logo
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನಲ್ಲಿ ಗಾಂಜಾ ಬೆಳೆ ಘಮಲು: ಮನೆ ಆವರಣದಲ್ಲೇ ಪೊಗರ್‌ದಸ್ತ್‌ ಆಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ

Kodagu News: ಕೊಡಗಿನಲ್ಲಿ ಗಾಂಜಾ ಬೆಳೆ ಘಮಲು: ಮನೆ ಆವರಣದಲ್ಲೇ ಪೊಗರ್‌ದಸ್ತ್‌ ಆಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ

Umesha Bhatta P H HT Kannada

Nov 30, 2024 02:47 PM IST

google News

ಕೊಡಗಿನಲ್ಲಿ ಮನೆ ಆವರಣದಲ್ಲಿಯೇ ಗಾಂಜಾ ಬೆಳೆದು ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

    • Kodagu Crime News: ಮನೆ ಆವರಣದಲ್ಲಿಯೇ ಗಾಂಜಾವನ್ನು ಬೆಳೆದ ಕೊಡಗಿನ ವ್ಯಕ್ತಿಯೊಬ್ಬ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. 
ಕೊಡಗಿನಲ್ಲಿ ಮನೆ ಆವರಣದಲ್ಲಿಯೇ ಗಾಂಜಾ ಬೆಳೆದು ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಕೊಡಗಿನಲ್ಲಿ ಮನೆ ಆವರಣದಲ್ಲಿಯೇ ಗಾಂಜಾ ಬೆಳೆದು ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮಡಿಕೇರಿ: ಗಾಂಜಾ ಮಾರಾಟ ಕರ್ನಾಟಕದ ಬೆಂಗಳೂರು, ಮಂಗಳೂರು ಸಹಿತ ಹಲವು ಭಾಗಗಳಲ್ಲಿ ಅವ್ಯಾಹತವಾಗಿ ನಡೆದಿದೆ. ಕೊಡಗಿನಲ್ಲೂ ಗಾಂಜಾ ಮಾರಾಟದ ಪ್ರಕರಣವನ್ನು ಪೊಲೀಸರು ಬೇಧಿಸುತ್ತಲೇ ಇದ್ದಾರೆ. ಈ ಬಾರಿ ಕೊಡಗಿನ ಪೊಲೀಸರಿಗೆ ಕರೆ ಬಂದಿದ್ದು ವಿಭಿನ್ನವಾಗಿತ್ತು. ಗಾಂಜಾವನ್ನು ಮನೆಯ ಆವರಣದಲ್ಲೇ ಬೆಳೆಯುತ್ತಿದ್ದಾರೆ. ಅದೂ ಹೆಚ್ಚಿನ ಪ್ರಮಾಣದಲ್ಲೇ ಗಾಂಜಾ ಇದೆ. ಒಮ್ಮೆ ಬಂದು ತಪಾಸಣೆ ನಡೆಸಿ ಎನ್ನುವ ಕರೆ ಬಂದಿತ್ತು. ಮಾಹಿತಿ ಆಧರಿಸಿ ಕೊಡಗಿನ ವೀರಾಜಪೇಟೆ ಪೊಲೀಸರು ಸ್ಥಳಕ್ಕೆ ಹೋದರೆ ಮೇಲ್ನೋಟಕ್ಕೆ ಮನೆ ಆವರಣದಲ್ಲಿ ಹಸಿರು ಪ್ರದೇಶ. ಒಳ ಹೊಕ್ಕು ನೀಡಿದರೆ ಅದು ಗಾಂಜಾ ಬೆಳೆ. ಬೇರೆ ಬೆಳೆಗಳ ನಡುವೆ ಗಾಂಜಾವನ್ನು ಬೆಳೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಮನೆಯ ಕಾಂಪೌಂಡ್ ಒಳಗೆ ನಿಷೇಧಿತ ಗಾಂಜಾ ಗಿಡ ಬೆಳೆಸಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಆಗಿದ್ದಾದರೂ ಏನು

