logo
ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಕಾಡನ್ನಾಡಳಿದ ವೀರಪ್ಪನ್‌ ಪುತ್ರಿಯ ರಾಜಕೀಯ ಪ್ರವೇಶ, ಆಗುವರೇ ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ?

Forest Tales: ಕಾಡನ್ನಾಡಳಿದ ವೀರಪ್ಪನ್‌ ಪುತ್ರಿಯ ರಾಜಕೀಯ ಪ್ರವೇಶ, ಆಗುವರೇ ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ?

Umesha Bhatta P H HT Kannada

Mar 13, 2024 07:00 AM IST

google News

ವೀರಪ್ಪನ್‌ ಪುತ್ರಿಯ ಚುನಾವಣಾ ರಾಜಕೀಯಕ್ಕೆ ಈ ಬಾರಿ ಸಮಯ ಕೂಡಿ ಬಂದಿದೆ.

    • Lok Sabha Elections ಈ ಬಾರಿ ಲೋಕಸಭೆ ಚುನಾವಣೆಗೆ ದಶಕಗಳ ಹಿಂದೆ ಕಾಡನ್ನಾಡಳಿದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ ವೀರಪ್ಪನ್‌ ಪ್ರವೇಶವಾಗುವ ಸೂಚನೆಗಳಿವೆ. ಅರಣ್ಯ ಪ್ರದೇಶದಲ್ಲೆ ಬೆಳೆದ ವೀರಪ್ಪನ್‌ ಪುತ್ರಿ ಈಗ ವಕೀಲೆಯಾಗಿ ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಗಟ್ಟಿ ಬದುಕು ಕಟ್ಟಿಕೊಳ್ಳಲು  ಮುಂದಾಗಿದ್ದಾರೆ.
ವೀರಪ್ಪನ್‌ ಪುತ್ರಿಯ ಚುನಾವಣಾ ರಾಜಕೀಯಕ್ಕೆ ಈ ಬಾರಿ ಸಮಯ ಕೂಡಿ ಬಂದಿದೆ.
ವೀರಪ್ಪನ್‌ ಪುತ್ರಿಯ ಚುನಾವಣಾ ರಾಜಕೀಯಕ್ಕೆ ಈ ಬಾರಿ ಸಮಯ ಕೂಡಿ ಬಂದಿದೆ.

ಕೂಸೆ ಮುನಿಸ್ವಾಮಿ ವೀರಪ್ಪನ್‌ .. ಈ ಹೆಸರು ಕೇಳಿದರೆ ಈಗಲೂ ಕಾಡಿನ ರೋಚಕ ಕಥೆಗಳು ತೆರೆದುಕೊಳ್ಳುತ್ತವೆ. ಆತ ಕಾಡಿನ ದಂತಕತೆ. ಎರಡು ದಶಕಕ್ಕೂ ಹೆಚ್ಚು ಕಾಲ ಕರ್ನಾಟಕ, ತಮಿಳುನಾಡು, ಕೇರಳ ಗಡಿ ಭಾಗದ ಅರಣ್ಯದಲ್ಲಿ ಸಾಮ್ರಾಜ್ಯ ಸ್ಥಾಪಿಸಿಕೊಂಡು ಆಳಿದವನು. ಅಕ್ಷರಶಃ ಅರಣ್ಯದ ಡಾನ್‌.

ಕರ್ನಾಟಕ ತಮಿಳುನಾಡು ಗಡಿಯಂಚಿನ, ಕಾಡಿನ ನಡುವೆ ಇರುವ ಪುಟ್ಟ ಹಳ್ಳಿ ಗೋಪಿನಾಥಂನ ಅನಾಮಿಕ ಕುಟುಂಬದಲ್ಲಿ ಜನಿಸಿ ಕನ್ನಡದ ವರನಟ ಡಾ.ರಾಜಕುಮಾರ್‌ ಅವರ ಅಪಹರಣ, ಮಾಜಿ ಸಚಿವ ನಾಗಪ್ಪ, ಐಎಫ್‌ಎಸ್‌ ಅಧಿಕಾರಿ ಶ್ರೀನಿವಾಸ್‌ ಹಾಗೂ ಹಲವಾರು ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳ ಹತ್ಯೆಯ ಭಾಗಿದಾರ ವೀರಪ್ಪನ್‌ನ ಹೆಸರು ಈಗಲೂ ಅರಣ್ಯದೊಂದಿಗೆ ತಳುಕು ಹಾಕಿಕೊಂಡಿವೆ.

