುಖ್ಯರಸ್ತೆಯ ಮುಖಾಂತರ ಕುಟ್ಟ - ಪೊನ್ನಂಪೇಟೆ ನಡುವೆ ಸಂಚರಿಸಬಹುದಾಗಿದೆ( ಅಂತರ 30 ಕಿ.ಮೀ). ಅಲ್ಲದೇ ಶ್ರೀಮಂಗಲ - ನಾಲ್ವೇರಿ ಜಿಲ್ಲಾ ಮುಖ್ಯ ರಸ್ತೆಯ ಮೂಲಕ (6 ಕಿ.ಮೀ). ಕಾಕೂರು ಹೇರ್ಮಾಡು-ಬೊಳ್ಳಾರಿಗೇಟ್ ಜಿಲ್ಲಾ ಮುಖ್ಯ ರಸ್ತೆಯ ಮುಖಾಂತರ (6.90 ಕಿ.ಮೀ) ಸಂಚರಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಕಾಸರಗೋಡಲ್ಲೂ ರಜೆ

ಕಾಸರಗೋಡು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಬಿರುಸಾದ ಮಳೆ ದಾಖಲಾಗಿದೆ. ಹಲವು ಪ್ರದೇಶಗಳಲ್ಲಿ ಮಳೆನೀರು ಕಟ್ಟಿ ನಿಂತು ಮಳೆ ಅತಿಶಕ್ತವಾಗಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಕಾಲೇಜುಗಳು, ಜಿಲ್ಲೆಯ ರಾಜ್ಯ , ಸಿಬಿಎಸ್‌ಐ, ಐಎಸ್‌ಎಸ್‌ಐ ಶಾಲೆಗಳು ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು, ಮದ್ರಸಗಳು ಮುಂತಾದ ಶಿಕ್ಷಣ ಸಂಸ್ಥೆಗಳಿಗೆ ಇಂದು (ಜುಲೈ 30 2024 ಮಂಗಳವಾರ) ಜಿಲ್ಲಾಧಿಕಾರಿ ಕೆ. ಇಂಪಶೇಖರ್ ರಜೆ ಘೋಷಿಸಿದ್ದಾರೆ. ಮುಂಚಿತವಾಗಿ ಘೋಷಿಸಲಾದ ಪರೀಕ್ಷೆಗಳಲ್ಲಿ ಬದಲಾವಣೆಗಳಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಬೆಂಗಳೂರು ಸಾಧಾರಣ ಮಳೆ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ.ಹಗುರವಾದ ಮಳೆಯಾಗುವ ಸಾಧ್ಯತೆಯೂ ಇದೆ. ನಿರಂತರ ಗಾಳಿಯ ವೇಗವು ಕೊಂಚ ಹೆಚ್ಚಿರಲಿದೆ. ತಾಪಮಾನದಲ್ಲೂ ವ್ಯತ್ಯಾಸಗಳು ಎರಡು ದಿನವೂ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