logo
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ: ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ಕಾಂಗ್ರೆಸ್‌ ಮುಖಂಡನ ವಿರುದ್ಧ ದೂರು

ಲೋಕಸಭಾ ಚುನಾವಣೆ: ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ಕಾಂಗ್ರೆಸ್‌ ಮುಖಂಡನ ವಿರುದ್ಧ ದೂರು

Praveen Chandra B HT Kannada

Mar 21, 2024 12:59 PM IST

google News

ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ದೂರು ದಾಖಲು

    • ಮತದಾರರಿಗೆ ಕುಕ್ಕರ್‌ ಹಂಚಿದ ಕಾಂಗ್ರೆಸ್‌ ಮುಖಂಡರ ಬಳಿ "ನನಗ್ಯಾಕೆ ಕುಕ್ಕರ್‌ ನೀಡಿಲ್ಲ" ಎಂದು ಪ್ರಶ್ನಿಸಿ ಹಲ್ಲೆಗೊಳಗಾದ ವೃದ್ಧೆಯ ಪ್ರಕರಣವೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವೃದ್ಧೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ದೂರು ದಾಖಲು
ಕುಕ್ಕರ್ ಕೇಳಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ ಪ್ರಕರಣ; ದೂರು ದಾಖಲು

ಕುಣಿಗಲ್‌: ಮತದಾರರಿಗೆ ಹಂಚಿಕೆ ಮಾಡಿರುವ ಕುಕ್ಕರ್‌ ನನಗೆ ಸಿಕ್ಕಿಲ್ಲ ಎಂದು ಕೇಳಿರುವ ಅಜ್ಜಿಯ ಮೇಲೆ ಕಾಂಗ್ರೆಸ್‌ ಮುಖಂಡರೊಬ್ಬರು ಹಲ್ಲೆ ನಡೆಸಿದ ಪ್ರಕರಣ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಹಲ್ಲೆಗೆ ಒಳಗಾದ ಉಜ್ಜನಿ ಗ್ರಾಮದ ಗಂಗಚಂದ್ರಮ್ಮ (75) ಅವರ ಮಗ ಶಿವಕುಮಾರ್‌ ಹುಲಿಯೂರುದುರ್ಗ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ನೀಡಿದ್ದಾರೆ.

ಏನಿದು ಘಟನೆ?

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲು ನಡೆದ ಘಟನೆ ಇದಾಗಿದೆ. ವರದಿಗಳ ಪ್ರಕಾರ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತದಾರರಿಗೆ ಕಾಂಗ್ರೆಸ್‌ ಪಕ್ಷವರು ಕುಕ್ಕ‌ರ್ ಹಂಚಿಕೆ ಮಾಡಿದ್ದರು. ಗಂಗಚನ್ನಮ್ಮ ಅವರ ಮನೆ ಬಳಿ ಹಂಚಿಕೆ ಮಾಡಿದ್ದರೂ, ಇವರಿಗೆ ನೀಡಿರಲಿಲ್ಲ. ಈ ಬಗ್ಗೆ ಗಂಗಚನ್ನಮ್ಮ ಮುಖಂಡ ನಾರಾಯಣ ಎಂಬಾತನಿಗೆ ನಮಗೆ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದರಿಂದ ಆಕ್ರೋಶಗೊಂಡ ಹಲ್ಲೆ ನಡೆಸಿದ್ದಾರೆ. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಈ ಸಂದರ್ಭದಲ್ಲಿ ನಡೆದ ಘಟನೆ ಕುರಿತು ಗಂಗಚನ್ನಮ್ಮ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅಜ್ಜಿಯ ಮಗ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