ಸತತ ಎರಡು ದಶಕದಿಂದ ವೀರಪ್ಪನ್‌ ಸೆರೆಗೆ ಕರ್ನಾಟಕ ಹಾಗೂ ತಮಿಳುನಾಡು ವಿಶೇಷ ಪಡೆಗಳು ಪ್ರಯತ್ನ ನಡೆಸುತ್ತಲೇ ಇದ್ದವು. ಆತನನ್ನು ಸೆರೆ ಹಿಡಿಯಲೇಬೇಕು ಎನ್ನುವ ಪ್ರಯತ್ನ ನಿರಂತರವಾಗಿ ನಡೆದಿತ್ತು. ಇದಕ್ಕಾಗಿ ಅದೆಷ್ಟು ಪೊಲೀಸ್‌ ಸಿಬ್ಬಂದಿ, ವಾಹನಗಳು, ಶಿಬಿರಗಳು, ಗಸ್ತು ತಂಡಗಳು.. ಅರಣ್ಯದೊಳಗೆ ಇದ್ದುಕೊಂಡೇ, ತಂತ್ರಜ್ಞಾನದ ನೆರವೂ ಇಲ್ಲದೇ ಬರೀ ಬುದ್ದಿವಂತಿಕೆಯಿಂದಲೇ ಕಾಡನ್ನಾಳಿದಾತ ವೀರಪ್ಪನ್‌. ಆನೆ ದಂತ ಬೇಟೆ, ಶ್ರೀಗಂಧ ಕಳ್ಳತನ ,ಅರಣ್ಯ ಸಂಪತ್ತು ದೋಚಿದ್ದ ವೀರಪ್ಪನ್‌ ಹಣಕ್ಕಾಗಿ ಗಣ್ಯರು, ಪರಿಸರ ತಜ್ಞರು, ಅಧಿಕಾರಿಗಳನ್ನು ಅಪಹರಿಸಿದ್ದ ಕೂಡ. ಕೊನೆಗೆ 2004ರಲ್ಲಿ ವೀರಪ್ಪನನ್ನು ಕೊಂದು ಹಾಕಲಾಗಿತ್ತು.ವ

ವೀರಪ್ಪನ್‌ ಪುತ್ರಿ

ವೀರಪ್ಪನ್‌ ಹತ್ಯೆಯಾಗಿ ಎರಡು ದಶಕ. ಈಗ ಆತನ ಕುಟುಂಬವೂ ಸುದ್ದಿಯಲ್ಲಿದೆ. ಅದೂ ಆತನ ಪುತ್ರಿ ವಿದ್ಯಾರಾಣಿ ಕಾರಣಕ್ಕೆ ಮತ್ತೆ ವೀರಪ್ಪನ್‌ ಹಾಗೂ ಕಾಡಿನ ನೆನಪುಗಳು ತೆರೆದುಕೊಳ್ಳುತ್ತಿವೆ.

ಎಂಬತ್ತರ ದಶಕದಲ್ಲಿಯೇ ಮುತ್ತುಲಕ್ಷ್ಮಿ ಜತೆ ವಿವಾಹವಾಗಿದ್ದ ವೀರಪ್ಪನ್‌ ತೊಂಬತ್ತರ ದಶಕದ ಹೊತ್ತಿಗೆ ಭೂಗತವೇ ಆಗಿದ್ದ. ಗೋಪಿನಾಥಂನಲ್ಲಿ ಕುಟುಂಬದ ವಾಸ. ಆಗಾಗ ಬಂದು ಹೋಗುವುದು ಬಿಟ್ಟರೆ ಕಾಡೇ ಆತನ ವಾಸ ಸ್ಥಾನವಾಗಿ ಮಾರ್ಪಟ್ಟಿತ್ತು. ಹೀಗೆ ಬಂದು ಹೋಗುವ ನಡುವೆಯೇ ಇಬ್ಬರು ಹೆಣ್ಣು ಮಕ್ಕಳು ವೀರಪ್ಪನ್‌ ಹೆಸರಿನಲ್ಲಿ ಜನಿಸಿದ್ದವು.

