Mandya News: ಮಂಡ್ಯ ಜಿಲ್ಲೆಯಲ್ಲಿ ಮಳೆಗಾಗಿ ಬಾಲಕರಿಗೆ ಮದುವೆ, ಬಾಲೆಯಾದ ಬಾಲಕ: ಹೀಗೋದು ವಿಶಿಷ್ಟ ಆಚರಣೆ
Jun 24, 2023 10:11 AM IST
ಕೆ.ಆರ್.ಪೇಟೆ ತಾಲೂಕಿನ ಹುಳ್ಳಿಗಂಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಇಬ್ಬರು ಬಾಲಕರಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
- ಜೂನ್ ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯುತ್ತಿಲ್ಲ. ಇದರಿಂದ ಬರದ ಮುನ್ಸೂಚನೆ ಎದುರಾಗಿರುವುದರಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಆಚರಣೆಗಳಲ್ಲಿ ತೊಡಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈಗ ಬಾಲಕರ ಮದುವೆ ನಡೆದಿದೆ.
ಮಂಡ್ಯ: ಎಲ್ಲೆಲ್ಲೂ ಈಗ ಮಳೆಗಾಗಿ ಬೇಡಿಕೆ. ಮುಗಿಲಿನತ್ತ ನೋಡುವ ಸನ್ನಿವೇಶ. ಮಳೆ ಬಾರಲೆಂದು ಪ್ರಾರ್ಥನೆ ಸಲ್ಲಿಸುವ ವಿಧಾನ ನಮ್ಮಲ್ಲಿ ಹಲವು. ಕಪ್ಪೆಗೆ ಮದುವೆ ಮಾಡಿಸುವುದು ನೋಡಿದ್ದೇವೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಬಾಲೆ ವೇಷ ಧರಿಸಿದ ಬಾಲಕನೊಂದಿಗೆ ಮತ್ತೊಬ್ಬ ಬಾಲಕನಿಗೆ ವಿವಾಹ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಹುಳ್ಳಿಗಂಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಇಬ್ಬರು ಬಾಲಕರಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಜೂನ್ ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮುಂಗಾರು ಮಳೆ ಸುರಿಯುತ್ತಿಲ್ಲ. ಇದರಿಂದ ಬರದ ಮುನ್ಸೂಚನೆ ಎದುರಾಗಿರುವುದರಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಆಚರಣೆಗಳಲ್ಲಿ ತೊಡಗಿದ್ದಾರೆ.
ಅದರಂತೆ ಕೆ.ಆರ್.ಪೇಟೆ ತಾಲೂಕಿನ ಹುಳ್ಳಿಗಂಗನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಮದುವೆಯ ರೀತಿಯಲ್ಲಿಯೇ ಇಬ್ಬರು ಗಂಡು ಮಕ್ಕಳ ಪೈಕಿ ಒಬ್ಬ ಗಂಡು ಮಗುವಿಗೆ ವಧುವಿನ ವೇಷ ಹಾಕಿಸಿ ಮದುವೆ ಮಾಡಿದ್ದಾರೆ.
ಗುರುವಾರ ರಾತ್ರಿ ಸಂಪ್ರದಾಯದಂತೆ ಡೋಲು, ವಾದ್ಯ ಸಮೇತ ವಧು-ವರರನ್ನು ಕರೆ ತರುವುದು ಸೇರಿದಂತೆ ಮದುವೆಯ ಕಾರ್ಯಗಳನ್ನು ಪೂರೈಸಿದ್ದಾರೆ. ನಂತರ ವಧುವಿನ ವೇಷ ತೊಟ್ಟಿದ್ದ ಬಾಲಕನಿಗೆ ಮತ್ತೊಬ್ಬ ಬಾಲಕನಿಂದ ತಾಳಿ ಕಟ್ಟಿಸುವ ಮೂಲಕ ಅಕ್ಷತೆ ಹಾಕಿ ಹಾಲಿನಿಂದ ಧಾರೆ ಎರೆದು ಆಶೀರ್ವಾದ ಮಾಡಿ ಮಳೆರಾಯ ಕೃಪೆ ತೋರು ಎಂದು ಪ್ರಾರ್ಥನೆ ಮಾಡಿದ್ದಾರೆ.
ನಂತರ ಗ್ರಾಮಸ್ಥರಿಗೆ ಮದುವೆಯ ಊಟ ಹಾಕಿದ್ದಾರೆ. ಅಲ್ಲದೆ, ಪಟಾಕಿ ಸಿಡಿಸಿ ಮದುವೆ ಸಂಭ್ರಮವನ್ನು ಆಚರಿಸಿದ್ದಾರೆ. ನಂತರ ವರುಣ ದೇವನಿಗೂ ಪೂಜೆ ಸಲ್ಲಿಸಿ ಮಳೆಗಾಗಿ ಮೊರೆ ಇಟ್ಟಿದ್ದಾರೆ. ಇದೊಂದು ವಿಚಿತ್ರ ಮದುವೆಯಂತೆ ಕಂಡು ಬಂದರೂ ಮಳೆಗಾಗಿ ಗ್ರಾಮಸ್ಥರು ಮಾಡಿರುವುದು ವಿಶೇಷ ಆಚರಣೆಯಾಗಿದೆ.
ನಮ್ಮಲ್ಲಿ ಮೊದಲಿನಿಂದಲೂ ಈ ಸಂಪ್ರದಾಯವಿದೆ. ನಾವು ಮುಂದುವರೆಸುಕೊಂಡು ಹೋಗುತ್ತಿದ್ದೇವೆ, ಕೆಲ ವರ್ಷದ ಹಿಂದೆ ಹೀಗೆಯೇ ಮಳೆಯಾಗದೇ ಇದ್ದಾಗ ಬಾಲಕರ ಮದುವೆ ಮಾಡಿಸಿದ್ದೆವು. ನಂತರ ಮಳೆಯಾಗಿತ್ತು, ಈ ಬಾರಿಯೂ ಮಳೆ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
(ವರದಿ: ಧಾತ್ರಿ ಭಾರದ್ವಾಜ್)
ವಿಭಾಗ