Lok Sabha Elections: ಲೋಕಸಭೆ ಚುನಾವಣೆಗೆ ತಯಾರಿ: ಕರ್ನಾಟಕದ ಬಿಜೆಪಿ ಯಾವ ಸಂಸದರಿಗೆ ಕೊಕ್, ಹೊಸಬರಿಗೆ ಯಾವ ಕ್ಷೇತ್ರದಲ್ಲಿ ಅವಕಾಶ?
Jun 08, 2023 05:00 PM IST
ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಕರ್ನಾಟಕ ಬಿಜೆಪಿ ಕೈ ಬಿಡಬಹುದಾದ ಹಾಲಿ ಸದಸ್ಯರು, ಮತ್ತೊಮ್ಮೆ ಆಯ್ಕೆಯಾಗುವವರ ಪಟ್ಟಿ ಮಾಡಿದೆ
- ಕರ್ನಾಟಕದ ಹಾಲಿ ಲೋಕಸಭಾ ಸದಸ್ಯರಲ್ಲಿ ಶೇ. 50 ಮಂದಿಗೆ ಮತ್ತೊಂದು ಅವಕಾಶ ಸಿಗಬಹುದು. ಕೆಲವು ಹಿರಿಯರನ್ನು ವಯಸ್ಸು ಹಾಗೂ ಆರೋಗ್ಯದ ಕಾರಣಕ್ಕೆ ಕೈ ಬಿಡಬಹುದು. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ, ಅವಕಾಶ ಪಡೆಯದ ಕೆಲವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬಹುದು ಎನ್ನುವ ಚರ್ಚೆಗಳು ಗುರುವಾರ ನಡೆದಿರುವ ಬಿಜೆಪಿ ಸಭೆಯಲ್ಲಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನು ಹತ್ತು ತಿಂಗಳು ಬಾಕಿಯಿದೆ. ಈಗಾಗಲೇ ಪಕ್ಷಗಳಲ್ಲಿ ತಯಾರಿ ಪರ್ವವೂ ಶುರುವಾಗಿದೆ.
ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಈ ಬಾರಿ ಹಲವರನ್ನು ಬದಲಾಯಿಸುವ ಇರಾದೆ ಹೊಂದಿದೆ. ಹಾಲಿ ಲೋಕಸಭಾ ಸದಸ್ಯರಲ್ಲಿ ಶೇ. 50 ಮಂದಿಗೆ ಮತ್ತೊಂದು ಅವಕಾಶ ಸಿಗಬಹುದು. ಕೆಲವು ಹಿರಿಯರನ್ನು ವಯಸ್ಸು ಹಾಗೂ ಆರೋಗ್ಯದ ಕಾರಣಕ್ಕೆ ಕೆಲ ಹಿರಿಯರನ್ನು ಬದಲಾಯಿಸಬಹುದು. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ, ಅವಕಾಶ ಪಡೆಯದ ಕೆಲವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಬಹುದು ಎನ್ನುವ ಚರ್ಚೆಗಳು ಬಿಜೆಪಿಯಲ್ಲಿ ನಡೆದಿವೆ.
ಗುರುವಾರ ನಡೆದಿರುವ ಬಿಜೆಪಿ ಸಭೆಯಲ್ಲಿ ಈ ಕುರಿತು ಚರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಯಾವ ಕ್ಷೇತ್ರದಲ್ಲಿ ಬದಲಾವಣೆ
ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರಿಗೆ ಈಗಾಗಲೇ 80 ವರ್ಷವಾಗಿದೆ. ಅವರ ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕರಾಗಿರುವುದರಿಂದ ಅಲ್ಲಿ ಬದಲಾವಣೆ ಖಚಿತ. ಮಾಜಿ ಸಚಿವ ಡಾ.ಕೆ.ಸುಧಾಕರ್ ಹೆಸರು ಇಲ್ಲಿ ಮುಂಚೂಣಿಯಲ್ಲಿದೆ.
ಹಾವೇರಿ ಸಂಸದ ಶಿವಕುಮಾರ್ ಉದಾಸಿ ಚುನಾವಣೆ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಇದರಿಂದ ಇಲ್ಲಿಯೂ ಹೊಸ ಅಭ್ಯರ್ಥಿ ಸ್ಪರ್ಧೆ ಖಚಿತ. ಹೊಸಬರಿಗೆ ಅವಕಾಶ ಸಿಗಲಿದೆ.
ಆರೋಗ್ಯದ ಕಾರಣದಿಂದ ಕೆನರಾ ಸಂಸದ ಅನಂತಕುಮಾರ್ ಹೆಗಡೆ ಸ್ಪರ್ಧೆ ಸಾಧ್ಯತೆ ಕಡಿಮೆ. ಇದರಿಂದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ ಹೆಗಡೆ ಅವರಲ್ಲಿ ಒಬ್ಬರು ಅವಕಾಶ ಪಡೆಯಬಹುದು.