ದೊಡ್ಡ ಮಗಳು ವಿದ್ಯಾರಾಣಿ (ಜನನ1990), ಎರಡನೇ ಮಗಳು ಪ್ರಭಾ (ಜನನ 1993). ಹಿರಿ ಮಗಳು ವಿದ್ಯಾರಾಣಿ ಎನ್ನುವ ಹೆಸರು ಕೊಟ್ಟವರೂ ಎಸ್‌ಟಿಎಫ್‌ನ ಅಧಿಕಾರಿಯೊಬ್ಬರು. ಚೆನ್ನಾಗಿ ಓದಲಿ ಎನ್ನುವ ಉದ್ದೇಶದಿಂದ ವಿದ್ಯೆಯ ರಾಣಿ ಆಗು ಎಂದು ಹೇಳಿದ್ದರಂತೆ. ವಿದ್ಯಾರಾಣಿಗೆ ಅಪ್ಪನನ್ನು ನೋಡಿದ ನೆನಪಿದೆ. ಅದೇ ಎರಡನೇ ಮಗಳು ಪ್ರಭಾ ಅಪ್ಪನನ್ನು ನೋಡಿಯೇ ಇಲ್ಲ. ಇಬ್ಬರಿಗೆ ಅಪ್ಪನ ಕಾಡಿನ ಕಥೆಗಳು, ವೈಭವದ ಕಥಾನಕಗಳು ಮಾತ್ರ ಗೊತ್ತು. ಮೀಸೆ ಮೇಲೆ ಕೈ ಸವರುವ ಅಪ್ಪನ ಫೋಟೋ ನೋಡಿಯೇ ನಮ್ಮಪ್ಪ ಹೀಗಿದ್ದರು ಎಂದು ಮಕ್ಕಳಿಬ್ಬರೂ ಊಹಿಸಿಕೊಳ್ಳಬೇಕು.

ವಿದ್ಯಾರಾಣಿ ಎಂದು ಹೆಸರಿಟ್ಟುಕೊಂಡಿದ್ದರೆ ಆಕೆಯೂ ಯಾರೋ ಇರಬೇಕು ಎಂದುಕೊಂಡು ಬಿಡುತ್ತಿದ್ದರು. ಜತೆಗೆ ವೀರಪ್ಪನ್‌ ಹೆಸರು ಸೇರಿದ್ದು ಆಕೆಯನ್ನು ಮುಖ್ಯವಾಹಿನಿಗೆ ತಂದಿದೆ. ತಮಿಳುನಾಡಿನ ರಾಜಕೀಯದಲ್ಲಿ ವಿದ್ಯಾರಾಣಿ ವೀರಪ್ಪನ್‌ ಹೆಸರು ಜನಪ್ರಿಯವೇ.

ಅಪ್ಪನನ್ನು ನೋಡಿದ್ದು ಒಮ್ಮೆಯೇ..

ನನ್ನ ಅಪ್ಪನನ್ನು ನಾನು ನೋಡಿದ್ದು ಒಂದೇ ಬಾರಿ. ಅದು ಮೂರನೇ ತರಗತಿಯಲ್ಲಿ ಇದ್ಧಾಗ ಗೋಪಿನಾಥಂನಲ್ಲಿ. ಅಜ್ಜನ ಮನೆಯಲ್ಲಿದ್ದಾಗ ಬಂದಿದ್ದ ಅಪ್ಪನೊಂದಿಗೆ ಅರ್ಧಗಂಟೆ ಮಾತನಾಡಿದ್ದೆ. ನಾನು ಶಾಲೆಗೆ ಹೋಗುವುದರಿಂದ ಹಿಡಿದು ಎಲ್ಲ ವಿಷಯ ಕೇಳಿದ್ದರು. ಚೆನ್ನಾಗಿ ಓದುವಂತೆ ತಲೆ ಸವರಿದ್ದರು. ವೈದ್ಯೆಯಾಗು ಎಂದು ಬೆನ್ನು ತಟ್ಟಿದ್ದರು. ವೈದ್ಯೆಯಾದರೆ ನೀನು ಜನ ಸೇವೆ ಮಾಡಬಹುದು ಎನ್ನವುದನ್ನು ತಿಳಿ ಹೇಳಿದ್ದ ಅಪ್ಪನ ಮಾತುಗಳು ಈಗಲೂ ಕಿವಿಯಲ್ಲಿವೆ. ಆನಂತರ ಅಪ್ಪನನ್ನು ಭೇಟಿಯಾಗುವ ಅವಕಾಶವೇ ಸಿಗಲಿಲ್ಲ. ನಮ್ಮನ್ನು ದೂರದ ಸಂಬಂಧಿಕರ ಮನೆಯಲ್ಲಿ, ಹಾಸ್ಟೆಲ್‌ಗಳಲ್ಲಿ ಇರಿಸಿ ನಮ್ಮಮ್ಮ ಓದಿಸಿದರು ಎಂದು ಹಿಂದಿನದ್ದನ್ನು ನೆನಪಿಸಿಕೊಳ್ಳುತ್ತಾರೆ ವಿದ್ಯಾರಾಣಿ.