ಕುಣಿಗಲ್‌ ತಾಲೂಕು ಹುಲಿಯೂರುದುರ್ಗ ಹೋಬಳಿಯ ಉಜ್ಜನಿ ಗ್ರಾಮದ ನಿವಾಸಿಯಾದ ಕೆ.ಟಿ. ಶಿವಕುಮಾರ್‌ ಆದ ನಾನು ಈ ದೂರು ನೀಡುತ್ತಿದ್ದೇನೆ. ಮಾರ್ಚ್‌ 20ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಉಜ್ಜನಿ ಗ್ರಾಮದ ನಿವಾಸಿಯಾದ ನಾರಾಯಣ ಅಪ್ಪಾಜಯ್ಯ ಎಂಬಾತನು ನಮ್ಮ ತಾಯಿಯಾದ ಗಂಗಚೆನ್ನಮ್ಮ ಎಂಬವರಿಗೆ ಹಲ್ಲೆ ನಡೆಸಿರುತ್ತಾರೆ. ನಮ್ಮ ಗ್ರಾಮದಲ್ಲಿ ನಮ್ಮ ಮನೆಯ ಹತ್ತಿರವೇ ಬಂದು ಕಾಂಗ್ರೆಸ್‌ ಕಾರ್ಯಕರ್ತರು ಕುಕ್ಕರ್‌ ಕೊಟ್ಟಿರುತ್ತಾರೆ. ನಮಗೆ ಏಕೆ ಕೊಟ್ಟಿಲ್ಲ ಎಂದು ಕೇಳಿದ್ದಕ್ಕೆ ಸದರಿ ನಾರಾಯಣ ಎಂಬಾತನು ನಮ್ಮ ತಾಯಿ ಗಂಗ ಚನ್ನಮ್ಮನಿಗೆ ಬೈದು ನಿಂದನೆ ಮಾಡಿದ್ದು, ಅಲ್ಲದೆ ತನ್ನ ಕೈಗಳಿಂದ ಮುಖದ ಮೇಲೆ ಮನಬಂದಂತೆ ಥಳಿಸಿ ಮುಖ ಊದುವಂತೆ ಹಲ್ಲೆ ಮಾಡಿರುತ್ತಾನೆ. ಆಗ ಅಲ್ಲಿಯೇ ಇದ್ದ ನನ್ನ ಮಗ ಸುಪ್ರಿತ್‌ ಗೌಡ, ಗ್ರಾಮಸ್ಥರು, ಮನೆಕೆಲಸಕ್ಕೆ ಬಂದ ಆಳುಗಳು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ದಯಮಾಡಿ ಸದರಿ ಮೇಲ್ಕಂಡ ನಾರಾಯಣ ಎಂಬಾತನ ಮೇಲೆ ಕ್ರಮ ಜರುಗಿಸಿ ನನಗೆ ಸೂಕ್ತ ರೀತಿಯ ನ್ಯಾಯ ಕೊಡಿಸಬೇಕಾಗಿ ಪ್ರಾರ್ಥನೆ" ಎಂದು ದೂರಿನಲ್ಲಿ ಶಿವಕುಮಾರ್‌ ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಪಡೆದ ಚೀಟಿಯನ್ನೂ ದೂರಿನೊಂದಿಗೆ ಲಗ್ಗತ್ತಿಸಿದ್ದಾರೆ.

ಕುಕ್ಕರ್‌, ಹಣ ಹಂಚಿಕೆ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ

ಇತ್ತೀಚೆಗೆ ಜೆಡಿಎಸ್‌ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು ಮತದಾರರಿಗೆ ಕುಕ್ಕರ್‌ ಹಂಚಿಕೆ, ಹಣ ಹಂಚಿಕೆ ಮಾಡುತ್ತಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದೆ. ಚುನಾವಣಾ ಆಯೋಗ ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು. ಕರ್ನಾಟಕದಲ್ಲಿ ಚುನಾವಣೆ ಆಯೋಗ ಇದೆಯಾ? ಕೇಂದ್ರ ಆಯೋಗ ಏನು ಮಾಡುತ್ತಿದೆ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಆಯೋಗಕ್ಕೆ ಗೊತ್ತಿಲ್ಲವೇ? ಆಯೋಗದ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಭಾನುವಾರ ರಾತ್ರಿ ಈ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದನ್ನು ನೀವು ನೋಡಬೇಕು ಎಂದು ಆಯೋಗವನ್ನು ಒತ್ತಾಯ ಮಾಡಿದ ಕುಮಾರಸ್ವಾಮಿ ಅವರು; ಕಾಂಗ್ರೆಸ್‌ಅಭ್ಯರ್ಥಿ ಮತದಾರರಿಗೆ ಹಂಚಲು ಇರಿಸಲಾಗಿದ್ದ ಕುಕ್ಕರ್‌ಗಳ ಲೋಡ್‌ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