ವಯಸ್ಸಿನ ಕಾರಣದಿಂದ ತುಮಕೂರು ಸಂಸದ ಜಿ.ಎಸ್.ಬಸವರಾಜು ಅವರು ಕಣದಿಂದ ದೂರ ಉಳಿಯುವ ಸಾಧ್ಯತೆಯಿದೆ. ಈಗಾಗಲೇ ಬಸವರಾಜು ಪುತ್ರ ಜ್ಯೋತಿ ಗಣೇಶ್ ತುಮಕೂರು ನಗರ ಕ್ಷೇತ್ರದಲ್ಲಿ ಎರಡನೇ ಬಾರಿ ಶಾಸಕರಾಗಿದ್ಧಾರೆ. ತುಮಕೂರಿನಿಂದ ಮಾಜಿ ಸಚಿವ ವಿ.ಸೋಮಣ್ಣ ಹೆಸರು ಇದ್ದರೂ ಇನ್ನೂ ಅನೇಕರ ಹೆಸರುಗಳಿವೆ.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಕೂಡ ವಯಸ್ಸಿನ ಕಾರಣದಿಂದ ಸ್ಪರ್ಧಿಸುವುದಿಲ್ಲ ಎನ್ನಲಾಗುತ್ತಿದೆ. ಇಲ್ಲಿ ಅವರ ಸಂಬಂಧಿ ಅಥವಾ ಪಕ್ಷದ ಮುಖಂಡರಿಗೆ ಅವಕಾಶ ಸಿಗಬಹುದು.
ಚಾಮರಾಜನಗರ ಕ್ಷೇತ್ರದಲ್ಲಿ ಹಿರಿಯ ನಾಯಕ ಶ್ರೀನಿವಾಸಪ್ರಸಾದ್ ಅವರಿಗೂ ಆರೋಗ್ಯ ಕಾರಣದಿಂದ ಟಿಕೆಟ್ ಸಿಗುವುದಿಲ್ಲ. ಆದರೆ ಅವರೇ ಸೂಚಿಸಿದವರಿಗೆ ಟಿಕೆಟ್ ನೀಡಬಹುದು. ನಂಜನಗೂಡು ಕ್ಷೇತ್ರದಲ್ಲಿ ಸೋತಿರುವ ಅಳಿಯ ಹರ್ಷವರ್ಧನ್ ಸ್ಪರ್ಧೆ ಚರ್ಚೆಗಳು ನಡೆದಿವೆ. ಪ್ರಸಾದ್ ಅವರ ಮತ್ತೊಬ್ಬ ಅಳಿಯನ ಹೆಸರೂ ಚಾಲ್ತಿಯಲ್ಲಿದೆ. ಪಕ್ಷ ಸೇರಿರುವ ಮಾಜಿ ಶಾಸಕ ಎಸ್.ಬಾಲರಾಜು ಕೂಡ ಟಿಕೆಟ್ ಕೇಳಬಹುದು.
ವಿಜಯಪುರದಲ್ಲಿ ಹಿರಿಯ ನಾಯಕ ರಮೇಶ ಜಿಗಜಿಣಗಿ ಬದಲಿಗೆ ಹೊಸಬರಿಗೆ ಮಣೆ ಹಾಕುವ ಚರ್ಚೆಗಳು ನಡೆದಿವೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ತಮಗೆ ಇಲ್ಲವೇ ತಮ್ಮ ಪುತ್ರ ಉಮೇಶ್ ಕಾರಜೋಳಗೆ ಅವಕಾಶ ನೀಡುವಂತೆ ಕೋರಬಹುದು. ಈ ಕುಟುಂಬ ಬಿಟ್ಟು ಬೇರೆಯವರಿಗೂ ಅವಕಾಶ ನೀಡಬಹುದು.
ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ ಅವರನ್ನು ಬದಲಿಸಿದರೂ ಅಚ್ಚರಿಯಿಲ್ಲ. ಇಲ್ಲೂ ಹೊಸಬರು ಸ್ಪರ್ಧೆ ಮಾಡಬಹುದು ಅಥವಾ ಕೊನೆ ಕ್ಷಣದಲ್ಲಿ ಗದ್ದಿಗೌಡರಿಗೆ ಟಿಕೆಟ್ ದಕ್ಕಲೂಬಹುದು.
