ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಭೂಕಬಳಿಕೆ ಆರೋಪ; ಖ್ಯಾತ ಗಾಯಕ ಲಕ್ಕಿ ಅಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು
Jun 21, 2024 06:50 PM IST
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಭೂಕಬಳಿಕೆ ಆರೋಪ; ಖ್ಯಾತ ಗಾಯಕ ಲಕ್ಕಿ ಅಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು
- ಈ ಹಿಂದೆ ಮೈಸೂರು ಡಿಸಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದ್ದು, ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri), ಅವರ ಪತಿ ಸುಧೀರ್ ರೆಡ್ಡಿ ಮತ್ತು ಸೋದರ ಮಾವ ಮಧುಸೂದನ್ ರೆಡ್ಡಿ ವಿರುದ್ಧ ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ (Singer Lucky Ali) ಅವರು ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ (Karnataka Lokayukta Police) ದೂರು ನೀಡಿದ್ದಾರೆ. ಐಎಎಸ್ ಅಧಿಕಾರಿ ರಾಜ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಅಲಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಅಲಿ ಅವರ ದೂರು ಆಧರಿಸಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಕ ಮತ್ತು ಹಿರಿಯ ಐಎಎಸ್ ಅಧಿಕಾರಿಯ ನಡುವೆ ಟ್ರಸ್ಟ್ ಒಡೆತನದ ಭೂಮಿಯ ವಿಷಯವು ದೀರ್ಘಕಾಲದಿಂದ ಇದೆ. ಕೆಲವು ವರ್ಷಗಳ ಹಿಂದೆ, ಲಕ್ಕಿ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಸ್ಥಳೀಯ ಪೊಲೀಸರು ಐಎಎಸ್ ಅಧಿಕಾರಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಷಯದ ಬಗ್ಗೆ ಮಧ್ಯಪ್ರವೇಶಿಸುವಂತೆ ಉನ್ನತ ಅಧಿಕಾರಿಗಳನ್ನು ವಿನಂತಿಸಿದ್ದರು. 'ಭೂ ಮಾಫಿಯಾ' ಭೂಮಿಯನ್ನು ಅಕ್ರಮವಾಗಿ ಕಸಿದುಕೊಳ್ಳಲು ಪಿತೂರಿ ನಡೆಸಿದೆ ಎಂದು ಅವರು ಹೇಳಿದ್ದಾರೆ. ಈ ಆಸ್ತಿ ಯಲಹಂಕದ ಕಂಚೇನಹಳ್ಳಿ ಪ್ರದೇಶದಲ್ಲಿದೆ ಎಂದು ವರದಿಯಾಗಿದೆ.
ರೋಹಿಣಿ ಸಿಂಧೂರಿ ಈ ಹಿಂದೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಡಿ ರೂಪಾ ಅವರೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದ್ದಕ್ಕಾಗಿ ಸುದ್ದಿಯಲ್ಲಿದ್ದರು. ರೋಹಿಣಿ ಸಿಂಧೂರಿ ಅವರ ಖಾಸಗಿ ಚಿತ್ರಗಳನ್ನು ತಮಗೆ ಕಳುಹಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಆಗ ರೂಪಾ ಅವರು ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಸೇರಿದಂತೆ 20 ಆರೋಪಗಳನ್ನು ಪಟ್ಟಿ ಮಾಡಿದ್ದರು. ಸಿಂಧೂರಿ ಅವರು ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಆರೋಪ ಮಾಡಿದ್ದರೂ ಅದನ್ನು ಸಾಬೀತುಪಡಿಸಿಲ್ಲ ಎಂದು ರೂಪಾ ಹೇಳಿದ್ದರು.
ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಸಾರಾ ಮಹೇಶ್ ದೂರಿದ್ದರು. ಇದೀಗ ಮತ್ತೆ ಭೂಕಬಳಿಕೆ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಹೆಸರು ಮುನ್ನೆಲೆಗೆ ಬಂದಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)