ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ
Nov 29, 2024 09:07 AM IST
ಮಹಾರಾಷ್ಟ್ರ ಸಿಎಂ ಯಾರು?: ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ (ಚಿತ್ರದಲ್ಲಿರುವವರು) ಡಿಸಿಎಂ ಆಗಿರಲ್ಲ ಎಂದು ಶಿವಸೇನಾ ನಾಯಕರೊಬ್ಬರು ವಿದ್ಯಮಾನದ ಒಳನೋಟ ಕೊಟ್ಟರು.
Maharashtra CM: ಮಹಾರಾಷ್ಟ್ರ ಸಿಎಂ ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದ ಕಾರಣ, ಮಹಾಯುತಿ ನಾಯಕರ ನಡುವೆ ಮಾತುಕತೆ ಏನಾಗುತ್ತಿದೆ ಎಂಬ ಕುತೂಹಲ ಸಹಜ. ಈ ನಡುವೆ, ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ ಎಂದು ಶಿವಸೇನಾ ನಾಯಕರೊಬ್ಬರು ಒಳನೋಟ ಕೊಟ್ಟಿರುವುದು ಕುತೂಹಲವನ್ನು ಹೆಚ್ಚಿಸಿದೆ.
Maharashtra CM: ಮಹಾರಾಷ್ಟ್ರದಲ್ಲಿ ಮಹಾಯಿತಿ ಸರ್ಕಾರ ರಚನೆಯ ಆರಂಭಿಕ ಕಸರತ್ತು ಇನ್ನೂ ಮುಂದುವರಿದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಸದ್ಯ ದೇವೇಂದ್ರ ಫಡ್ನವೀಸ್ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ನಂತರದ ಸ್ಥಾನದಲ್ಲಿ ಏಕನಾಥ್ ಶಿಂಧೆ ಹೆಸರು ಚಾಲ್ತಿಯಲ್ಲಿದೆ. ಹೀಗಿರುವಾಗ, ಅಕಸ್ಮಾತ್ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರೆ ಆಗ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಸಂಪುಟದಲ್ಲಿ ಇರಲ್ಲ ಎಂಬ ಮಾತು ವ್ಯಾಪಕವಾಗಿತ್ತು. ಈ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬುದನ್ನು ಬಿಜೆಪಿ ನಿರ್ಣಯಿಸಲಿ ಎಂದು ಹಂಗಾಮಿ ಸಿಎಂ ಏಕನಾಥ್ ಶಿಂಧೆ ಬುಧವಾರವೇ ಹೇಳಿದ್ದರು. ಇದಲ್ಲದೆ, ನಿನ್ನೆ (ನವೆಂಬರ್ 28) ದೆಹಲಿಯಲ್ಲಿ ಅಮಿತ್ ಷಾ ಜೊತೆಗೆ 2 ಗಂಟೆಗೂ ಹೆಚ್ಚು ಕಾಲ ಮಹಾಯಿತಿ ನಾಯಕರು ಮಾತುಕತೆ ನಡೆಸಿದ್ದರು. ಇದರ ನಡುವೆ, ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ ಎಂಬುದನ್ನು ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ ಖಚಿತಪಡಿಸಿದ್ದು, ವಿದ್ಯಮಾನದ ಒಳನೋಟ ನೀಡಿದ್ದಾರೆ.
ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ
'ಏಕನಾಥ್ ಶಿಂಧೆ ಬಹುಶಃ ಉಪ ಮುಖ್ಯಮಂತ್ರಿಯಾಗುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ನಾಯಕನಿಗೆ ಇಂತಹ ಜವಾಬ್ದಾರಿ ಹಿಡಿಸುವುದಿಲ್ಲ. ಅಷ್ಟೇ ಅಲ್ಲ, ಶಿವಸೇನೆಯಿಂದ ಮತ್ತೊಬ್ಬ ನಾಯಕರನ್ನು ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಶಿವಸೇನಾ ನಾಯಕ ಸಂಜಯ್ ಶಿರ್ಸಾತ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಆದರೆ, ಏಕನಾಥ್ ಶಿಂಧೆ ಅವರ ಶಿವಸೇನೆ ಯಾರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಪಕ್ಷದ ಉನ್ನತ ನಾಯಕ ಏಕನಾಥ್ ಶಿಂಧೆ. ಹೀಗಿರುವಾಗ ಯಾರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನಾದ 57 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಏಕನಾಥ್ ಶಿಂಧೆ ಬುಧವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನಾನು ದೊಡ್ಡ ಗೌರವದಿಂದ ಕಾಣುತ್ತೇನೆ. ನನಗೆ ಎರಡೂವರೆ ವರ್ಷಗಳ ಅವಧಿಯನ್ನು ಸಾರ್ವಜನಿಕರು ಕೊಟ್ಟಿದ್ದರು. ನಾವು ಸಾರ್ವಜನಿಕರ ಹಿತಾಸಕ್ತಿಗಾಗಿ ಹೋರಾಡುವ ಜನರು. ಸಾರ್ವಜನಿಕರ ಹಿತದೃಷ್ಟಿಯಿಂದ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ. ನಾನು ಹಿರಿಯ ಅಣ್ಣನಂತೆ ಇರಲು ಬಯಸುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಈ ವೇಳೆ ಸರ್ಕಾರ ರಚನೆಗೆ ನನ್ನಿಂದ ಏನಾದರೂ ಅಡ್ಡಿ ಉಂಟಾದರೆ ಹಿಂದೆ ಸರಿಯುತ್ತೇನೆ. ನನಗೆ ಕೋಪವೂ ಇಲ್ಲ, ದುಃಖವೂ ಇಲ್ಲ. ಮುಖ್ಯಮಂತ್ರಿ ಯಾರು ಎಂಬ ನಿರ್ಧಾರವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಬಿಡುತ್ತೇವೆ. ಅವರು ಯಾರನ್ನು ಸಿಎಂ ಮಾಡಿದರೂ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು; ನಿರ್ಧಾರದ ಬಳಿಕ ಎಲ್ಲವೂ ಸಲೀಸು
ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬುದು ನಿರ್ಧಾರವಾದರೆ, ನಂತರದಲ್ಲಿ ಉಳಿದ ಕೆಲಸಗಳು ಸಲೀಸಾಗಿ ನಡೆಯಲಿವೆ. ಮುಖ್ಯಮಂತ್ರಿಯಾದವರು ಸಚಿವ ಸಂಪುಟಕ್ಕೆ ಯಾರು ಬೇಕು ಎಂಬುದನ್ನು ನಿರ್ಧರಿಸಿ ಅಂತಿಮಗೊಳಿಸುತ್ತಾರೆ. ಮಹಾಯುತಿಯಲ್ಲಿ ಮಿತ್ರ ಪಕ್ಷಗಳ ನಡುವೆ ಭಿನ್ನಮತ ಇಲ್ಲ. ಎಲ್ಲ ನಿರ್ಧಾರವನ್ನೂ ಒಮ್ಮತದಲ್ಲೇ ತೆಗೆದುಕೊಳ್ಳುತ್ತೇವೆ. ನಮ್ಮ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಸಂದೇಹವಿದ್ದರೆ ಏಕನಾಥ್ ಶಿಂಧೆ, ಅಜಿತ್ ಪವಾರ್ ಅವರನ್ನೂ ನೀವು ಕೇಳಬಹುದು ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ನಾಗಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಹೇಳಿದ್ದರು.
ದೆಹಲಿಯಲ್ಲಿ ಅಮಿತ್ ಷಾ ಅವರೊಂದಿಗೆ ಮಹಾಯುತಿ ನಾಯಕರು ನಿನ್ನೆ (ನವೆಂಬರ್ 28) ಮಾತುಕತೆ ನಡೆಸಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ನಡೆದೀ ಸಭೆಯು ವಿಶೇಷವಾಗಿ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆಯೇ ಇತ್ತು. ಹೀಗಾಗಿ, ಶೀಘ್ರವೇ ಮಹಾರಾಷ್ಟ್ರ ಸಿಎಂ ಯಾರು ಎಂಬುದು ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.