ಆಗ ವೀರಪ್ಪನ್‌ ಮಗಳು ಎನ್ನುವುದು ಶಾಲೆಯಲ್ಲಿ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಕೆಲವರಿಗೆ ತಿಳಿದಿದ್ದರೂ ಯಾರೂ ನಮ್ಮನ್ನು ಕೆಟ್ಟದ್ದಾಗಿ ನೋಡುವುದು, ನಡೆಸಿಕೊಳ್ಳುವುದು ಎಂದಿಗೂ ಮಾಡಲಿಲ್ಲ. ನಮ್ಮ ಪಾಡಿಗೆ ಶಿಕ್ಷಣ ಪಡೆದುಕೊಂಡೆವು. ಮುಂದೆ ಕಾನೂನು ಶಿಕ್ಷಣ ಪಡೆಯಲೆಂದು ನಾನು ಬೆಂಗಳೂರಿಗೆ ಹೋದೆ. ವಿದ್ಯಾವರ್ಧಕ ಸಂಘದ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿಕೊಂಡೆ. ಬೆಂಗಳೂರಿನೊಂದಿಗೆ ಹೊಂದಿಕೊಂಡಿರುವ ಕೃಷ್ಣಗಿರಿ ಜಿಲ್ಲೆಯಲ್ಲಿ ನನ್ನ ಬದುಕು ಆರಂಭವಾಗಿದ್ದು. ಅಲ್ಲಿಯೇ ವಕೀಲಿಕೆ ಶುರು ಮಾಡಿದೆ. ಪುಟ್ಟ ಮಕ್ಕಳಿಗೆ ಶಿಕ್ಷಣ ಕೊಡಲೆಂದೇ ಶಾಲೆಯೊಂದನ್ನು ಆರಂಭಿಸಿದೆ. ಎರಡೂ ಕಡೆಯೂ ಗಮನ ನೀಡಿಕೊಂಡು ಹೋಗುತ್ತಿದ್ದೇನೆ ಎಂದು ಈಗಿನ ಸನ್ನಿವೇಶಗಳನ್ನು ವಿವರಿಸುತ್ತಾರೆ.

