KSRTC News: ವಿದ್ಯಾರ್ಥಿನಿ ಸಾವಿನ ನಂತರ ಎಚ್ಚೆತ್ತ ಕೆಎಸ್‌ಆರ್‌ಟಿಸಿ; ಪ್ರಯಾಣಿಕರ ಸುರಕ್ಷತೆ ಚಾಲಕ, ನಿರ್ವಾಹಕರ ಹೊಣೆ
Jun 14, 2023 11:27 AM IST
ಅಪಘಾತದ ನಂತರ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ದೃಷ್ಟಿಯಿಂದ ಚಾಲಕರು ಹಾಗೂ ನಿರ್ವಾಹಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ.
- ಹಾವೇರಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಮೃತಪಟ್ಟ ನಂತರ ಕೆಎಸ್‌ಆರ್‌ಟಿಸಿ ಎಚ್ಚೆತ್ತುಕೊಂಡಿದೆ. ಈ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಸಾರಿಗೆ ಸಚಿವರು ಸೂಚನೆ ನೀಡಿದ್ದು, ಸಾರಿಗೆ ಚಾಲಕರು ಹಾಗೂ ನಿರ್ವಾಹಕರು ನಿರ್ದೇಶನ ಪಾಲಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸಂಚಾರ ಹಾಗೂ ಸಿಬ್ಬಂದಿ ಸುಧಾರಣೆ ನಿರ್ದೇಶಕರು ಹೇಳಿದ್ದಾರೆ.
ಅಪಘಾತದ ನಂತರ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ದೃಷ್ಟಿಯಿಂದ ಚಾಲಕರು ಹಾಗೂ ನಿರ್ವಾಹಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ.
ಬೆಂಗಳೂರು: ಸಾರಿಗೆ ಬಸ್‌ಗಳು ಪ್ರಯಾಣಿಕರ ಸುರಕ್ಷತೆ ದೃಷ್ಠಿಯಿಂದ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ( ಕೆಎಸ್‌ಆರ್‌ಟಿಸಿ) ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆಗಳನ್ನು ನೀಡಿದೆ.
ಹಾವೇರಿ ಜಿಲ್ಲೆ ಹಾನಗಲ್ ಡಿಪೋ ವ್ಯಾಪ್ತಿಯಲ್ಲಿ ಫುಟ್‌ಬೋರ್ಡ್ ಮೇಲೆ ನಿಂತು ಬಸ್ ಚಲಿಸುವಾಗ ಬಿದ್ದು ಬಾಲಕಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರ ಹಾಗೂ ಸಿಬ್ಬಂದಿ ಸುಧಾರಣೆ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ನಿರ್ದೇಶನಗಳನ್ನು ನೀಡಿದ್ದಾರೆ.
ವಿದ್ಯಾರ್ಥಿನಿ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಮೃತಪಟ್ಟಿದ್ದು ದುರಾದೃಷ್ಟಕರ. ಈ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಸಾರಿಗೆ ಸಚಿವರು ಸೂಚನೆ ನೀಡಿದ್ದು, ನಿರ್ವಾಹಕರು ಹಾಗೂ ಚಾಲಕರು ಪಾಲಿಸಬೇಕು ಎಂದು ಹೇಳಿದ್ದಾರೆ.
ಸೂಚನೆಗಳೇನು
- ಚಾಲನಾ ಸಿಬ್ಬಂದಿಗಳು ವಾಹನವನ್ನು ಘಟಕದಿಂದ ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನದ ಬಾಗಿಲುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
- ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ವಾಹನದ ನಿರ್ವಾಹಕರು ವಾಹನದ ಹಿಂದಿನ ಬಾಗಿಲನ್ನು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಚಾಲಕರಿಗೆ ಸೂಚನೆ ನೀಡಿದ ನಂತರವೇ ಚಾಲಕರು ವಾಹನವನ್ನು ಚಾಲನೆ ಮಾಡಬೇಕು.
- ವಾಹನ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಅವಕಾಶ ನೀಡದಂತೆ ಕ್ರಮ ತೆಗೆದುಕೊಳ್ಳಬೇಕು.
- ಚಾಲಕರು ಮುಂದಿನ ಹಾಗೂ ಹಿಂದಿನ ಬಾಗಿಲನ್ನು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು.
- ಬಸ್ ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲನ್ನು ತೆರೆಯಬಾರದು. ಬಸ್ ನಿಲ್ದಾಣದ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ ನಂತರ ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಇಳಿಸಬೇಕು.
ವಿಭಾಗ