logo
ಕನ್ನಡ ಸುದ್ದಿ  /  ಕರ್ನಾಟಕ  /  Cm Bommai On Border Dispute: ಮಹಾರಾಷ್ಟ್ರದ ವಿಪಕ್ಷ ನಾಯಕರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ ಟೀಕೆ

CM Bommai on Border dispute: ಮಹಾರಾಷ್ಟ್ರದ ವಿಪಕ್ಷ ನಾಯಕರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ ಟೀಕೆ

HT Kannada Desk HT Kannada

Dec 22, 2022 09:07 AM IST

google News

ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು ಗಡಿ ವಿಚಾರ ಕುರಿತ ಹೇಳಿಕೆಗಳಿಗೆ ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು

  • ಮಹಾರಾಷ್ಟ್ರದ ವಿರೋಧ ಪಕ್ಷದ ಶಾಸಕರು ಶಾಸನ ಸಭೆಯಲ್ಲಿ ಮತ್ತು ಹೊರಗಡೆ ಬಹಳ ಹದ್ದುಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಟೀಕಿಸಿದ್ದಾರೆ.

ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು ಗಡಿ ವಿಚಾರ ಕುರಿತ ಹೇಳಿಕೆಗಳಿಗೆ ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು
ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರು ಗಡಿ ವಿಚಾರ ಕುರಿತ ಹೇಳಿಕೆಗಳಿಗೆ ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದರು

ಬೆಳಗಾವಿ: ಗಡಿ ವಿಚಾರ ಸಂಬಂಧ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ಮಹಾರಾಷ್ಟ್ರದ ವಿರೋಧ ಪಕ್ಷದ ಶಾಸಕರು ಶಾಸನ ಸಭೆಯಲ್ಲಿ ಮತ್ತು ಹೊರಗಡೆ ಬಹಳ ಹದ್ದುಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಅಲ್ಲಿನ ವಿರೋಧ ಪಕ್ಷಗಳು ಇದೇ ವಿಚಾರದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಹಿಂದೆಯೂ ಎನ್ ಸಿಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೋಗಿ ವಿಫಲರಾಗಿದ್ದಾರೆ. ಈಗಲೂ ವಿಫಲರಾಗಿದ್ದಾರೆ. ಎರಡೂ ರಾಜ್ಯಗಳ ಜನ ಶಾಂತಿ ಸಾಮರಸ್ಯ ಕಾಪಾಡಿಕೊಂಡು, ವ್ಯಾಪಾರ ವ್ಯವಹಾರ, ಓಡಾಟ ಮಾಡುತ್ತಿರುವಾಗ ಇವರು ಭಾರಿ ಸಂಖ್ಯೆಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಹೊರಟಿದ್ದಾರೆ. ಜನರ ಬೆಂಬಲವಿಲ್ಲದಿದ್ದರೂ, ರಾಜಕೀಯ ಪಕ್ಷಗಳ ಧ್ವಜ ಹಿಡಿದುಕೊಂಡು ಬಂದಿರುವುದನ್ನು ನೋಡಿದರೆ, ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಮಾತ್ರ ಬಂದಿದ್ದರು. ಇದು ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದ ಕಾಂಗ್ರೆಸ್ ನಾಯಕರು ಮಹಾರಾಷ್ಟ್ರದಲ್ಲಿನ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದ ಅವರು, ನಾವು ಕೂಡ ನಮ್ಮ ಪಕ್ಷದವರಿಗೆ ಮಾತನಾಡಿದ್ದೇವೆ. ಇದು ಬೀದಿಯಲ್ಲಿ ಇತ್ಯರ್ಥವಾಗುವ ವಿಚಾರವಲ್ಲ. ನಮ್ಮ ಕೇಂದ್ರ ಗೃಹ ಸಚಿವರೂ ಇದನ್ನೇ ಹೇಳಿದ್ದಾರೆ ಎಂದರು.

