ಫಲಿತಾಂಶ ವಿಶ್ಲೇಷಣೆ: ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಹಿಂದೆ ಜೆಡಿಎಸ್ ಬಲ, 10 ಕ್ಷೇತ್ರಗಳಲ್ಲಿ ಫಲ ಕೊಟ್ಟ ಮೈತ್ರಿ
Jun 06, 2024 01:14 AM IST
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನಂತರ ಮೈತ್ರಿ ಪಕ್ಷಗಳ ಲೆಕ್ಕಾಚಾರ
- Lok Sabha election ಕರ್ನಾಟಕದಲ್ಲಿ ಐದು ವರ್ಷದಲ್ಲಿಯೇ ಮೈತ್ರಿ ಪಕ್ಷಗಳು ಬದಲಾಗಿವೆ. ಹಿಂದಿನ ಚುನಾವಣೆಯಲ್ಲಿ ಗೆದ್ದು ಬೀಗಿ ಹಿನ್ನಡೆ ಅನುಭವಿಸುವ ಸ್ಥಿತಿಯಲ್ಲಿದ್ದ ಬಿಜೆಪಿ( Bjp)ಗೆ ಜೆಡಿಎಸ್(jds) ಮೈತ್ರಿ ಲಾಭ ಸಿಕ್ಕಿದೆ. ಜೆಡಿಎಸ್‌ಗೂ ಬಲ ಬಂದಿದೆ.
ಬೆಂಗಳೂರು: ಐದು ವರ್ಷದ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಎದುರಾಗಿಸಲಾಗಿತ್ತು. ಆಗ ಉಭಯ ಪಕ್ಷಗಳ ಸಮನ್ವಯ ಕೊರತೆ ಬಿಜೆಪಿಗೆ ಲಾಭವನ್ನೇ ತಂದುಕೊಟ್ಟಿತು. ಎರಡೂ ಪಕ್ಷಗಳು ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವು. ಅದೂ ಸ್ವಂತ ಬಲದ ಮೇಲೆ ಇಬ್ಬರೂ ಗೆದ್ದಿದ್ದರು. ಐದು ವರ್ಷದಲ್ಲಿ ಕರ್ನಾಟಕದಲ್ಲಿ ಮೈತ್ರಿ ಬದಲಾಯಿತು. ಜೆಡಿಎಸ್ ಕೈ ಹಿಡಿದಿದ್ದು ಬಿಜೆಪಿ. ಆರು ತಿಂಗಳ ಮೊದಲೇ ಮೈತ್ರಿ ಏರ್ಪಟಿತು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋತು ಹೋಗಿದ್ದ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಏನಾಗುವುದೋ ಎನ್ನುವ ಆತಂಕ ವರಿಷ್ಠರನ್ನು ಕಾಡಿತು. ಒಂದು ಕಡೆಯ ಪಕ್ಷದವರೇ ಆದ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ವರಿಷ್ಠರು ಜೆಡಿಎಸ್ ಜತೆಗೆ ಹಿಂದಿನ ಸಂಬಂಧ ಬೆಸೆಯಿತು. ಇದರ ಫಲವಾಗಿ ಮೈತ್ರಿ ಕೂಟವೇ ಮುನ್ನಡೆ ಪಡೆಯಿತು. ಮೈತ್ರಿಯಿಂದಾಗಿ ಕಾಂಗ್ರೆಸ್ ಎರಡಂಕಿ ದಾಟುವುದು ತಪ್ಪಿತು.
ರಾಜಕೀಯ ಲೆಕ್ಕಾಚಾರಗಳೇ ಹಾಗೆ. ಗೆಲುವೇ ಚುನಾವಣೆಯೇ ಮಾನದಂಡ. ಅದು ಏಕಾಂಗಿ ಸ್ಪರ್ಧೆಯೋ, ಮೈತ್ರಿಯೋ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಉಮೇದಿನಲ್ಲಿದ್ದ ಬಿಜೆಪಿಯ ಹಿರಿಯರು ಕರ್ನಾಟಕದಲ್ಲಿ ಏಕಾಂಗಿ ಹೋದರೆ ಎರಡಂಕಿ ಬಂದರೂ ಅಚ್ಚರಿಯಿಲ್ಲ. ಕಾಂಗ್ರೆಸ್‌ಗಿಂತ ಒಂದು ಸ್ಥಾನವಾದರೂ ಕಡಿಮೆ ಬಂದರೆ ಅದು ಹಿನ್ನಡೆ ಎನ್ನುವ ರಾಜಕೀಯ ವಾಸನೆ ಅರಿತು ಮೈತ್ರಿಯನ್ನು ಬೇಗನೇ ಮುಗಿಸಿಕೊಂಡರು. ಇದರಿಂದಾಗಿ ಹಳೆ ಮೈಸೂರು ಭಾಗ, ಬೆಂಗಳೂರು ಭಾಗದಲ್ಲಿ ಬಿಜೆಪಿ ಗೆಲುವಿನಲ್ಲಿ ಪೂರಕವಾಗಿದೆ.
