Kodagu Rains: ಸಂಪಾಜೆ ಬಳಿ ಭೂಕುಸಿತ, ಮಡಿಕೇರಿ ಮಂಗಳೂರು ಹೆದ್ದಾರಿ ರಾತ್ರಿ ಸಂಚಾರ 5 ದಿನ ಬಂದ್, ಹಾಸನದಲ್ಲೂ ವಾಹನ ನಿರ್ಬಂಧ
Jul 19, 2024 07:00 AM IST
ಮಡಿಕೇರಿ ಮಂಗಳೂರು ಹೆದ್ದಾರಿ ರಾತ್ರಿ ವೇಳೆ ಐದು ದಿನ ಬಂದ್ ಆಗಲಿದೆ.
- Land Slide ಮಡಿಕೇರಿ ಮಂಗಳೂರು ಹೆದ್ದಾರಿಯಲ್ಲಿ( Madikeri Mangalore Highway) ಭೂಕುಸಿತದ ಆತಂಕ ಇರುವುದರಿಂದ ಐದು ದಿನ ರಾತ್ರಿ ಸಂಚಾರವನ್ನು ಬಂದ್ ಮಾಡಲಾಗಿದೆ.
ಕೊಡಗು: ಮೈಸೂರಿನಿಂದ ಮಂಗಳೂರಿಗೆ ಹೋಗುವ ಸಂಪಾಜೆ ಹೆದ್ದಾರಿ ಮಾರ್ಗ ಐದು ದಿನಗಳ ಕಾಲ ರಾತ್ರಿ ವೇಳೆ ಬಂದ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿ 275 ಯಲ್ಲಿ ಭೂಕುಸಿತ ಉಂಟಾಗಿರುವ ಕಾರಣದಿಂದ ರಾತ್ರಿ ವೇಳೆ ಸಂಚಾರ ದುಸ್ತರ ಎನ್ನುವ ಕಾರಣದಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿದೆ. ಗುರುವಾರ ರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗಲು ಬಂದ ವಾಹನಗಳನ್ನು ವಾಪಾಸ್ ಕಳುಹಿಸಲಾಯಿತು. ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗುತ್ತಿದೆ.
ಕೊಡಗಿನ ಗಡಿ ಭಾಗವಾದ ಸಂಪಾಜೆಯಿಂದ ಮಡಿಕೇರಿವರೆಗಿನ ಕೆಲವು ಪ್ರದೇಶಲ್ಲಿ ಭೂ ಪ್ರದೇಶ ಹಾಗೂ ಗುಡ್ಡ ಕುಸಿತ ಆಗುವ ಸನ್ನಿವೇಶ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಬಂದ್ ಮಾಡಲಾಗಿದೆ. ತುರ್ತು ಸೇವೆಗಳ ಮತ್ತು ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ನಿಮಿತ್ತ ನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಂಚರಿಸುವ ವಾಹನಗಳನ್ನು ಹೊರತುಪಡಿಸಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಜುಲೈ 22ರವರೆಗೆ ಪ್ರತಿ ದಿನ ರಾತ್ರಿ 8ರಿಂದ ಬೆಳಗಿನ ಜಾವ 6 ರವರೆಗೆ ಈ ಆದೇಶ ಜಾರಿಯಲ್ಲಿ ಇರಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ಬಸ್‌ಗಳನ್ನು ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಖಾಂತರ ಮೈಸೂರು, ಬೆಂಗಳೂರು ಮುಂತಾದ ಸ್ಥಳಗಳಿಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗವಾದ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದ ಮಾರ್ಗ ಬಳಸುವಂತೆ ಸೂಚನೆ ನೀಡಲಾಗಿದೆ.
ಹಾಸನ ವರದಿ: ಇನ್ನು ಹಾಸನ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಕೆಲವು ಕಡೆ ಭೂಕುಸಿತ ಸಂಭವಿಸುತ್ತಿರುವ ಕಾರಣದಿಂದಾಗಿ ಮಾರ್ಗ ಬಂದ್ ಮಾಡಲಾಗಿದೆ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಮಾರನಹಳ್ಳಿಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಹಾಸನ ಡಿಸಿ ಆದೇಶಿಸಿದ್ಧಾರೆ.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಜತೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು-ಮಂಗಳೂರು ಹೆದ್ದಾರಿಯ ಹಾಸನದಿಂದ ಮಾರನಹಳ್ಳಿವರೆಗಿನ ರಸ್ತೆಯಲ್ಲಿ ಜುಲೈ 18 ರಿಂದ ರಸ್ತೆ ದುರಸ್ತಿ ಕಾರ್ಯ ಮುಗಿಯುವವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು, ಬದಲಿ ರಸ್ತೆಯಾದ ಹಾಸನ-ಬೇಲೂರು-ಮೂಡಿಗೆರೆ– ಚಾರ್ಮುಡಿ ಘಾಟ್ ಮಾರ್ಗವನ್ನು ಬಳಸಲು ಅವಕಾಶವಿದೆ ಎಂದು ಹೇಳಿದ್ದಾರೆ.