ರಾಜಕೀಯ ವಿಶ್ಲೇಷಣೆ; ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ; ಸವಾಲುಗಳು ಅನೇಕ
Mar 14, 2024 05:37 PM IST
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಇವರಿಗೆ ಸಿಗಲಿದೆಯೇ ಸ್ವಪಕ್ಷೀಯರ ಬೆಂಬಲ ಎಂಬುದು ಒಂದು ಪ್ರಶ್ನೆಯಾದರೆ, ಕೈ ಪಡೆಗೆ ಸಮರ್ಥ ಅಭ್ಯರ್ಥಿ ಸಿಕ್ಕರೆ ಫಲಿತಾಂಶ ಏರುಪೇರಾಗಲಿದೆ ಎಂಬುದು ಪರಿಣತರ ಲೆಕ್ಕಾಚಾರ. (ರಾಜಕೀಯ ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರವೂ ಒಂದು. ಈ ಕ್ಷೇತ್ರವನ್ನು 1952 ರಿಂದ 1977 ರವರೆಗೆ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ಮೂರು ಬಾರಿ ಪ್ರತಿನಿಧಿಸಿದ್ದರು. ಬೆಂಗಳೂರು ನಗರದ ಉತ್ತರ ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ರಚಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕೆ.ಆರ್.ಪುರಂ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬ್ಯಾಟರಾಯನಪುರ, ಹೆಬ್ಬಾಳ ಮತ್ತು ಪುಲಕೇಶಿನಗರ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ರಿಯಲ್ ಎಸ್ಟೇಟ್ ವ್ಯವಹಾರ ರಾಜಕಾರಣಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಮೂರು ತಿಂಗಳ ಹಿಂದೆ ರಾಜಕೀಯ ನಿವೃತ್ತಿ ಘೋಷಿಸಿದ್ದ ಡಿವಿ ಸದಾನಂದಗೌಡ
ಡಿ.ವಿ. ಸದಾನಂದ ಗೌಡ ಮೂರು ತಿಂಗಳ ಹಿಂದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ತಕ್ಷಣವೇ ಚುರುಕಾದ ಸಿ.ಟಿ. ರವಿ ಮತ್ತು ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲು ತೆರೆ ಮರೆಯಲ್ಲಿ ಪ್ರಯತ್ನಗಳನ್ನು ಆರಂಭಿಸಿದರು.
ಇವರಿಗೆ ಬೆಂಗಳೂರಿಗೆ ಪ್ರವೇಶ ತೋರಿಸಿದರೆ ತಮ್ಮ ಹಿಡಿತ ತಪ್ಪಿ ಹೋಗುತ್ತದೆ ಎಂದು ಭಾವಿಸಿದ ನಗರದ ಮೂಲ ಬಿಜೆಪಿ ನಾಯಕರು ಪ್ರತಿತಂತ್ರ ರೂಪಿಸಿದರು. ಮತ್ತೆ ಸದಾನಂದ ಗೌಡರ ಮನವೊಲಿಕೆಯಲ್ಲಿ ಆರ್. ಅಶೋಕ್ ಹಾಗೂ ಡಾ. ಅಶ್ವತ್ಥನಾರಾಯಣ ಯಶಸ್ವಿಯಾಗಿದ್ದರು. ಸದಾನಂದ ಗೌಡ ಅವರನ್ನು ಲೋಕಸಭೆಗೆ ಕಳುಹಿಸಿದರೆ ಬೆಂಗಳೂರು ರಾಜಕಾರಣದಲ್ಲಿ ಮುಂದೆಯೂ ತಮ್ಮದೇ ಪ್ರಾಬಲ್ಯವನ್ನು ಮುಂದುವರೆಸಬಹುದು ಎನ್ನುವುದು ಈ ನಾಯಕರ ಲೆಕ್ಕಾಚಾರವಾಗಿತ್ತು. ಸದಾನಂದ ಗೌಡರು ಮತ್ತೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದರಾದರೂ ಪ್ರಯೋಜನವಾಗಿಲ್ಲ.