ಈಗ ಕೇಂದ್ರದಲ್ಲಿ ಜೆಡಿಎಸ್‌ನಿಂದ ಕುಮಾರಸ್ವಾಮಿ, ಬಿಜೆಪಿಯಿಂದ ಡಾ.ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಂಬಂಧವನ್ನು ಮುಂದಿನ ವಿಧಾನಸಭೆ ಚುನಾವಣೆಗೂ ವಿಸ್ತರಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ಯಾವ ಕ್ಷೇತ್ರದಲ್ಲಿ ಏನಾಯಿತು
- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿಯ ಗಟ್ಟಿ ಸೇತುಬಂಧವಾಗಿ ಕಣಕ್ಕಿಳಿಸಿದ್ದು ಹೃದ್ರೋಗ ತಜ್ಞ ಡಾ.ಮಂಜುನಾಥ್ ಅವರನ್ನು. ಇಲ್ಲಿ ಡಿಕೆಎಸ್ ಸಹೋದರರನ್ನು ಮಣಿಸಲು ಹೊಸ ಹಾಗೂ ಜನಪ್ರಿಯ ಅಭ್ಯರ್ಥಿಯೇ ಬೇಕಿತ್ತು. ಗೌಡರ ಕುಟುಂಬ ಮಾತ್ರವಲ್ಲದೇ ಇಡೀ ರಾಜ್ಯವೇ ಅಭಿಮಾನಪಡುವ ಮಂಜುನಾಥ್ ಅವರು ಬಿಜೆಪಿ, ಜೆಡಿಎಸ್ ಮತಗಳೊಂದಿಗೆ ಭಾರೀ ಅಂತರದಲ್ಲಿ ಗೆದ್ದು ಬಂದರು. ಮೊದಲ ಬಾರಿ ಇಲ್ಲಿ ಬಿಜೆಪಿ ಗೆದ್ದಿತು. ದೇವೇಗೌಡರ ಕುಟುಂಬಕ್ಕೆ 15 ವರ್ಷದ ನಂತರ ಅಧಿಕಾರ ದೊರೆಯಿತು.
- ತುಮಕೂರಿನಲ್ಲಿ ಮೈತ್ರಿಯಿಂದ ಖುದ್ದು ದೇವೇಗೌಡರೇ ಸೋತಿದ್ದರು. ಇಲ್ಲಿ ಬಿಜೆಪಿ ಗೆದ್ದಿತ್ತು. ಸೋಮಣ್ಣ ಅವರನ್ನು ಕಣಕ್ಕಿಳಿಸಿದರೂ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಹೆಚ್ಚಿತು. ಆದರೂ ಇಲ್ಲಿ ಬಿಜೆಪಿ ಜತೆಗೆ ಬಹುಪಾಲು ಜೆಡಿಎಸ್ ಮತಗಳು ಸೋಮಣ್ಣ ಅವರನ್ನು ಕೈಹಿಡಿದು ಗೆಲುವಿನ ದಡ ಮುಟ್ಟಿಸಿತು. ಖುದ್ದು ಸೋಮಣ್ಣ ಕೂಡ ಇದನ್ನು ಗೆದ್ದ ನಂತರ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
- ಮೈಸೂರು ಜಿಲ್ಲೆ ಜೆಡಿಎಸ್‌ನ ಮತ್ತೊಂದು ಭದ್ರಕೋಟೆ. ಇಲ್ಲಿ ಒಂದೆರಡು ಕ್ಷೇತ್ರ ಬಿಟ್ಟರೆ ಎಲ್ಲೆಡೆ ಜೆಡಿಎಸ್‌ನ ಪ್ರಾಬಲ್ಯವಿದೆ. ಗೆದ್ದ ಇತಿಹಾಸವೂ ಇದೆ. ಹಿಂದೆ ಜೆಡಿಎಸ್ ಗೆದ್ದಿಲ್ಲವಾದರೂ ಗಣನೀಯ ಮತ ಪಡೆದುಕೊಂಡಿದೆ. ಪ್ರತಾಪಸಿಂಹ ಗೆಲುವಿಗೆ ಇದೂ ಒಂದು ಕಾರಣವಾಗುತ್ತಿತ್ತು. ಈ ಬಾರಿ ಮೈಸೂರಿನಲ್ಲಿ ಬಿಜೆಪಿಯ ಯದುವೀರ್ ಒಡೆಯರ್ ಭಾರೀ ಅಂತರದಿಂದಲೇ ಗೆದ್ದರು. ಜೆಡಿಎಸ್‌ನ ಪಾತ್ರವೂ ಇದರ ಹಿಂದೆ ಇದೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ 3ಪಕ್ಷಗಳಿಗೆ ಲೋಕಸಭಾ ಫಲಿತಾಂಶದ ಪಾಠ, ಕಾಂಗ್ರೆಸ್ ಮೇಲೆ ಖರ್ಗೆ, ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಬಿಗಿ, ಜೆಡಿಎಸ್‌ಗೆ ಎಚ್ಚರಿಕೆ
- ಮಂಡ್ಯದಲ್ಲಿ ಕಳೆದ ಬಾರಿ ಜೆಡಿಎಸ್ ಸೋತಿತ್ತು. ಅಲ್ಲಿ ಸುಮಲತಾ ವಿರುದ್ದ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕಿಳಿದು ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆದುಕೊಂಡು ಗೆದ್ದು ಬಂದರು. ಇಲ್ಲಿಯೂ ಮೈತ್ರಿಯ ಪರಿಣಾಮವೂ ಗಟ್ಟಿಯಾಗಿದೆ.
- ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಬಿಜೆಪಿ ಅಭ್ಯರ್ಥಿ. ಇಲ್ಲಿಯೂ ಜೆಡಿಎಸ್‌ನ ನೆಲೆ ಗಟ್ಟಿಯಾಗಿದೆ. ಈ ಕಾರಣದಿಂದಲೇ ಸುಧಾಕರ್ ಅವರು ಗೌಡರ ಕುಟುಂಬದ ಆಶಿರ್ವಾದ ಪಡೆದುಕೊಂಡಿದ್ದರು. ಅವರು ಕೂಡ ಹೆಚ್ಚಿನ ಅಂತರದಲ್ಲೇ ಗೆದ್ದಿದ್ದಾರೆ.
- ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಜೆಡಿಎಸ್ ನ ನೆಲೆಯಿದೆ. ಆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು, ಪ್ರಮುಖರು ಕಾರ್ಯಕರ್ತರು ಕೆಲಸ ಮಾಡಿರುವುದು ಬಿಜೆಪಿ ಗೆಲುವಿಗೆ ಉಪಯೋಗವಾಗಿದೆ. ಕೋಲಾರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು. ಈ ಬಾರಿ ಮೈತ್ರಿ ಕಾರಣಕ್ಕೆ ಜೆಡಿಎಸ್ ಗೆದ್ದು ಬಂದಿತು. ಇಲ್ಲಿಯೂ ಪರಸ್ಪರ ಮೈತ್ರಿ ಕೆಲಸ ಮಾಡಿದಂತೆ ಕಾಣುತ್ತಿದೆ.
- ಬೆಂಗಳೂರು ದಕ್ಷಿಣದಲ್ಲಿ ಜೆಡಿಎಸ್‌ನ ಬಲ ಅಷ್ಟಾಗಿ ಇಲ್ಲ. ಹೀಗಿದ್ದರೂ ಅಲ್ಲಿ ತೇಜಸ್ವಿ ಸೂರ್ಯ ಕಳೆದ ಬಾರಿಗಿಂತ 10 ಸಾವಿರಕ್ಕೂ ಅಧಿಕ ಪಡೆದುಕೊಂಡಿದ್ದಾರೆ. ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಒಂದೂವರೆ ಲಕ್ಷ ಅಧಿಕ ಮತ ಬಂದಿವೆ. ಹಾಗೂ ಬೆಂಗಳೂರು ಕೇಂದ್ರದಲ್ಲಿ ಪಿಸಿ ಮೋಹನ್ ಐವತ್ತು ಸಾವಿರ ಅಧಿಕ ಮತ ಪಡೆದು ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಗೆದ್ದಿರುವ ಹಿಂದೆ ಜೆಡಿಎಸ್ ಕೊಡುಗೆಯೂ ಇದೆ.
- ಹಾಸನ ಜಿಲ್ಲೆಯಲ್ಲಿ ಮಾತ್ರ ಹಿಂದಿನಿಂದ ಗೆಲ್ಲುತ್ತಲೇ ಬರುತ್ತಿದ್ದ ಜೆಡಿಎಸ್ ಸೋತಿದೆ. ಅಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಇದ್ದ ಬೇಸರ, ಪಕ್ಷಗಳ ನಡುವಿನ ಸಮನ್ವಯದ ಕೊರತೆಯಿಂದಲೇ ಸೋಲಾಗಿದೆ ಎನ್ನುವ ಮಾತುಗಳು ಜೆಡಿಎಸ್ ನಲ್ಲಿಯೇ ಕೇಳಿ ಬರುತ್ತಿವೆ.