ಕೋಲಾರ: ಕೆನರಾ ಬ್ಯಾಂಕ್ ನಲ್ಲಿ ಗ್ರಾಹಕರು ಇಟ್ಟಿದ್ದ ಚಿನ್ನ, ಠೇವಣಿ ಹಣ ನಾಪತ್ತೆ; ಮದ್ದೇರಿಯಲ್ಲಿ 2 ಕೋಟಿ ರೂಗೂ ಹೆಚ್ಚು ಅವ್ಯವಹಾರ
Published Mar 26, 2025 06:52 AM IST
ಕೋಲಾರದ ಮದ್ದೇರಿ ಕೆನರಾ ಬ್ಯಾಂಕ್ ನಲ್ಲಿ 2 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
- ಕೋಲಾರದ ಮದ್ದೇರಿ ಕೆನರಾ ಬ್ಯಾಂಕ್ ನಲ್ಲಿ ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಪತ್ತೆಯಾಗಿದೆ. ಠೇವಣಿ ಹಣ ಕೂಡ ಮಾಯವಾಗಿದೆ. ಸುಮಾರು 2 ಕೋಟಿ ರೂಗೂ ಹೆಚ್ಚು ಅವ್ಯವಹಾರ ಆಗಿದೆ ಎಂದು ವರದಿಯಾಗಿದೆ.

ಕೋಲಾರ: ಕೋಲಾರ ತಾಲೂಕಿನ ಮದ್ದೇರಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ 2 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅವ್ಯವಹಾರ ನಡೆದಿದೆ. ಈ ಶಾಖೆಯಲ್ಲಿ ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನ ನಾಪತ್ತೆಯಾಗಿ ನಕಲಿ ಚಿನ್ನವಾಗಿದೆ. ಠೇವಣಿ ಹಣ ಗ್ರಾಹಕರಿಗೆ ತಿಳಿಯದಂತೆ ಮಾಯವಾಗಿದೆ. ಈ ಅವ್ಯವಹಾರಕ್ಕೆ ಬ್ಯಾಂಕ್ ನ ಸಿಬ್ಬಂದಿಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಅವರಿಗೆ ಕನ್ನಡ ಭಾಷೆ ಬಾರದೆ ಇರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಮೂರು ದಶಕಗಳಷ್ಟು ಹಳೆಯದಾದ ಈ ಶಾಖೆಯಲ್ಲಿ ಇದೀಗ ಪ್ರತಿದಿನ ಗ್ರಾಹಕರು ಎಡತಾಕುತ್ತಿದ್ದು, ತಮ್ಮ ಬ್ಯಾಂಕ್ ಖಾತೆ ಹಾಗೂ ಲಾಕರ್ ಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವನ್ನು ಕಳೆದುಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ. ಮದುವೆ, ಮಕ್ಕಳ ಉನ್ನತ ಶಿಕ್ಷಣ, ಮನೆ ನಿವೇಶನ ಖರೀದಿ, ಹಬ್ಬ ಹೀಗೆ ಹತ್ತಾರು ಉದ್ದೇಶಗಳಿಗೆ ಕೂಡಿಟ್ಟ ಹಣ, ಠೇವಣಿ ಇರಿಸಿದ್ದ ಹಣ ಕಳೆದುಕೊಂಡ ಗ್ರಾಹಕರು ಪರಿತಪಿಸುತ್ತಿದ್ದಾರೆ.
ಕೋಲಾರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಅವರು ಬ್ಯಾಂಕ್ ನ ನಾಲ್ವರು ಸಿಬ್ಬಂದಿಗಳಾದ ಮ್ಯಾನೇಜರ್ ಇಂದ್ರಜಿತ್ ಸಿಂಗ್, ಸೂಪರ್ವೈಸರ್ ರಾವತ್ ಮಹೇಶ್ವರ್, ಅಟೆಂಡರ್ ಮಂಜುನಾಥ್ ಹಾಗೂ ಹೌಸ್ ಕೀಪಿಂಗ್ ಕೆಲಸಗಾರ ಮಧು ಎಂಬುವರ ವಿರುದ್ದ ದೂರು ದಾಖಲಿಸಿದ್ದಾರೆ. ಇಷ್ಟೆಲ್ಲಾ ವಂಚನೆ ನಡೆಯಲು ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಗೆ ಕನ್ನಡ ಭಾಷೆ ಬಾರದೆ ಇರುವುದು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಹೊರಗುತ್ತಿಗೆ ನೌಕರರ ಕರಾಮತ್ತು
ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕೋಲಾರ ತಾಲ್ಲೂಕು ವೇಮಗಲ್ ಮೂಲದ ಮಧು ಹಾಗೂ ಮಾಲೂರಿನ ಮಂಜುನಾಥ್ ಇಬ್ಬರೂ ಸೇರಿ ಈ ಕೃತ್ಯವನ್ನು ನಡೆಸಿದ್ದಾರೆ. ಕನ್ನಡ ತಿಳಿಯದ ಉತ್ತರ ಭಾರತ ಮೂಲದ ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಅವರನ್ನು ದಾರಿ ತಪ್ಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಗ್ರಾಮೀಣ ಭಾಗದ ಅನಕ್ಷರಸ್ಥರು ಬ್ಯಾಂಕ್ ವ್ಯವಹಾರಗಳಿಗೆ ಬಂದಾಗ ಹಣ ಕಟ್ಟಿಸಿಕೊಳ್ಳುವುದಕ್ಕೆ ಬದಲಾಗಿ ಅವರ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಬೇಕಾದ ಪತ್ರಗಳಿಗೆ ಸಹಿ ಮಾಡಿಸಿಕೊಂಡು ನಂತರ ಅವರ ಹಣವನ್ನು ಲಪಟಾಯಿಸುತ್ತಿದ್ದರು. ಹೀಗೆ ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದ್ದು, 2 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ನಡೆದಿದೆ ಎನ್ನಲಾಗಿದೆ. ಭಾಷಾ ಸಮಸ್ಯೆಯಿಂದ ಕನ್ನಡಿಗರಿಗೆ ಅನ್ಯಾಯವಾಗಿರುವುದಂತೂ ನಿಜ. ಗ್ರಾಮೀಣ ಭಾಗದ ಗ್ರಾಹಕರಿಗೆ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ.
ಮಂಗಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನ ಬಂಧನ: 6 ಗಿಬ್ಬನ್ ಮಂಗಗಳ ರಕ್ಷಣೆ
ಬೆಂಗಳೂರಿಗೆ ಕಳ್ಳಸಾಗಣೆ ಮಾಡುತ್ತಿದ್ದ ಅಳಿವಿನ ಅಂಚಿನಲ್ಲಿರುವ ಎರಡು ಮಂಗಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಮಂಗಗಳನ್ನು ಸೂಟ್ ಕೇಸ್ ನೊಳಗೆ ಅಡಗಿಸಿಟ್ಟು ಸಾಗಿಸಲು ಯತ್ನಿಸಲಾಗಿದೆ. ಇವು ಉಸಿರುಗಟ್ಟಿಸುವ ಸ್ಥಿತಿಯಲ್ಲಿದ್ದು ಜೀವಕ್ಕೆ ಅಪಾಯವಾಗುವ ಪರಿಸ್ಥಿತಿಯಲ್ಲಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಸಿಯಾಮಾಂಗ್ ಗಿಬ್ಬನ್ ಮಂಗಗಳು ಮತ್ತು ಎರಡು ನಾರ್ತ್ ಪಿಗ್ ಟೇಲ್ಡ್ ಮ್ಯಾಕ್ವಾಕ್ ಗಳನ್ನು ರಕ್ಷಿಸಿ ಮಲೇಶಿಯಾ ದೇಶಕ್ಕೆ ಹಿಂತಿರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೌಲಾಲಂಪುರದಿಂದ ಕೆಐಎ ಟರ್ಮಿನಲ್ 2ಗೆ ಮಲೇಷ್ಯಾದ ಏರ್‌ಲೈನ್ಸ್ ವಿಮಾನ MH-192 ರಲ್ಲಿ ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ಇವುಗಳನ್ನು ಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಪ್ರಯಾಣಿಕನನ್ನು ಬಂಧಿಸಿದ್ದೇವೆ. ಆರು ಮಂಗಗಳನ್ನು ಒಂದೇ ಟ್ರಾಲಿ ಸೂಟ್‌ಕೇಸ್‌ನೊಳಗೆ ಚಾಕೊಲೇಟ್ ಗಳು ಮತ್ತು ಬಟ್ಟೆಗಳ ನಡುವೆ ಅಡಗಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವರ್ಷದಿಂದೀಚೆಗೆ ಬೆಂಗಳೂರಿಗೆ ವಿದೇಶಿ ಜಾತಿಗಳ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.