ಯಶವಂತಪುರ ಶಾಸಕಿಯಾಗಿದ್ದ ಶೋಭಾ ಕರಂದ್ಲಾಜೆ
ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಹಿಂದೆ ಇವರು ಎರಡು ಬಾರಿಯಿಂದ ಪ್ರತಿನಿಧಿಸುತ್ತಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯವರೇ ಗೋ ಬ್ಯಾಕ್ ಶೋಭಾ ಚಳವಳಿ ಆರಂಭಿಸಿದ್ದರು. ಒಂದು ಹಂತದಲ್ಲಿ ಹೈ ಕಮಾಂಡ್ ಇವರಿಗೆ ಟಿಕೆಟ್ ನೀಡದಿರಲು ನಿರಾಕರಿಸಿತ್ತು. ಆದರೆ ಯಡಿಯೂರಪ್ಪ ಪಟ್ಟು ಹಿಡಿದು ಬೆಂಗಳೂರಿಗೆ ಕರೆ ತಂದಿದ್ದಾರೆ. ರಾಜಧಾನಿಯ ಬಿಜೆಪಿ ಮುಖಂಡರಿಗೆ ಶೋಭಾ ಸೇರಿದಂತೆ ಬೇರೆ ಯಾವುದೇ ಮುಖಂಡರು ಬೆಂಗಳೂರಿನಲ್ಲಿ ನೆಲೆಯೂರುವುದು ಇಷ್ಟವಿಲ್ಲ.
ಈ ಹಿಂದೆ ಯಡಿಯೂರಪ್ಪನವರ ಕಾಲದಲ್ಲಿ ಹಿರಿಯರನ್ನೂ ಬದಿಗೆ ಸರಿಸಿ ಶೋಭಾ ಮೇಲುಗೈ ಸಾಧಿಸಿದ್ದ ನಾಯಕಿ. ಇದೇ ಕಾರಣಕ್ಕೆ ಇವರನ್ನು ಕಂಡರೆ ಒಳಗೊಳಗೆ ಕುದಿಯುವವರೇ ಹೆಚ್ಚು. ಈ ಕ್ಷೇತ್ರದಲ್ಲಿರುವ 5 ಶಾಸಕರು ಮನಸ್ಸು ಮಾಡಿದರೆ ಶೋಭಾ ಗೆಲುವು ಕಷ್ಟವೇನಲ್ಲ. ಆದರೆ ಒಳ ಏಟು ಕೊಡುವವರೆ ಹೆಚ್ಚು. ಮೋದಿ ಹೆಸರು ಕೈ ಹಿಡಿಯಬೇಕಷ್ಟೆ. ಶೋಭಾ ಒಮ್ಮೆ ಇದೇ ಕ್ಷೇತ್ರದ ಯಶವಂತಪುರ ಶಾಸಕಿಯಾಗಿದ್ದು ಬಿಟ್ಟರೆ ಕ್ಷೇತ್ರದ ಪರಿಚಯ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವರಿಗೆ ಅಸಹಕಾರವೇ ಹೆಚ್ಚು.
ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರ
ಜೊತೆಗೆ ಬಿಜೆಪಿಗೆ ಹಿನ್ನೆಡೆಯಾಗುವ ಅಂಶವೂ ಇಲ್ಲೊಂದು ಇದೆ. ಅತಿ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಯಶವಂತಪುರ ಕ್ಷೇತ್ರ. ಈ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದಾರೆ. ಆದರೆ, ಅವರ ಒಡನಾಟ ಈಗ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಹೆಚ್ಚಾಗಿದೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಆತ್ಮಸಾಕ್ಷಿ ಮತದ ಹೆಸರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ ಅವರ ಗೆಲುವಿಗೆ ನೆರವಾಗಿದ್ದರು.
