logo
ಕನ್ನಡ ಸುದ್ದಿ  /  ಕರ್ನಾಟಕ  /  Bmtc News: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಮೂರು ಸಾವಿರ ರೂ. ದಂಡ

BMTC News: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಮೂರು ಸಾವಿರ ರೂ. ದಂಡ

HT Kannada Desk HT Kannada

Feb 24, 2023 12:51 PM IST

google News

BMTC News: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಮೂರು ಸಾವಿರ ರೂ. ದಂಡ

    • ತನ್ನ ಹಣ ಕಳೆದುಕೊಂಡು ಅಪಹಾಸ್ಯಕ್ಕೆ ಈಡಾಗಿದ್ದ ರಮೇಶ್‌ ನಾಯ್ಕ್‌ ಅವರು ಬಸ್‌ ಸಂಖ್ಯೆ ಮತ್ತು ಟಿಕೆಟ್‌ ಸಮೇತ ಕಂಡೆಕ್ಟರ್‌ ವಿರುದ್ಧ ದೂರು ನೀಡಲು ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೋದರೂ ಅಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದರು.
BMTC News: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಮೂರು ಸಾವಿರ ರೂ. ದಂಡ
BMTC News: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಮೂರು ಸಾವಿರ ರೂ. ದಂಡ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಬಸ್‌ಗಳಲ್ಲಿ ಕಂಡೆಕ್ಟರ್‌ಗಳು ಚಿಲ್ಲರೆ ತೊಂದರೆ ಅನುಭವಿಸುತ್ತಾರೆ. ಕೆಲವೊಮ್ಮೆ ಕಂಡೆಕ್ಟರ್‌ ಕೇಳಿದ್ದಷ್ಟು ಚಿಲ್ಲರೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಾರೆ. ಕೆಲವೊಮ್ಮೆ ಕಂಡೆಕ್ಟರ್‌ಗಳು ಚಿಲ್ಲರೆ ಇದ್ದರೂ ಕೊಡದೆ ಟಿಕೆಟ್‌ ಹಿಂದೆ ಬರೆಯುತ್ತಾರೆ. ಕೆಲವು ಪ್ರಯಾಣಿಕರು ಈ ರೀತಿ ಹಿಂದೆ ಬರೆದ ಹಣವನ್ನು ಕೇಳದೆ ಇರಬಹುದು, ಈ ಮೂಲಕ ಹನಿಹನಿಗೂಡಿ ಹಳ್ಳ ಎಂಬಂತೆ ಕೊಂಚ ಹಣ ಮಾಡಿಕೊಳ್ಳುವವರೂ ಇದ್ದಾರೆ.

ಕೆಲವೊಮ್ಮೆ ಟಿಕೆಟ್‌ ಹಿಂದೆ ಬರೆದ ಒಂದು ರೂ., ಎರಡು ರೂ., ಕೇಳಲು ಮುಜುಗರವಾಗಬಹುದು. ಟಿಕೆಟ್‌ ಹಿಂದೆ ಬರೆಯದೆ ಇದ್ದರಂತೂ ಕೇಳಲು ಕೆಲವರಿಗೆ ಒಂಥರ ಆಗುವುದುಂಟು. ಆದರೆ, ಚಿಲ್ಲರೆ ಪಡೆಯುವುದು ನಮ್ಮ ಹಕ್ಕು ಎಂದು ತಿಳಿದವರು ಯಾವುದೇ ಮುಜುಗರ ಇಲ್ಲದೆ ಚಿಲ್ಲರೆ ಕೇಳಿ ಪಡೆಯುತ್ತಾರೆ. ಈ ರೀತಿ ಚಿಲ್ಲರೆ ಕೇಳಿದಾಗ ಕೆಲವು ಕಂಡೆಕ್ಟರ್‌ಗಳು ತಾತ್ಸಾರದಿಂದ ನೋಡುವುದುಂಟು.

ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಮೂರು ವರ್ಷದ ಹಿಂದೆ ನಡೆದಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಲೇಡಿ ಕಂಡೆಕ್ಟರ್‌ ಪ್ರಯಾಣಿಕರೊಬ್ಬರಿಗೆ ಒಂದು ರೂಪಾಯಿ ಬಾಕಿ ನೀಡಿರಲಿಲ್ಲ. ಬಾಕಿ ಕೇಳಿದ್ದಕ್ಕೆ ಅಪಹಾಸ್ಯ ಮಾಡಿದ್ದರು. ಇದರಿಂದ ಬೇಸರಗೊಂಡ ಆ ವ್ಯಕ್ತಿಯು ಗ್ರಾಹಕ ನ್ಯಾಯಾಲಯಕ್ಕೆ ಹೋಗಿ ಪರಿಹಾರ ಪಡೆದಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಗ್ರಾಹಕ ನ್ಯಾಯಾಲಯವು ಪ್ರಯಾಣಿಕರ ಪರ ತೀರ್ಪು ನೀಡಿದ್ದು, ಮೂರು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.

ಪ್ರತಿಯೊಬ್ಬ ಗ್ರಾಹಕನು ತಾನು ದುಡಿದ ಬಾಕಿ ಹಣವನ್ನು ಪಡೆಯಲು ಅರ್ಹನಾಗುತ್ತಾನೆ ಎಂದು ಗ್ರಾಹಕ ಕಾನೂನು ಹೇಳುತ್ತದೆ. ಅದು ಒಂದು ರೂ. ಆಗಿರಲಿ, ಒಂದು ಸಾವಿರ ಆಗಿರಲಿ, ಬಾಕಿ ಮೊತ್ತವನ್ನು ಪಡೆಯುವ ಅರ್ಹತೆ ಹೊಂದಿರುತ್ತಾನೆ.

ಏನಿದು ಘಟನೆ?

ಸೆಪ್ಟೆಂಬರ್ 11, 2019ರಂದು ಬೆಂಗಳೂರಿನ ಶಾಂತಿ ನಗರ ಬಸ್‌ ನಿಲ್ದಾಣದಿಂದ ಮೆಜೆಸ್ಟಿಕ್‌ ಬಸ್‌ನಲ್ಲಿ (ಬಸ್‌ ನಂಬರ್‌ 360 ಬಿ) ತುಮಕೂರಿನ ರಮೇಶ್‌ ಎಂಬ ಪ್ರಯಾಣಿಕರು ಪ್ರಯಾಣಿಸಿದ್ದರು. ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಪ್ರಯಾಣಕ್ಕೆ 29 ರೂಪಾಯಿ ಟಿಕೆಟ್‌ ಪಡೆದಿದ್ದರು. ಅವರು 30 ರೂಪಾಯಿ ನೀಡಿದ್ದರು. ಸಹಜವಾಗಿ ಒಂದು ರೂಪಾಯಿ ಬಾಕಿ ಮೊತ್ತವನ್ನು ನೀಡುವಂತೆ ಮಹಿಳಾ ಕಂಡೆಕ್ಟರ್‌ ಬಳಿ ಕೇಳಿದ್ದಾರೆ.

ಒಂದು ರೂಪಾಯಿ ಬಾಕಿ ಕೇಳಿದ್ದಕ್ಕೆ ಮಹಿಳಾ ಕಂಡೆಕ್ಟರ್‌ ಈ ಪ್ರಯಾಣಿಕನನ್ನು ದುರುಗಟ್ಟಿ ನೋಡಿದ್ದರಂತೆ. ಸಹ ಪ್ರಯಾಣಿಕರೂ ನಕ್ಕು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ. ಕೊನೆಗೂ ಬಸ್‌ ಇಳಿಯುವಾಗಲೂ ಇವರಿಗೆ ಬಾಕಿ ಮೊತ್ತ ದೊರಕಲಿಲ್ಲ ಎನ್ನಲಾಗಿದೆ.

