logo
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ; ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ

Lok Sabha Elections 2024: ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ; ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ

Raghavendra M Y HT Kannada

Mar 16, 2024 11:58 PM IST

google News

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಇತರೆ ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ.

    • ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಹಿನ್ನೆಲೆ ರಾಜಕಾರಣಿಗಳು ನಗರದಲ್ಲಿ ನೀರಿನ ವ್ಯವಸ್ಥೆ ಮಾಡುವಂತಿಲ್ಲ, ಧಾರ್ಮಿಕ ಸ್ಥಳಗಳಲ್ಲಿ ಪ್ರಚಾರ ಮಾಡೋಂಗಿಲ್ಲ.  (ವರದಿ: ಎಚ್‌ ಮಾರುತಿ)
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಇತರೆ ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು, ಅಭ್ಯರ್ಥಿಗಳು ಹಾಗೂ ಇತರೆ ರಾಜಕಾರಣಿಗಳು ನೀರಿನ ವ್ಯವಸ್ಥೆ ಮಾಡುವಂತಿಲ್ಲ.

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ಕೂಡಲೇ ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಹಾಗೂ ಜಾಹೀರಾತುಗಳನ್ನು ತೆಗೆಯಬೇಕು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಮತ್ತು ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳನ್ನು ಕೂಡಲೇ ತೆಗೆದು ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪೋಸ್ಟರ್, ಬ್ಯಾನರ್ ಫ್ಲೆಕ್ಸ್, ಭಿತ್ತಿಪತ್ರಗಳು, ಗೋಡೆ ಬರಹಗಳು ಇರುವ ಹಾಗಿಲ್ಲ. ಒಂದು ವೇಳೆ ಪೋಸ್ಟರ್, ಬ್ಯಾನರ್ ಹಾಕಿದ್ದರೆ ಹಾಕಿದವರ ಮೇಲೆ ದೂರು ದಾಖಲಿಸಬೇಕು.

ಮಾದರಿ ನೀತಿ ಸಂಹಿತೆ ಮುಖ್ಯಾಂಶಗಳು

ರಸ್ತೆ ಬದಿ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು ತೆಗೆಯಬೇಕು. ಯಾವುದೇ ಸ್ಥಳದಲ್ಲಿ ಜನಪ್ರತಿನಿಧಿಗಳ ಹೆಸರು ಅಥವಾ ದೂರವಾಣಿ ಸಂಖ್ಯೆ ಇರುವಂತಿಲ್ಲ. ಬಿಬಿಎಂಪಿಯ ಆಯಾ ವಲಯ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು. ಚುನಾವಣೆ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸರ್ಕಾರಿ ಅಧಿಕೃತ ವೆಬ್‌ಸೈಟ್‌ಗಳಲ್ಲಿರುವ ರಾಜಕೀಯ ಪ್ರತಿನಿಧಿಗಳ ಛಾಯಾಚಿತ್ರಗಳನ್ನು 24 ಗಂಟೆಗಳ ಒಳಗೆಯಬೇಕು.

ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ‌ ಮೇಲೆ‌ ನಿಗಾವಹಿಸಲು ಎಫ್‌ಎಸ್‌ಟಿ, ಎಸ್‌ಎಸ್‌ಟಿ ಸೇರಿದಂತೆ ವಿವಿಧ ತಂಡಗಳನ್ನು ಚುರುಕುಗೊಳಿಸಬೇಕು ಮತ್ತು ಪ್ರಮುಖ ಸ್ಥಳಗಳಲ್ಲಿ ಕೂಡಲೇ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು ಎಂದು ತುಷಾರ್‌ ಗಿರಿನಾಥ್‌ ಅವರು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 24 ವಿಧಾನಸಭೆ ಕ್ಷೇತ್ರಗಳು ಮೂರು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿವೆ. ಯಲಹಂಕ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ ಹಾಗೂ ಆನೇಕಲ್‌ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತವೆ.