1951 ರಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರ 2004 ರಿಂದ ಬಿಜೆಪಿ ತೆಕ್ಕೆಗೆ ಜಾರಿದೆ. 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಎಚ್.ಟಿ. ಸಾಂಗ್ಲಿಯಾನಾ, 2009 ರಲ್ಲಿ ಡಿ.ಬಿ.ಚಂದೇಗೌಡ ಮತ್ತು 2014 ಹಾಗೂ 2019ರಲ್ಲಿ ಡಿವಿ ಸದಾನಂದಗೌಡ ಅವರು ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಿ.ಕೆ. ಜಾಫರ್ ಷರೀಫ್ ಅವರು 1977ರಿಂದ 1996 ರವರೆಗೆ ಆಯ್ಕೆಯಾಗುತ್ತಾ ಬಂದಿದ್ದರು. 1996ರಲ್ಲಿ ಜಾಫರ್ ಷರೀಫ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಹಿಡಿತದಿಂದ ಜಾರಿ ಹೋಯಿತು. ಆದರೆ, 1999 ರಲ್ಲಿ ಮತ್ತೆ ಜಾಫರ್ ಷರೀಫ್ ಆಯ್ಕೆಯಾದರು. 1996ರಲ್ಲಿ ಜೆಡಿಎಸ್ ಪಕ್ಷದ ಸಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದರು.
ಈ ಕ್ಷೇತ್ರ ಶೇ. 92 ರಷ್ಟು ನಗರ ಪ್ರದೇಶ ಮತ್ತು ಶೇ.8ರಷ್ಟು ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚು. ಮುಸಲ್ಮಾನ, ಎಸ್ ಸಿ, ಎಸ್ ಟಿ ಮತ್ತು ಕ್ರಿಶ್ಚಿಯನ್ ಮತದಾರರ ಸಂಖ್ಯೆ ಹೆಚ್ಚು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಶತಾಯ ಗತಾಯ ಈ ಕ್ಷೇತ್ರವನ್ನು ಗೆಲ್ಲಲು ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ.
2019ರ ಚುನಾವಣೆಯಲ್ಲಿ 24.2 ಲಕ್ಷ ಮತದಾರರು ನೊಂದಣಿ ಮಾಡಿಕೊಂಡಿದ್ದರು. ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು 22,24, 847 ಮತದಾರರಿದ್ದಾರೆ. 2019 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡ 8,24,500 ಮತಗಳನ್ನು ಪಡೆದು ಆಯ್ಕೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ 6,76,982 ಮತ ಪಡೆದಿದ್ದರು.
2014 ರ ಲೋಕಸಭಾ ಚುನಾವಣೆಯಲ್ಲಿ, ಡಿ.ವಿ.ಸದಾನಂದ ಗೌಡ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ಬಿ.ಚಂದ್ರೇಗೌಡ ಕಾಂಗ್ರೆಸ್ ಅಭ್ಯರ್ಥಿ ಸಿ. ಕೆ. ಜಾಫರ್ ಶರೀಫ್ ವಿರುದ್ಧ ಜಯ ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನಾಮಬಲ ಮತ್ತು ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಮತದಾರ ಯಾರತ್ತ ಒಲಿಯುತ್ತಾನೆ ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಅವಲಂಬಿಸಿದೆ. ಕಾಂಗ್ರೆಸ್ ನಿಂದ ಮಾಜಿ ರಾಜ್ಯಸಭಾ ಸದಸ್ಯ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧ್ಯಕ್ಷ ರಾಜೀವ್ ಗೌಡ ಮತ್ತು ಶಾಸಕ ಪ್ರಿಯಾಕೃಷ್ಣ ಹೆಸರು ಚಲಾವಣೆಯಲ್ಲಿದೆ. ಸದಾನಂದ ಗೌಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿರುವ ಮಾಹಿತಿ ಲಭ್ಯವಾಗಿದೆ.
ಆದರೆ ಬೆಂಗಳೂರಿನ ಮತದಾರನಿಗೆ ಇದಾವುದರ ಪರಿವೆಯೇ ಇಲ್ಲ. ಆತನಿಗೆ ಸಮಯಕ್ಕೆ ಸರಿಯಾಗಿ ಕಾವೇರಿ ನೀರು ಸಿಕ್ಕರೆ ಸಿಗುವ ಆನಂದ ಸಂಸದ ಶಾಸಕನಿಂದಲೂ ಸಿಗಲಿಕ್ಕಿಲ್ಲ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)