Karnataka Yakshagana Academy Awards 2022: ಗಣೇಶ ಕೊಲೆಕಾಡಿಗೆ ಪಾರ್ತಿಸುಬ್ಬ ಪ್ರಶಸ್ತಿ
Aug 29, 2022 04:21 PM IST
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಸಕ್ತ ಸಾಲಿನ ಪ್ರಶಸ್ತಿ (Karnataka Yakshagana Academy Awards 2022) ಪ್ರಕಟವಾಗಿದೆ.
- ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಸಕ್ತ ಸಾಲಿನ ಪ್ರಶಸ್ತಿ (Karnataka Yakshagana Academy Awards 2022) ಪ್ರಕಟವಾಗಿದೆ. ಪ್ರಸಂಗಕರ್ತ, ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಬೆಂಗಳೂರು: ಪ್ರಸಂಗಕರ್ತ, ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪಾರ್ತಿಸುಬ್ಬ ಪ್ರಶಸ್ತಿ’ಯು 1 ಲಕ್ಷ ರೂಪಾಯಿ ನಗದು ಒಳಗೊಂಡಿದೆ.
ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಸೋಮವಾರ 2022ನೇ ಸಾಲಿನ ವಿವಿಧ ಪ್ರಶಸ್ತಿ ಪಟ್ಟಿ (Karnataka Yakshagana Academy Awards 2022) ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
‘ಪಾರ್ತಿಸುಬ್ಬ ಸೇರಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಉಡುಪಿಯ ಕಮಲಶಿಲೆಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಜಿ.ಎಲ್. ಹೆಗಡೆ ತಿಳಿಸಿದರು.
ಪ್ರಸಕ್ತ ಸಾಲಿನ ‘ಗೌರವ ಪ್ರಶಸ್ತಿ’ಗೆ ತೆಂಕುತಿಟ್ಟಿನ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ (ಮಂಗಳೂರು), ತೆಂಕುತಿಟ್ಟು ಭಾಗವತ ಪಟ್ಲ ಸತೀಶ್ ಶೆಟ್ಟಿ (ಮಂಗಳೂರು), ಮೂಡಲಪಾಯ ಯಕ್ಷಗಾನ ಭಾಗವತ ಹಾಗೂ ಕಲಾವಿದ ಭಾಗವತ ಚಂದಯ್ಯ (ತುಮಕೂರು), ಭಾಗವತ ಹಾಗೂ ಪಾರಂಪರಿಕ ಯಕ್ಷಗಾನ ಕಲಾವಿದ ಭಾಗವತ ಉಮೇಶ ಭಟ್ ಬಾಡ (ಉತ್ತರ ಕನ್ನಡ) ಮತ್ತು ಭಾಗವತ ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದ ಕೆ.ಪಿ. ಹೆಗಡೆ (ಉಡುಪಿ) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ 50 ಸಾವಿರ ರೂಪಾಯಿ ನಗದು ಒಳಗೊಂಡಿದೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ಗೆ ಪಾರಂಪರಿಕ ಯಕ್ಷಗಾನ ಕಲಾವಿದ ಹುಕ್ಕಲಮಕ್ಕಿ ಕಮಲಾಕರ ಹೆಗಡೆ (ಉತ್ತರ ಕನ್ನಡ) ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 25 ಸಾವಿರ ರೂಪಾಯಿ ನಗದು ಒಳಗೊಂಡಿವೆ.
2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮಂಗಳೂರಿನ ಪೊಳಲಿ ನಿತ್ಯಾನಂದ ಕಾರಂತ ಅವರ ‘ಯಕ್ಷಗಾನ ಪ್ರಸಂಗ ಸಂಪುಟ’, ಬೆಳಗಾವಿಯ ಎಲ್.ಎಸ್. ಶಾಸ್ತ್ರಿ ಅವರ ‘ಯಕ್ಷಗಾನ ನಕ್ಷತ್ರಗಳು’ ಹಾಗೂ ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರ ‘ಯಕ್ಷಗಾನ ಲೀಲಾವಳಿ’ ಕೃತಿಗಳು ಆಯ್ಕೆಯಾಗಿವೆ. ಈ ಬಹುಮಾನವು ತಲಾ 25 ಸಾವಿರ ರೂಪಾಯಿ ನಗದು ಒಳಗೊಂಡಿವೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾದವರು
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.