ಇದು ನಡೆದಿರುವುದು ಕೊಡಗಿನ ವೀರಾಜಪೇಟೆ ತಾಲ್ಲೂಕಿನ ಕಾರ್ಮಾಡಿನಲ್ಲಿ. ಇದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶ. ಸಮೀಪದಲ್ಲೇ ಕಾಡು ಕೂಡ ಇದೆ. ಸಾಕಷ್ಟು ತೋಟದ ಮನೆಗಳೂ ಇವೆ. ಕಾರ್ಮಾಡು ಗ್ರಾಮದ ವಿ.ಬಿ.ಮುತ್ತಣ್ಣ ಎಂಬುವವರ ಮನೆಯೂ ಇದ್ದು, ಸಾಕಷ್ಟು ಜಾಗ ಮನೆ ಸುತ್ತ ಇದೆ. ಅವರು ತಮಗೆ ಬೇಕಾದ ವಸ್ತುಗಳನ್ನು ಬೆಳೆದುಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಗಾಂಜಾ ಬೆಳೆಯುತ್ತಿರುವ ಮಾಹಿತಿ ಸ್ಥಳೀಯರಿಗೆ ಸಿಕ್ಕಿತ್ತು. ಇದನ್ನು ಖಚಿತಪಡಿಸಿಕೊಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಏಕೆಂದರೆ ಕೊಡಗು, ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಬೆಳೆಯ ನಡುವೆ ಗಾಂಜಾ ಬೆಳದು ಸಿಕ್ಕಬಿದ್ದ ಪ್ರಕರಣಗಳನ್ನು ಬೇಧಿಸಲಾಗಿತ್ತು. ಕೇರಳದಿಂದ ಬಂದ ಕೆಲವರು ಜಮೀನನ್ನು ಕೃಷಿಗೆ ಗುತ್ತಿಗೆ ಪಡೆದು ಗಾಂಜಾ ಬೆಳೆದು ಸಿಕ್ಕಿ ಹಾಕಿಕೊಂಡಿದ್ದರು. ಈ ಕಾರಣದಿಂದ ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಅಲ್ಲಿಗೆ ತೆರಳಿದಾಗ ಗಾಂಜಾ ಬೆಳೆ ಇರುವುದು ಕಂಡು ಬಂದಿತ್ತು.

ವಿ.ಬಿ.ಮುತ್ತಣ್ಣ ಎಂಬುವವರು ಮನೆಯ ಆವರಣದೊಳಗೆ ಗಾಂಜಾ ಗಿಡ ಬೆಳೆಸಿರುವುದನ್ನು ಪತ್ತೆಹಚ್ಚಿದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಾಣಿಶ್ರೀ ಮತ್ತು ತಂಡದವರು ಆರೋಪಿಯನ್ನು ಬಂಧಿಸಿ 5 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಇದು ಗಾಂಜಾ ಗಿಡ ಎನ್ನುವುದು ಗೊತ್ತಿರಲಿಲ್ಲ ಎನ್ನುವ ಮಾಹಿತಿಯನ್ನು ಮನೆ ಮಾಲೀಕರು ನೀಡಿದ್ದರೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಚಪ್ಪರ ಶಾಸ್ತ್ರಕ್ಕೆ ಬಂದವ ಚಿನ್ನಾಭರಣದೊಂದಿಗೆ ಎಸ್ಕೇಪ್‌

ಕೊಡಗಿನಲ್ಲಿ ಮದುವೆಯ ಚಪ್ಪರ ಶಾಸ್ತ್ರಕ್ಕೆ ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನೋರ್ವ, ವಧುವಿಗೆ ತೊಡಿಸಲೆಂದು ಇರಿಸಿದ್ದ ಸಾವಿರಾರು ರೂ ಬೆಲೆ ಬಾಳುವ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ಘಟನೆ ನಡೆದಿದೆ.

ರೈತ ಭವನದಲ್ಲಿ ವಿವಾಹ ಕಾರ್ಯ ನಿಗದಿಯಾಗಿತ್ತು. ಮಧ್ಯಾಹ್ನ ವಧು ಹಾಗೂ ಮದುವೆ ಮನೆಯವರು ರೈತ ಭವನಕ್ಕೆ ಆಗಮಿಸಿದ್ದರು. ಚಿನ್ನಾಭರಣವಿದ್ದ ಬ್ಯಾಗ್ ಅನ್ನು ವಧುವಿನ ಕೊಠಡಿಯಲ್ಲಿ ಇರಿಸಲಾಗಿತ್ತು.

ಈ ಸಂದರ್ಭ ನೆಂಟನಂತೆ ಬಂದ ಯುವಕನೋರ್ವ ಬ್ಯಾಗ್ ನಲ್ಲಿದ್ದ ವಧುವಿನ ಅಂದಾಜು 45,000 ರೂ. ಮೌಲ್ಯದ ಚಿನ್ನ, 50 ಸಾವಿರ ರೂ. ಮೌಲ್ಯದ ಚಿನ್ನದ ಕಡಗ, 23,000 ಮೌಲ್ಯದ ಒಂದು ಜೊತೆ ಚಿನ್ನದ ಓಲೆ, ಜೊತೆಗೆ 5,000 ರೂ. ವನ್ನು ಎಗರಿಸಿ ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿ ಕುಶಾಲನಗರ ನಗರ ಠಾಣೆಗೆ ದೂರು ನೀಡಿದ್ದಾರೆ.

ಮದುವೆ ಮಂಟಪಕ್ಕೆ ತೆರಳಿದ ಕುಶಾಲನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳನ ಪತ್ತೆಗೆ ಮುಂದಾಗಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