ಕೊಪ್ಪಳದಲ್ಲಿ ವಿಧಾನಸಭೆ ಚುನಾವಣೆ ವೇಳೆ ಹಠ ಹಿಡಿದು ಸೊಸೆಗೆ ಟಿಕೆಟ್ ಪಡೆದರೂ ಗೆಲ್ಲಿಸಲು ಆಗದ ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ತಪ್ಪಿ ಚಂದ್ರಶೇಖರ್‌ಗೆ ಅವಕಾಶ ಮಾಡಿಕೊಡಬಹುದು ಇಲ್ಲವೇ ಹೊಸಬರು ಸ್ಪರ್ಧಿಸಬಹುದು ಎನ್ನುವ ಚರ್ಚೆಗಳಿವೆ.
ಬೆಳಗಾವಿಯಲ್ಲೂ ಮಂಗಳ ಅಂಗಡಿ ಅವರಿಗೆ ಪತಿ ಸುರೇಶ್ ಅಂಗಡಿ ನಿಧನದ ನಂತರ ಅವಕಾಶ ಮಾಡಿಕೊಡಲಾಗಿತ್ತು.ಅವರ ಬೀಗರಾದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವುದರಿಂದ ಮಂಗಳ ಅವರಿಗೆ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಈ ಬಾರಿ ವಿಧಾನಸಭೆಗೆ ಟಿಕೆಟ್ ತಪ್ಪಿದ ಅನಿಲ್ ಬೆನಕೆ ಸೇರಿದಂತೆ ಹಲವರ ಹೆಸರು ಚಾಲ್ತಿಯಲ್ಲಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸದಸ್ಯ ಡಿ.ವಿ.ಸದಾನಂದಗೌಡ ಅವರನ್ನೇ ಕಣಕ್ಕಿಳಿಸಬೇಕೋ ಅಥವಾ ಹೊಸಬರಿಗೆ ಅವಕಾಶ ಕೊಡಬೇಕೋ ಎನ್ನುವ ಕುರಿತು ನಿರ್ಧಾರ ಆಗಬೇಕಾಗಿದೆ.
ಜಾ.ದಳ ಪ್ರಭಾವ ಇರುವ ಹಾಸನದಲ್ಲಿ ಈ ಬಾರಿ ವಿಧಾನಸಭೆಯಲ್ಲಿ ಸೋತಿರುವ ಪ್ರೀತಂ ಗೌಡ ಅಥವಾ ಹೊಸಬರಿಗೆ ಅವಕಾಶ ನೀಡಿದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಹೊಸಬರ ಹುಡುಕಾಟ ನಡೆದಿದೆ.
ಹಲವು ಹಾಲಿಗಳಿಗೆ ಮಣೆ
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರದಲ್ಲಿ ಪಿ.ಸಿ.ಮೋಹನ್, ಮೈಸೂರು-ಕೊಡಗಿನಿಂದ ಪ್ರತಾಪಸಿಂಹ, ಚಿಕ್ಕಮಗಳೂರು ಉಡುಪಿಯಿಂದ ಶೋಭಾ ಕರಂದ್ಲಾಜೆ, ಮಂಗಳೂರಿನಿಂದ ನಳೀನ್ ಕುಮಾರ್ ಕಟೀಲ್, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ಬೀದರ್‌ನಿಂದ ಭಗವಂತಖೂಬ, ಕಲಬುರಗಿಯಿಂದ ಡಾ.ಉಮೇಶ್ ಜಾಧವ್, ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ, ರಾಯಚೂರಿನಿಂದ ರಾಜಾ ಅಮರೇಶ ನಾಯಕ್, ಚಿತ್ರದುರ್ಗದಿಂದ ಎ.ನಾರಾಯಣಸ್ವಾಮಿ, ಮಂಡ್ಯದಿಂದ ಸುಮಲತಾ ಅಂಬರೀಶ್, ಧಾರವಾಡದಿಂದ ಪ್ರಲ್ಹಾದ್ ಜೋಶಿ, ಬಳ್ಳಾರಿಯಿಂದ ದೇವೇಂದ್ರಪ್ಪ, ಕೋಲಾರದಿಂದ ಮುನಿಸ್ವಾಮಿ ಅವರಿಗೇ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
ಮೈತ್ರಿ ಲೆಕ್ಕಾಚಾರ
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜಾ.ದಳ ಮೈತ್ರಿ ಆಗಿತ್ತು. ಎಂಟು ಕ್ಷೇತ್ರಗಳನ್ನು ಜಾ.ದಳಕ್ಕೆ ಕಾಂಗ್ರೆಸ್ ಬಿಟ್ಟಿಕೊಟ್ಟಿತ್ತು. ಈ ಬಾರಿ ಕಾಂಗ್ರೆಸ್ ಹಾಗೂ ಜಾ.ದಳ ಮೈತ್ರಿ ಸಾಧ್ಯತೆ ಕಡಿಮೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಹಾಗೂ ಜಾ.ದಳ ಒಂದಾಗಿ ಸೀಟು ಹಂಚಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.