BJP List: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಎರಡು ಹಂತದಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆ: ಸಿಎಂ ಬೊಮ್ಮಾಯಿ
Apr 11, 2023 08:00 PM IST
ಎರಡು ಹಂತಗಳಲ್ಲಿ ಅತಿ ಶೀಘ್ರವೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. (ಫೋಟೋ-ಫೈಲ್)
ಜಗದೀಶ್ ಶೆಟ್ಟರ್ ಅವರು ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ಇನ್ನೊಂದು ಅವಕಾಶ ಬೇಕೆಂದು ಕೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ (Assembly Elections) ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ (BJP List) ಎರಡು ಹಂತದಲ್ಲಿ ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು.
ದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಜಗದೀಶ್ ಶೆಟ್ಟರ್ ಅವರ ಜೊತೆ ಮಾತನಾಡಿದ್ದು, ಅವರು ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ಇನ್ನೊಂದು ಅವಕಾಶ ಬೇಕೆಂದಿದ್ದಾರೆ ಎಂದು ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ಸೇರಿ ಕೆಲವರಿಗೆ ಬಿಜೆಪಿಯಲ್ಲಿ ಟಿಕೆಟ್ ಇಲ್ಲ ಎಂಬ ಪ್ರಶ್ನೆಗೆ ಸಿಎಂ ಬೊಮ್ಮಾಯಿ, ಇನ್ನೊಂದು ಅವಕಾಶ ಬೇಕು ಅಂತ ಶೆಟ್ಟರ್ ಹೇಳಿರುವುದನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಬೇರೆ ಯಾವುದೇ ನಾಯಕರ ವಿಷಯಗಳು ನಮ್ಮ ಮುಂದೆ ಇಲ್ಲ. ಲಕ್ಷ್ಮಣ ಸವದಿಯವರೊಂದಿಗೆ ಸಂಪರ್ಕದಲ್ಲಿ ಇದ್ದು, ಮಹೇಶ ಕುಮಠಳ್ಳಿ ಅವರು ನಾವು ಸರ್ಕಾರ ರಚನೆಗೆ ಕಾರಣರಾದವರು. ಹೀಗಾಗಿ ಅವರಿಗೆ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ನಮ್ಮ ಪಕ್ಷದಲ್ಲಿ ಒಂದು ಸಂಪ್ರದಾಯ ಬೆಳೆಯುತ್ತಿದೆ.ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ 92 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಅವರಿಗೂ ನಮಗೂ ಇರುವ ವ್ಯತ್ಯಾಸ ಎಂದು ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.
ಕೆ.ಎಸ್. ಈಶ್ವರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು, ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ. ಅವರು ಹಲವಾರು ದಿನಗಳಿಂದ ಈ ಮಾತು ಹೇಳುತ್ತಿದ್ದರು. ನಾವು ಅವರಿಗೆ ನಿಮ್ಮ ಅನುಭವದ ಅಗತ್ಯ ವಿದೆ ಎಂದು ತಿಳಿಸಿದ್ದೆವು.
ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿರುವುದರಿಂದ ಅದನ್ನು ಅಧ್ಯಕ್ಷರೇ ತೀರ್ಮಾನ ಮಾಡುತ್ತಾರೆ. ಈಶ್ವರಪ್ಪ ಅವರು ರಾಜಕಾರಣದಲ್ಲಿ ಮುಂದುವರೆಯಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಯಿಂದ ದೇಶದಲ್ಲಿ ಬದಲಾವಣೆ
ದೇಶದಲ್ಲಿ ಬಿಜೆಪಿ ಸಾಕಷ್ಟು ಬದಲಾವಣೆ ತರುತ್ತಿದೆ. ಇದುವರೆಗೂ ಆಡಳಿತ ವಿರೋಧಿ ಅಲೆ ಇತ್ತು. ಈಗ ಆಡಳಿತ ಪರ ಅಲೆ ಇದೆ ಎಂದಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯದ ನಾಯಕರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ನಾಳೆಯೊಳಗೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇಂದು ರಾತ್ರಿ ಅಮಿತ್ ಶಾ, ಜೆಪಿ ನಡ್ಡಾ ಅವರೊಂದಿಗೆ ರಾಜ್ಯದ ನಾಯಕರು ಅಂತಿಮ ಚರ್ಚೆಯ ಬಳಿಕ ಯಾರಿಗೂ ಟಿಕೆಟ್ ನೀಡಬಾರದು ಯಾರಿಗೆ ಮಣೆ ಹಾಕಬೇಕೆಂಬುದು ನಿರ್ಧಾರ ಆಗುತ್ತದೆ.
ಕರಾವಳಿಯ ವಾಜಪೇಯಿ ಅಂತಲೇ ಹೆಸರುವಾಸಿಯಾಗಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾವು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂತ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು.
ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಇಂದು (ಏ.11) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ನಾನು ಸ್ವಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿನಾಗಲು ಬಯಸಿದ್ದೇನೆ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರನ್ನು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗದ ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ ಆಯನೂರು ಮಂಜುನಾಥ್ ಅವರಿಗೆ ಇಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದೆ.