logo
ಕನ್ನಡ ಸುದ್ದಿ  /  ಕರ್ನಾಟಕ  /  Kota Srinivas Poojary: ಫೊಟೋಗ್ರಫಿಯಿಂದ ಪಾಲಿಟಿಕ್ಸ್: ಮಾತಿನ ಮೋಡಿಗಾರ ಕೋಟ ಶ್ರೀನಿವಾಸ ಪೂಜಾರಿ ರಾಜಕೀಯದಲ್ಲಿ ನಡೆದುಬಂದ ಹಾದಿ

Kota Srinivas Poojary: ಫೊಟೋಗ್ರಫಿಯಿಂದ ಪಾಲಿಟಿಕ್ಸ್: ಮಾತಿನ ಮೋಡಿಗಾರ ಕೋಟ ಶ್ರೀನಿವಾಸ ಪೂಜಾರಿ ರಾಜಕೀಯದಲ್ಲಿ ನಡೆದುಬಂದ ಹಾದಿ

Raghavendra M Y HT Kannada

Mar 14, 2024 07:01 PM IST

google News

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (ಫೋಟೊ- ಕೋಟ ಶ್ರೀನಿವಾಸ ಪೂಜಾರಿ ಫ್ಯಾನ್ಸ್ ಎಫ್‌ಬಿ)

    • ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಮಂತ್ರಿಯಾದ ಅದೃಷ್ಟಶಾಲಿ ಕೋಟ ಶ್ರೀನಿವಾಸ ಪೂಜಾರಿ ಇದೀಗ ಲೋಕಸಭೆ ಪ್ರವೇಶಿಸಲು ಸಿದ್ಧರಾಗುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದಿರುವ ಕೋಟ ಅವರ ಪ್ರೊಪೈಲ್ ಇಲ್ಲಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (ಫೋಟೊ- ಕೋಟ ಶ್ರೀನಿವಾಸ ಪೂಜಾರಿ ಫ್ಯಾನ್ಸ್ ಎಫ್‌ಬಿ)
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (ಫೋಟೊ- ಕೋಟ ಶ್ರೀನಿವಾಸ ಪೂಜಾರಿ ಫ್ಯಾನ್ಸ್ ಎಫ್‌ಬಿ)

ಉಡುಪಿ: ಕ್ಯಾಮರಾ ಹಿಡಿದು ಸರಿಯಾದ ಕೋನವನ್ನು ಹುಡುಕುವ ಫೊಟೋಗ್ರಾಫರ್‌ಗಳನ್ನು ಕಂಡರೆ ಈಗಲೂ ಬಿಜೆಪಿಯ ಈ ಪವರ್‌ಫುಲ್ ಹಾಗೂ ಸಿಂಪಲ್ ಎನಿಸಿಕೊಳ್ಳುತ್ತಿರುವ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಕ್ಯಾಮರಾ ಹಿಡಿದುಕೊಳ್ಳುವುದು ಹೇಗೆ ಎಂದು ಪಾಠ ಮಾಡುತ್ತಾರೆ. ಏಕೆಂದರೆ ಒಂದು ಕಾಲದಲ್ಲಿ ಕೋಟ ಪರಿಸರದಲ್ಲಿ ಜನಪ್ರಿಯ ಫೊಟೋಗ್ರಾಫರ್ ಆಗಿದ್ದ ಶ್ರೀನಿವಾಸ ಪೂಜಾರಿ ಹಂತಹಂತವಾಗಿ ರಾಜಕೀಯದಲ್ಲಿ ಮೇಲೇರಿದವರು. ತನ್ನ ನಿರರ್ಗಳ ಮಾತಿನಿಂದಲೇ ಜನಪ್ರಿಯರಾದವರು. ವಿಧಾನಪರಿಷತ್ ಸದಸ್ಯರಾಗಿದ್ದುಕೊಂಡೇ ಮಂತ್ರಿಯಾದ ಅದೃಷ್ಟಶಾಲಿ. ಹಾಗೆಯೇ ವಿಧಾನಪರಿಷತ್ ವಿಪಕ್ಷ ನಾಯಕರಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿರ್ವಹಿಸಿಕೊಂಡು ಬರುತ್ತಿದ್ದ ಶ್ರೀನಿವಾಸ ಪೂಜಾರಿ ಅವರನ್ನು ಬಿಜೆಪಿಯ ಭದ್ರಕೋಟೆಯೇ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿದೆ.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಗಮನ ಸೆಳೆದಿದ್ದರು. ಇವರು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದವರು. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿದ್ದರು. ಸರಳ ವ್ಯಕ್ತಿತ್ವದ ಕೋಟ ಶ್ರೀನಿವಾಸ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರು. 7ನೇ ತರಗತಿ ಓದಿದ್ದಾರೆ. ಆದರೆ ಪಂಚಾಯತ್ ರಾಜ್ ವಿಷಯಕ್ಕೆ ಬಂದರೆ, ಅದರಲ್ಲಿ ಪಿಎಚ್‌ಡಿ. ಮಾಡಿದವರೂ ಇವರೆದುರು ಮಾತನಾಡಲು ಬೆವರಬೇಕು. ಅಂಕಿ ಅಂಶಗಳೆಲ್ಲಾ ಕೋಟ ಶ್ರೀನಿವಾಸ ಪೂಜಾರಿ ನಾಲಗೆಯಲ್ಲೇ ಇವೆ ಎಂದು ಇವರ ವಿರೋಧಿಗಳೂ ಮೆಚ್ಚುತ್ತಾರೆ.

