logo
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: ವಿಷಕನ್ಯೆ ಹೇಳಿಕೆ; ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಕ್ಷಮೆಯಾಚಿಸಬೇಕು ಎಂದ ಡಿಕೆ ಶಿವಕುಮಾರ್

DK Shivakumar: ವಿಷಕನ್ಯೆ ಹೇಳಿಕೆ; ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಕ್ಷಮೆಯಾಚಿಸಬೇಕು ಎಂದ ಡಿಕೆ ಶಿವಕುಮಾರ್

Jayaraj HT Kannada

Apr 28, 2023 03:51 PM IST

google News

ಡಿಕೆ ಶಿವಕುಮಾರ್

    • ನಾವು ಯತ್ನಾಳ್ ಕ್ಷಮಾಪಣೆ ಕೋರಬೇಕೆಂದು ಕೇಳುತ್ತಿಲ್ಲ. ಈ ದೇಶದ ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿ ಕ್ಷಮೆ ಕೋರಬೇಕು. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಷಸರ್ಪ ಎಂದು ಕರೆದ ಬೆನ್ನಲ್ಲೇ, ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆ ಬಳಿಕ, ಇದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿ ಶಾಸಕ ಯತ್ನಾಳ್ (Basanagouda Yatnal) ವಿಷಕನ್ಯೆ (Vishkanya Statement) ಎಂದು ಕರೆದರು. ಇದು ಈಗ ಕೈ ನಾಯಕರ ವಿರೋಧಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಕರೆಯುವ ಮೂಲಕ ಬಿಜೆಪಿ ಇಡೀ ದೇಶದ ಮಹಿಳೆಯರಿಗೆ ಅಪಮಾನ ಮಾಡಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕ್ಷಮೆ ಕೇಳಬೇಕು. ಅಲ್ಲದೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಸೋನಿಯಾ ಗಾಂಧಿ ಅವರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನ ನೀಡಿದರು. ಆದರೆ ಸೋನಿಯಾ ಗಾಂಧಿ ಅವರು ದೇಶದ ಭವಿಷ್ಯದ ದೃಷ್ಟಿಯಿಂದ ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ನೀಡಿದರು. ಸೋನಿಯಾ ಗಾಂಧಿ ಅವರು ಈ ನೆಲದಲ್ಲಿ ಹುಟ್ಟದಿದ್ದರೂ ಇಂದಿರಾ ಗಾಂಧಿ ಅವರ ಸೊಸೆಯಾಗಿ ರಾಜೀವ್ ಗಾಂಧಿ ಅವರ ಧರ್ಮಪತ್ನಿಯಾಗಿ ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜೀವನ ಮಾಡಿಕೊಂಡು ಬಂದಿದ್ದಾರೆ. ಎರಡು ಬಾರಿ ಅಂದರೆ 10 ವರ್ಷಗಳ ಕಾಲ ಅವರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು. ನಮ್ಮೆಲ್ಲರ ಒತ್ತಡದ ಮೇರೆಗೆ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡು ಪಕ್ಷದ ಅಧ್ಯಕ್ಷರಾದರು. ಆಮೂಲಕ ನಮಗೆ ಶಕ್ತಿ ತುಂಬಿದ್ದಾರೆ ಎಂದರು.

