logo
ಕನ್ನಡ ಸುದ್ದಿ  /  ಕರ್ನಾಟಕ  /  Laxman Savadi: ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಲಕ್ಷ್ಮಣ ಸವದಿ

Laxman Savadi: ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ: ಬಿಜೆಪಿಗೆ ರಾಜೀನಾಮೆ ಘೋಷಿಸಿದ ಲಕ್ಷ್ಮಣ ಸವದಿ

Nikhil Kulkarni HT Kannada

Apr 12, 2023 12:22 PM IST

google News

ಲಕ್ಷ್ಮಣ ಸವದಿ (ಸಂಗ್ರಹ ಚಿತ್ರ)

    • ಮಹತ್ವದ ಬೆಳವಣಿಗೆಯೊಂದರಲ್ಲಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಸಚಿವ ಲಕ್ಷ್ಮಣ ಸವದಿ, ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಲಕ್ಷ್ಮಣ ಸವದಿ (ಸಂಗ್ರಹ ಚಿತ್ರ)
ಲಕ್ಷ್ಮಣ ಸವದಿ (ಸಂಗ್ರಹ ಚಿತ್ರ) (Verified Twitter)

ಅಥಣಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಸಚಿವ ಲಕ್ಷ್ಮಣ ಸವದಿ, ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಅಥಣಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಲಕ್ಷ್ಮಣ ಸವದಿ, ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ ನೀಡದ ಪಕ್ಷದಲ್ಲಿ ಇದ್ದು ಯಾವ ಪ್ರಯೋಜನವೂ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಾನು ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷವನ್ನು ತಾಯಿಯಂತೆ ಭಾವಿಸಿದ್ದೆ. ಆದರೆ ಪಕ್ಷ ನನ್ನನ್ನು ಗುರುತಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಚರ್ಚಿಸಿ ಬಿಜೆಪಿಗೆ ರಾಜೀನಾಮೆ ನೀಡುವ ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.

ಗೌರವ ಇಲ್ಲದ ಕಡೆ ಇರುವುದು ನನ್ನ ಜಾಯಮಾನವಲ್ಲ. ಹೀಗಾಗಿ ಬೆಂಬಲಿಗರು ಮತ್ತು ಅಭಿಮಾನಿಗಳ ಸಲಹೆ ಪಡೆದು, ಪಕ್ಷಕ್ಕೆ ರಾಜೀನಾಮೆ ನೀಡು ತೀರ್ಮಾನ ಮಾಡಿದ್ದೇನೆ. ವಿಧಾನ ಪರಿಷತ್‌ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಸಹೆ ಬಂದಿದ್ದು, ಕ್ಷೇತ್ರದ ಮತದಾರರ ಅಣತಿಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ನಾನು ಲಜ್ಜೆಗೆಟ್ಟ ರಾಜಕಾರಣಿ ಅಲ್ಲ. ಯಾರ ಬೆನ್ನಿಗೂ ಚೂರಿ ಹಾಕುವಂತ ನೀಚ ಕೆಲಸ ಎಂದಿಗೂ ಮಾಡಿಲ್ಲ. ಅಧಿಕಾರದ ಅಮಲಿನಲ್ಲಿ ಕೀಳು ರಾಜಕೀಯ ಮಾಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ ಭಾವುಕರಾಗಿ ನುಡಿದರು.

ನನಗೆ ಕ್ಷೇತದರದ ಜನ ನೀಡುವ ಸಲಹೆಯೇ ಅಂತಿಮ. ಅವರ ಸಲಹೆಯಂತೆ ವಿಧಾನ ಪರಿಷತ್‌ ಸ್ಥಾನದ ಜೊತೆಗೆ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಇದೇ ವೇಳೆ ರಮೇಶದ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಲಕ್ಷಣ ಸವದಿ, ನನ್ನೊಂದಿಗೆ ಸ್ನೇಹದಿಂದ ಇದ್ದ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಯಾರೋ ನನಗಾಗದವರು ಚಾಡಿ ಹೇಳಿದ್ದಾರೆ ಎಂದು ಕಿಡಿಕಾರಿದರು.

ಸವದಿ ಪಕ್ಷಾಂತರ ನಿರ್ಧಾರ?

ಇನ್ನು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಹೇಳಿರುವ ಲಕ್ಷ್ಮಣ ಸವದಿ, ಅನ್ಯ ಪಕ್ಷಗಳತ್ತ ಮುಖ ಮಾಡಲಿದ್ದಾರೆ ಎಂಬ ಪ್ರಶ್ನೆ ಇಈಗ ಎದುರಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೇಳಲಾ ಪ್ರಶ್ನೆಗೆ ಉತ್ತರಿಸಿದ ಸವದಿ, ಈ ಕುರಿತು ನಾಳೆಯೇ ಒಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ, ಬಿಜೆಪಿ ಹೈಕಮಾಂಡ್‌ ನನ್ನನ್ನು ಸಂಪರ್ಕಿಸುವ ಸೌಜನ್ಯ ತೋರಿಲ್ಲ. ಆದರೆ ಅನ್ಯ ಪಕ್ಷಗಳ ನಾಯಕರು ಈಗಾಗಲೇ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಹೀಗಾಗಿ ಬೇರೆ ಪಕ್ಷ ಸೇರುವ ಕುರಿತು ಶೀಘ್ರದಲ್ಲೇ ತೀರ್ಮಾನ ಮಾಡುವುದಾಗಿ ಲಕ್ಷ್ಮಣ ಸವದಿ ನುಡಿದರು.

ಅಥಣಿ ಉಪಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವು ನಾಯಕರು 2023ರ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಈಗ ವರಿಷ್ಠರು ನನಗೆ ಟಿಕೆಟ್‌ ನಿರಾಕರಿಸುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ಲಕ್ಷ್ಮಣ ಸವದಿ ಕಿಡಿಕಾರಿದರು.

ಒಂದು ವೇಳೆ ಈ ನಾಯಕರು ಇಂತಹ ವಾಗ್ದಾನ ಮಾಡಿಲ್ಲ ಎಂದಾದರೆ, ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಗೆ ಬಂದು ಆಣೆ ಮಾಡಲಿ. ನಾನು ಹೇಳುತ್ತಿರುವುದು ಸುಳ್ಳು ಎಂದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಲಕ್ಷ್ಮಣ ಸವದಿ ಘೋಷಿಸಿದರು.

ಲಕ್ಷ್ಮಣ ಸವದಿಗೆ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಯಿಂದ ತೀವ್ರ ನೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಏ.13ರಂದು ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದು, ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿ, ಮುಂದಿನ ರಾಜಕೀಯ ನಡೆಯನ್ನು ತೀರ್ಮಾನಿಸುವುದಾಗಿ ಲಕ್ಷ್ಮಣ ಸವದಿ ಇದೇ ವೇಳೆ ತಿಳಿಸಿದರು.

ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೇ, ಪಕ್ಷದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿರುವುದು ರಾಜ್ಯದ ಜನರ ಗಮನ ಸೆಳೆದಿದೆ ಎಂದು ಹೇಳಬಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