ತನ್ನ ಹಣ ಕಳೆದುಕೊಂಡು ಅಪಹಾಸ್ಯಕ್ಕೆ ಈಡಾಗಿದ್ದ ರಮೇಶ್‌ ಅವರು ಬಸ್‌ ಸಂಖ್ಯೆ ಮತ್ತು ಟಿಕೆಟ್‌ ಸಮೇತ ಕಂಡೆಕ್ಟರ್‌ ವಿರುದ್ಧ ದೂರು ನೀಡಲು ಬಿಎಂಟಿಸಿ ಹಿರಿಯ ಅಧಿಕಾರಿಗಳ ಬಳಿಗೆ ಹೋಗಿದ್ದರು. ಅಲ್ಲಿಯೂ ಅವರನ್ನು ಅಪಹಾಸ್ಯ ಮಾಡಲಾಗಿತ್ತು. ಒಂದು ರೂಪಾಯಿಗೆ ಕಂಪ್ಲೆಟ್‌ ನೀಡಲು ಬಂದೆಯಾ ಎನ್ನಲಾಗಿತ್ತು.

ಒಂದು ರೂಪಾಯಿಗಿಂತ ಕಂಡೆಕ್ಟರ್‌ ಮತ್ತು ಹಿರಿಯ ಅಧಿಕಾರಿಗಳು ನಡೆದುಕೊಂಡ ರೀತಿ ರಮೇಶ್‌ ಗೆ ಇಷ್ಟವಾಗುವುದಿಲ್ಲ. ನನ್ನ ಹಣ ಪಡೆದೇ ತೀರುವೆ ಎಂದು ಸವಾಲು ಹಾಕಿ ಅವರು ಗ್ರಾಹಕ ನ್ಯಾಯಾಲಯಕ್ಕೆ ಬರುತ್ತಾರೆ.

ಬಿಎಂಟಿಸಿ ಸಂಸ್ಥೆ, ಬಿಎಂಟಿಸಿ ಎಂಡಿ ಹಾಗೂ ಮಹಿಳಾ ಕಂಡಕ್ಟರ್‌ ವಿರುದ್ಧ ಇವರು ಬೆಂಗಳೂರಿನ ಶಾಂತಿನಗರದಲ್ಲಿರುವ ಬೆಂಗಳೂರು IVನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡುತ್ತಾರೆ. ನನಗೆ ಆದ ತೊಂದರೆಗೆ ಹದಿನೈದು ಸಾವಿರ ರೂ. ಪರಿಹಾರ ನೀಡುವಂತೆ ಮನವಿ ಮಾಡುತ್ತಾರೆ.

ಬಿಎಂಟಿಸಿ ಪರವಾಗಿ ಹಾಜರಾದ ವಕೀಲರು ಕೂಡ "ಈ ದೂರು ಕ್ಷುಲಕವಾಗಿದೆʼʼ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಗ್ರಾಹಕ ನ್ಯಾಯಾಲಯವು ರಮೇಶ್‌ ಅವರ ಪರವಾಗಿ ತೀರ್ಪು ನೀಡಿದೆ. ಒಂದು ರೂಪಾಯಿ ಪಡೆಯುವುದು ಕೂಡ ಗ್ರಾಹಕರ ಹಕ್ಕು. ಜತೆಗೆ ಬಸ್‌ ಕಂಡೆಕ್ಟರ್‌ ಮತ್ತು ಇತರರ ಅಸಡ್ಡೆ, ನಿರ್ಲಕ್ಷ್ಯ ಸ್ವೀಕಾರ್ಹವಲ್ಲ ಎಂದು ಅಭಿಪ್ರಾಯಪಟ್ಟು ಗ್ರಾಹಕ ಸಂರಕ್ಷಣಾ ಕಾಯ್ದೆ -1986ರ ಮೂಲಕ ನ್ಯಾಯ ನೀಡಿದೆ.

ಮುಂದಿನ 45 ದಿನದೊಳಗೆ ದೂರುದಾರರಿಗೆ 1 ರೂಪಾಯಿ ಮರುಪಾವತಿ ಮಾಡಬೇಕು. ಅವರಿಗೆ ಮಾಡಿರುವ ನಿಂದನೆ/ಅಪಹಾಸ್ಯಕ್ಕೆ 2 ಸಾವಿರ ರೂ. ಪರಿಹಾರ ನೀಡಬೇಕು. ಅವರಿಗೆ ಉಂಟಾದ ಕೋರ್ಟ್‌ ವೆಚ್ಚಕ್ಕಾಗಿ 1000 ರೂ. ಪಾವತಿಸಬೇಕು. ನಿಗದಿತ ದಿನದೊಳಗೆ ಪಾವತಿಸದೆ ಇದ್ದರೆ ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