ನನ್ನಂತಹ ಕಾರ್ಯಕರ್ತನನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಕಳುಹಿಸಿದಾಗ ಅಲ್ಲಿಗೆ ಭೇಟಿ ನೀಡಿ ಎಲ್ಲಾ ಕಾರ್ಯಕರ್ತರಿಗೆ ಶಕ್ತಿ ತುಂಬಿದ ಆ ತಾಯಿಯನ್ನು ಕೇಂದ್ರದ ಮಾಜಿ ಸಚಿವ ಹಾಲಿ ಶಾಸಕ ವಿಷ ಕನ್ಯೆ ಎಂದು ಕರೆದಿದ್ದಾರೆ. ಮಿಸ್ಟರ್ ಯತ್ನಾಳ್ ನಿನ್ನ ನಾಲಿಗೆಗೆ ಯಾರು ಏನು ಮಾಡುತ್ತಾರೋ ಗೊತ್ತಿಲ್ಲ. ಈ ರಾಜ್ಯದ ಸಂಸ್ಕೃತಿ ಇರುವ ಜನ ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ ನನ್ನ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರನ್ನು ವಿಷ ಕನ್ಯೆ ಎಂದು ಕರೆದಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಯತ್ನಾಳ್ ಕ್ಷಮಾಪಣೆ ಕೋರಬೇಕೆಂದು ಕೇಳುತ್ತಿಲ್ಲ. ಈ ದೇಶದ ಪ್ರಧಾನಮಂತ್ರಿ, ರಾಜ್ಯದ ಮುಖ್ಯಮಂತ್ರಿ ಕ್ಷಮೆ ಕೋರಬೇಕು. ಇದು ಕೇವಲ ಸೋನಿಯಾ ಗಾಂಧಿ ಅವರಿಗೆ ಮಾಡಿರುವ ಅಪಮಾನ ಮಾತ್ರವಲ್ಲ. ದೇಶಕ್ಕಾಗಿ ತನ್ನ ಸರ್ವಸ್ವ ತ್ಯಾಗ ಮಾಡಿರುವ ಮಹಿಳೆಯರಿಗೆ ಆಗಿರುವ ಅಪಮಾನ. ಬಿಜೆಪಿ ಅಧ್ಯಕ್ಷರಾದ ನಡ್ಡಾ ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಯತ್ನಾಳ್ ಅವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಿ ಎಂದು ಹೇಳಿದರು.

ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಯವರ ಚಾಳಿ. ಅವರಿಗೆ ನೆಹರೂ ಕುಟುಂಬವನ್ನು ಟೀಕಿಸುವ ಚಾಳಿ. ಮೋದಿ ಅವರು ಸೋನಿಯಾ ಗಾಂಧಿ ಅವರನ್ನು ಜೆರ್ಸಿ ಹಸು ಎಂದು ಕರೆದಿದ್ದರು. ಇದು ನಿಮ್ಮ ಧರ್ಮ, ಸಂಸ್ಕೃತಿನಾ ಪ್ರಧಾನಮಂತ್ರಿಗಳೇ? ರಾಹುಲ್ ಗಾಂಧಿ ಅವರನ್ನು ಹೈಬ್ರೀಡ್ ಕರು ಎಂದು ಕರೆದರು. ಆದರೆ ರಾಹುಲ್ ಗಾಂಧಿ ಅಧಿಕಾರ ತ್ಯಾಗ ಮಾಡಿ ಜನರ ಕಷ್ಟ ಸುಖ ಅರಿತು ಎಲ್ಲರನ್ನೂ ಒಂದುಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ವಿಧವೆ ಎಂದು ಕರೆದಿದ್ದೀರಿ. ನಮ್ಮ ತಾಯಿ, ನಿಮ್ಮ ತಾಯಿ ವಿಧವೆಯರಲ್ಲವೇ? ಇದು ಪ್ರಕೃತಿ ನಿಯಮ ಇದು. ನಮ್ಮ ಪಕ್ಷದ ಗುರುತನ್ನು ರಕ್ತದ ಕೈ ಎಂದು ಕರೆದರು. ಈ ಹಸ್ತದ ಶಕ್ತಿ ಏನು ಎಂಬುದನ್ನು ಮೇ 13ರಂದು ತಿಳಿಯಲಿದೆ ಎಂದರು.

ದೇಶದಲ್ಲಿ ಬದಲಾವಣೆ ಕರ್ನಾಟಕದಿಂದ ಆರಂಭವಾಗಲಿದೆ. ಈ ರಾಜ್ಯ ಇಂದಿರಾ ಗಾಂಧಿ ಅವರಿಗೆ ಮರುಜನ್ಮ ಕೊಟ್ಟಿದೆ. ಸೋನಿಯಾ ಗಾಂಧಿ ಅವರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೇಳುವ ಮುನ್ನ ಬಿಜೆಪಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಕ್ಷಮೆ ಕೇಳಿ ಆತನನ್ನು ಪಕ್ಷದಿಂದ ಹೊರಹಾಕಬೇಕು ಎಂದು ಹೇಳಿದರು.‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