ಏನೆಲ್ಲ ಮಾಡಬಾರದು?

ಈಗಾಗಲೇ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಕಡ್ಡಾಯವಾಗಿ ಪಾಲಿಸುವಂತೆ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಜಿಲ್ಲಾಡಳಿತ ಕೊರಿಕೊಂಡಿದೆ. ಯಾವುದೇ ಸ್ಥಳದಲ್ಲಿ ಯಾವುದೇ ಹಂತದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಜಿಲ್ಲೆಯ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಜನಪ್ರತಿನಿಧಿಗಳು ಆಶ್ವಾಸನೆ ನೀಡುವಂತಿಲ್ಲ. ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಆರ್ಥಿಕ ಸಹಾಯವನ್ನು ಯಾವುದೇ ರೀತಿಯಲ್ಲಿ ಒದಗಿಸುವುದಾಗಿ ಜನಪ್ರತಿನಿಧಿಗಳು ಆಶ್ವಾಸನೆ ನೀಡುವಂತಿಲ್ಲ.

ಯಾವುದೇ ಧರ್ಮ, ಭಾಷೆ, ಜಾತಿ ಆಧಾರದ ಮೇಲೆ ಮತ ಕೇಳಲು ಅವಕಾಶವಿರುವುದಿಲ್ಲ. ದೇವಸ್ಥಾನ ಚರ್ಚ್ ಮಸೀದಿ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಕಾರ್ಯಕರ್ತರಾಗಲಿ ಖಾಸಗಿ ಕಟ್ಟಡಗಳ ಸಂಬಂಧಿಸಿದ ಆವರಣ ಕಟ್ಟಡಗಳಲ್ಲಿ ಯಾವುದೇ ಬಾವುಟ ಅಥವಾ ಬ್ಯಾನರ್ ಕಟ್ಟಲು ಅವಕಾಶ ಇರುವುದಿಲ್ಲ.

ಲೋಕಸಭೆ ಕ್ಷೇತ್ರಗಳ ಮತದಾರರ ವಿವರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ 31,74,098 ಮತದಾರರು ಇದ್ದಾರೆ. ಇದರಲ್ಲಿ 16,29,089 ಪುರುಷ, 15,44,415 ಮಹಿಳಾ ಮತದಾರರಿದ್ದಾರೆ. ಇತರೆ 594 ಮತದಾರರು ಇದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 23,98,910 ವೋಟರ್ಸ್ ಇದ್ದಾರೆ. ಇದರಲ್ಲಿ ಪುರುಷ (12,36,897), ಮಹಿಳೆ (11,61,548) ಹಾಗೂ ಇತರೆ (465) ಮತದಾರರಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 23,17,472 ಒಟ್ಟು ಮತದಾರರಿದ್ದಾರೆ. ಇದರಲ್ಲಿ 11,95,285 ಪುರುಷ, 1121788 ಮಹಿಳೆಯರು ಹಾಗೂ 399 ಇತರೆ ಮತದಾರರು ಇದ್ದಾರೆ. ಮೂರೂ ಕ್ಷೇತ್ರಗಳಲ್ಲಿ 40,61,271 ಪುರುಷ ಮತದಾರರು, 3827751 ಮಹಿಳೆಯರುು ಸೇರಿ ಒಟ್ಟು 78,90,480 ಮತದಾರರಿದ್ದಾರೆ.

ಮತಗಟ್ಟೆಗಳು

ಬೆಂಗಳೂರು ಉತ್ತರದಲ್ಲಿ 2,911 ಮತಗಟ್ಟೆಗಳು, ಬೆಂಗಳೂರು ಕೇಂದ್ರದಲ್ಲಿ 2,125 ಮತಗಟ್ಟೆ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,118 ಮತಗಟ್ಟೆಗಳಿವೆ. (ವರದಿ: ಎಚ್‌ ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