1993ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ 2024ರ ಲೋಕಸಭೆ ಬಿಜೆಪಿ ಟಿಕೆಟ್ ವರೆಗೆ

1993ರಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಗ್ರಾಮ ಪಂಚಾಯಿತ್ ಸದಸ್ಯರಾಗಿದ್ದರು. 1996ರಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದರು. 2006ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದರು. 2009ರಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಹೀಗೆ ಹಂತಹಂತವಾಗಿ ಕೋಟ ಬಿಜೆಪಿಯಲ್ಲಿ ಬೆಳೆದವರು.

ಅಂಕಣಕಾರ-ಫೊಟೋಗ್ರಾಫರ್

ಕುಂದಾಪುರ ಮೂಲದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮುಂಗಾರು ದಿನಪತ್ರಿಕೆಗೆ ಸಾಕಷ್ಟು ಚಿತ್ರಲೇಖನಗಳನ್ನು ಬರೆಯುವುದರ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಮುಂದೆ ಸ್ಥಳೀಯ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವುದರ ಮೂಲಕ ಸಾಮಾಜಿ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಿದ್ದರು.

65 ವರ್ಷದ ಕೋಟ ಶ್ರೀನಿವಾಸ ಪೂಜಾರಿ ಹುಟ್ಟಿದ್ದು ಕೋಟತ್ತಟ್ಟು ಎಂಬಲ್ಲಿ. ಅಣ್ಣಯ್ಯ ಪೂಜಾರಿ ಮತ್ತು ಲಚ್ಚಿ ಪೂಜಾರಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದ ಶ್ರೀನಿವಾಸ ಪೂಜಾರಿ ಬಡತನದಲ್ಲಿರುವ ಮನೆಗೆ ಆಧಾರವಾಗಲು ಕೃಷಿಯೊಂದಿಗೆ ಕ್ಯಾಮರಾ ಹಿಡಿದವರು. ಹಾಗೆಯೇ ಪತ್ರಿಕೆಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಲೇಖನಗಳನ್ನೂ ಬರೆದು ಕಳುಹಿಸುವುದರ ಮೂಲಕ ಗಮನ ಸೆಳೆಯುತ್ತಿದ್ದರು. ಸ್ಥಳೀಯವಾಗಿ ಸ್ವಾತಿ ಎಂಬ ಸ್ಟುಡಿಯೋವನ್ನು ಆರಂಭಿಸಿದರು. ಕೋಟ ಶಿವರಾಮ ಕಾರಂತದ ಫೊಟೋಗಳನ್ನು ಸೆರೆಹಿಡಿಯುವ ಮೂಲಕ ಗಮನ ಸೆಳೆದಿದ್ದರು ಶ್ರೀನಿವಾಸ ಪೂಜಾರಿ.

ಫೊಟೋಗ್ರಾಫರ್ ಆಗಿ ಜನರ ಸಮಸ್ಯೆ, ಬವಣೆಗಳನ್ನು ಜಗತ್ತಿನ ಗಮನಕ್ಕೆ ತಂದ ಶ್ರೀನಿವಾಸ ಪೂಜಾರಿ ಅವರು 1993ರಲ್ಲಿ ಗ್ರಾಪಂ ಸದಸ್ಯರಾದರು. 1996ರಲ್ಲಿ ಅವರನ್ನು ತಾಪಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ 2006ರಲ್ಲಿ ಜಿಲ್ಲಾ ಪಂಚಾಯಿತ ಸದಸ್ಯರಾದ ಸಂದರ್ಭ ಶಿವರಾಮ ಕಾರಂಥ ಥೀಂ ಪಾರ್ಕ್ ಸ್ಥಾಪನೆಯಲ್ಲಿ ಶ್ರಮಿಸಿದರು. 2009ರಲ್ಲಿ ಅವರು ವಿಧಾನಪರಿಷತ್ ಸದಸ್ಯರಾದರು. 2012ರಲ್ಲಿ ಅವರನ್ನು ಮಂತ್ರಿಯನ್ನಾಗಿ ಮಾಡಲಾಯಿತು.

ವಿಧಾನಪರಿಷತ್ ಸದಸ್ಯರಾಗಿ ಸದನದಲ್ಲಿ ಪರಿಣಾಮಕಾರಿ ಚರ್ಚೆಗಳ ಮೂಲಕ ಗಮನ ಸೆಳೆಯುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರತಿಪಕ್ಷ ನಾಯಕರಾದರು. ಇದೀಗ ಲೋಕಸಭೆ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಸ್ಪರ್ಧಿಸಲು ಸೂಚಿಸಿ ಕೋಟ ಶ್ರೀನಿವಾಸರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿಯೇ ಆಗಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದರೆ, ಫೈಟ್ ಜೋರಾಗಲಿದೆ. ಅಲ್ಲದೆ, ಟಿಕೆಟ್ ಆಕಾಂಕ್ಷಿಗಳಾದ ಸ್ವಪಕ್ಷೀಯರ ಬೆಂಬಲ ಹೇಗಿರುತ್ತದೆ ಎಂಬುದೂ ಕಾದು ನೋಡಬೇಕು(ವರದಿ: ಹರೀಶ ಮಾಂಬಾಡಿ)

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