ಮಹಾರಾಷ್ಟ್ರದವರೇ ಇಂದು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಅವರಿಗೆ ತಮ್ಮ ದಾವೆ ದುರ್ಬಲವಾಗಿದೆ ಎಂದು ಅರಿವಾಗಿದೆ. ಅದಕ್ಕಾಗಿಯೇ ಇಂತಹ ಪರಿಸ್ಥಿತಿ ಸೃಷ್ಟಿಸಿ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದು, ಅದು ಯಶಸ್ವಿಯಾಗುವುದಿಲ್ಲ. ಇದು ಮಹಾರಾಷ್ಟ್ರದ ವಿರೋಧ ಪಕ್ಷದ ಅಪ್ರಬುದ್ಧತೆಯ ಪ್ರದರ್ಶನ. ಮತ್ತು ಅವರು ಚೈನಾ ರೀತಿ ಆಕ್ರಮಣ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅವರಿಗೆ ಈ ಕಡೆ ಭಾರತ ದೇಶ ಇದೆ ಎಂದು ಗೊತ್ತಿಲ್ಲ. ಚೀನಾ ಆಕ್ರಮಣವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದಂತೆ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಕನ್ನಡಿಗರಿಗಿದೆ. ನಾವು ಒಂದೇ ದೇಶದಲ್ಲಿರುವವರು. ಅದಾಗ್ಯೂ ಅವರು ಬಳಸಿದ ಪದಪ್ರಯೋಗಕ್ಕೆ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಲಾಪದಲ್ಲಿ ಇಂದು ಸಿಎಂ ಬೊಮ್ಮಾಯಿ ಸುದೀರ್ಘ ಉತ್ತರ

ಗಡಿ ವಿವಾದ ಸಂಬಂಧ ಇಂದು ಸಿಎಂ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭ ಕಲಾದಲ್ಲಿ ಸುದೀರ್ಘ ಉತ್ತರವನ್ನು ನೀಡಲಿದ್ದಾರೆ.

ಚೀನಾದಂತೆ ಕರ್ನಾಟಕಕ್ಕೆ ಎಂಟ್ರಿ ಕೊಡ್ತೀವಿ-ರಾವತ್

ಗಡಿ ವಿಚಾರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉದ್ವಿಗ್ನತೆ ಉಂಟಾಗಿರುವ ಸಂದರ್ಭದಲ್ಲೇ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವತ್ ಅವರು ಬುಧವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೀನಾ ಸೈನಿಕರು ಭಾರತದ ಗಡಿ ಪ್ರವೇಶಿಸಿದಂತೆಯೇ ನಾವು ಕರ್ನಾಟಕವನ್ನು ಪ್ರವೇಶಿಸುತ್ತೇವೆ ಎಂದು ಹೇಳಿಕೆ ನೀಡಿ, ಉದ್ವಿಗ್ನತೆಗೆ ಇನ್ನಷ್ಟು ತುಪ್ಪ ಸುರಿದಿದ್ದಾರೆ.

ಈ ವಿಚಾರದಲ್ಲಿ ತನಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಹೇಳುವ ಮೂಲಕ ತಮ್ಮ ಮೊಂಡುತನವನ್ನು ಪ್ರದರ್ಶಿಸಿದ್ದಾರೆ.

“ಚೀನಾ ಪ್ರವೇಶಿಸಿದಂತೆ ನಾವೂ (ಕರ್ನಾಟಕ) ಪ್ರವೇಶಿಸುತ್ತೇವೆ. ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಆದರೂ, ಅದನ್ನು ಚರ್ಚೆಯ ಮೂಲಕ ಬಗೆಹರಿಸಲು ಬಯಸುತ್ತೇವೆ. ಆದರೆ ಕರ್ನಾಟಕದ ಸಿಎಂ ಈ ವಿಚಾರವಾಗಿ, ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ ಮತ್ತು ಗಡಿ ವಿಚಾರವಾಗಿ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿ ಬೆಂಕಿ ಹಚ್ಚುತ್ತಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಸಂಜಯ್ ರಾವತ್ ಅವರ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ ತಿರುಗೇಟು ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