ರಾಜಕೀಯದ ನಂಟು ಹೇಗೆ

ವನವಾಸಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಹಲವರ ಒಡನಾಡ ಬೆಳೆಯಿತು. ಬದುಕಿನ ಕುರಿತು, ಪಾಸಿಟಿವ್‌ ಯೋಚನೆಗಳ ಕುರಿತು ನಮಗೆ ಏನೆಲ್ಲಾ ಹೇಳಿಕೊಡುತ್ತಿದ್ದರು. ಮುಂದೆ ನನ್ನ ಬದುಕಿಗೆ ಅದೇ ಬುನಾದಿ ಎಂದುಕೊಂಡಿರಲಿಲ್ಲ. ಒಮ್ಮೆ ಕೇಂದ್ರ ಸಚಿವರಾಗಿದ್ದ ಪೊನ್‌ ರಾಧಾಕೃಷ್ಣನ್‌ ಅವರ ಭಾಷಣ ಕೇಳಿದ್ದೆ. ಅವರ ಮಾತುಗಳು ನನಗೆ ಸಾಕಷ್ಟು ಪ್ರೇರಣೆ ನೀಡಿದ್ದವು. ಸಮಾಜಕ್ಕಾಗಿ ಕೆಲಸ ಮಾಡು ಎಂದು ಹೇಳಿಕೊಟ್ಟಿದ್ದ ನನ್ನಪ್ಪನ ಮಾತುಗಳನ್ನು ನೆನಪಿಸಿದ್ದವು. ಅವರ ಪ್ರೇರಣೆಯಿಂದಲೇ ನಾನು ರಾಜಕೀಯ ಸೇರಿಕೊಂಡೆ.ನಾಲ್ಕು ವರ್ಷದ ಹಿಂದೆ ಕೃಷ್ಣಗಿರಿಯಲ್ಲಿ ಬಿಜೆಪಿಗೆ ಸೇರುವ ಆಹ್ವಾನ ಬಂದಿತು. ಒಪ್ಪಿಕೊಂಡು ಬಿಜೆಪಿ ಸೇರಿಕೊಂಡೆ. ಬಿಜೆಪಿ ಯುವಮೋರ್ಚಾದ ಜವಾಬ್ದಾರಿ ಕೊಟ್ಟರು. ನಾಲ್ಕು ವರ್ಷದಿಂದ ಬಿಜೆಪಿಯಲ್ಲೇ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಮಹಿಳಾ ಮೋರ್ಚಾದಲ್ಲೂ ಇದ್ದೇನೆ. ಈಗ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಮೂರು ವರ್ಷದ ಹಿಂದೆಯೇ ವಿಧಾನಸಭೆ ಚುನಾವಣೆ ನಡೆದಾಗ ಸ್ಪರ್ಧಿಸುವ ಆಹ್ವಾನ ಬಂದಿತ್ತು. ನಾನು ಚುನಾವಣೆ ರಾಜಕೀಯಕ್ಕೆ ಹೋಗಲಿಲ್ಲ. ಸಂಘಟನೆ, ಶಿಕ್ಷಣ, ಕಾನೂನು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ವಿದ್ಯಾರಾಣಿ ರಾಜಕೀಯ ಸೇರಿದ ಸನ್ನಿವೇಶ, ನಾಲ್ಕು ವರ್ಷದಲ್ಲಿ ಆದ ಅನುಭವವನ್ನು ತೆರೆದಿಡುತ್ತಾರೆ.

ತಮಿಳುನಾಡಿನಲ್ಲಿ ಬಿಜೆಪಿ ಪ್ರಭಾವ ಅಷ್ಟಿಲ್ಲ. ಈಗ ಮೈತ್ರಿ ಕೂಡ ಇಲ್ಲದೇ ಒಂಟಿಯಾಗಿ ಬಿಜೆಪಿ ಕಣಕ್ಕಿಳಿಯುತ್ತಿದೆ. ಇದರ ನಡುವೆ ವಿದ್ಯಾರಾಣಿ ಕೂಡ ಕೃಷ್ಣಗಿರಿಯಿಂದ ಬಿಜೆಪಿ ಅಭ್ಯರ್ಥಿಯಾಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಿಂತರೂ ತಮಿಳುನಾಡು ದ್ರಾವಿಡ ರಾಜಕೀಯದ ನೆಲೆಯಲ್ಲಿ ಗೆಲುವು ಸುಲಭವೂ ಅಲ್ಲ. ಗೆದ್ದರೆ ಇತಿಹಾಸ. ಸೋತರೆ ಅನುಭವ ಎನ್ನುವುದು ವಿದ್ಯಾರಾಣಿ ಆಶಯ.

ನಿಮಗೆ ಉತ್ತರಪ್ರದೇಶದಲ್ಲಿ ವೀರಪ್ಪನ್‌ ನಂತೆಯೇ ದಂತಕಥೆಯಾದ ಫೂಲನ್‌ ದೇವಿ ನೆನಪಿರಬೇಕು. ಆಕೆಯೂ ಕೊನೆಗೆ ಪರಿವರ್ತನೆಗೊಂಡು ಸಮಾಜವಾದಿ ಪಕ್ಷದಿಂದ ಎರಡು ಬಾರಿ ಸಂಸದಳಾಗಿದ್ದು, ಆಗಲೇ ಹತ್ಯೆಯಾಗಿದ್ದು ಇತಿಹಾಸ. ವೀರಪ್ಪನ್‌ಗೆ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶ ಸಿಗದೇ ಇದ್ದರೂ ಕಾಡಿನ ಅನುಭವವಿರುವ ಆತನ ಪುತ್ರಿಗೆ ಸಂಸತ್‌ ಪ್ರವೇಶಿಸುವ ಅವಕಾಶ ಆಗಬಹುದೇ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

-ಕುಂದೂರು ಉಮೇಶಭಟ್ಟ, ಮೈಸೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