logo
ಕನ್ನಡ ಸುದ್ದಿ  /  ಕರ್ನಾಟಕ  /  Krs Dam: ಕೊಡಗು ಭಾರೀ ಮಳೆ, 100 ಅಡಿಗೆ ಸಮೀಪಿಸಿದ ಕೆಆರ್‌ಎಸ್, ಜಲಾಶಯದ ಮಟ್ಟ ಎಷ್ಟಿದೆ

KRS Dam: ಕೊಡಗು ಭಾರೀ ಮಳೆ, 100 ಅಡಿಗೆ ಸಮೀಪಿಸಿದ ಕೆಆರ್‌ಎಸ್, ಜಲಾಶಯದ ಮಟ್ಟ ಎಷ್ಟಿದೆ

Umesha Bhatta P H HT Kannada

Jun 30, 2024 09:35 AM IST

google News

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.

    • Kodagu Rains ಕೊಡಗಿನಲ್ಲಿ( Kodagu Rains) ಕಳೆದ ವಾರ ಸುರಿದ ಉತ್ತಮ ಮಳೆಯಿಂದ ಕೆಆರ್‌ಎಸ್‌ ಹತ್ತು ಅಡಿಗೂ ಹೆಚ್ಚಿನ ನೀರು ಈಗಾಗಲೇ ಬಂದಿದ್ದು, ನೂರು ಅಡಿ ತಲುಪುವ ಹಂತಕ್ಕೂ ಹೋಗುತ್ತಿದೆ. 
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.

ಮಂಡ್ಯ: ಕಳೆದ ಬಾರಿ ಮಳೆ ಕೊರತೆಯಿಂದ ತುಂಬದ ಕೃಷ್ಣರಾಜ ಸಾಗರ ಜಲಾಶಯ ಈ ಬಾರಿ ಕೊಡಗಿನಲ್ಲಿ ನಿರಂತರವಾಗಿ ಒಂದು ವಾರ ಕಾಲ ಸುರಿದ ಭಾರೀ ಮಳೆಗೆ ಉತ್ತಮ ಒಳ ಹರಿವು ಕಂಡಿದೆ. ಈಗಾಗಲೇ 94 ಅಡಿ ದಾಟಿರುವ ಕೆಆರ್‌ ಎಸ್‌ ನೀರಿನ ಮಟ್ಟ ನಿಧಾನವಾಗಿ ಏರುತ್ತಲೇ ಇದೆ. ಕೊಡಗಿನಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದರೂ ಒಳ ಹರಿವಿನ ಪ್ರಮಾಣ ಚೆನ್ನಾಗಿಯೇ ಇದೆ. ಇದಲ್ಲದೇ ಹಾಸನದ ಹೇಮಾವತಿ ಹಾಗೂ ಕೊಡಗಿನ ಹಾರಂಗಿ ಜಲಾಶಯಕ್ಕೂ ಒಳಹರಿವು ಚೆನ್ನಾಗಿದ್ದು, ಇದರಿಂದ ಈ ವಾರದಲ್ಲಿಯೇ ಕೆಆರ್‌ಎಸ್‌ ಜಲಾಶಯ ನೂರು ಅಡಿ ತಲುಪುವ ಲಕ್ಷಣಗಳು ಕಾಣುತ್ತಿವೆ. ಕೊಡಗಿನಲ್ಲಿ ಜುಲೈ ತಿಂಗಳನಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಳ್ಳುವ ನಿರೀಕ್ಷೆಗಳಿರುವುದರಿಂದ ಕೃಷ್ಣರಾಜಸಾಗರ ಜಲಾಶಯವೂ ಬೇಗನೇ ತುಂಬಬಹುದು ಎಂದು ಕಾವೇರಿ ಕೊಳ್ಳದ ಜನ, ಬೆಂಗಳೂರು ಭಾಗದ ಜನರ ಆಶಯವೂ ಆಗಿದೆ.

ಕೃಷ್ಣರಾಜಸಾಗರ ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ ಹೊತ್ತಿಗೆ 12867 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಕೊಡಗಿನಲ್ಲಿ ಮಳೆಯಾದರೆ ಕೆಆರ್‌ಎಸ್‌ಗೆ ತಲುಪಲು ಕನಿಷ್ಠ ಎರಡು ದಿನವಾದರೂ ಬೇಕು. ಈ ಕಾರಣದಿಂದ ಕೊಡಗಿನಲ್ಲಿ ಕಳೆದ ವಾರ ಸುರಿದ ಮಳೆಯ ಪ್ರಮಾಣದ ನೀರು ಇನ್ನೂ ಜಲಾಶಯಕ್ಕೆ ಹರಿಯುತ್ತಿದೆ. ಈಗ ಮಳೆ ಪ್ರಭಾವ ಕೊಡಗಿನಲ್ಲಿ ತಗ್ಗಿದರೂ ಅಲ್ಲಲ್ಲಿ ಮಳೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ಇನ್ನೂ ನೀರು ಬರಬಹುದು. ಮತ್ತೆ ಮಳೆಯಾದರೆ ಖಳ ಹರಿವು ಹೆಚ್ಚಬಹುದು. ಜಲಾಶಯದ ನೀರಿನ ಮಟ್ಟವು ಭಾನುವಾರದಂದು 94.40 ಅಡಿಯಷ್ಟು ತಲುಪಿದೆ. ಇನ್ನು ಐದು ಅಡಿಯಾದರೆ ನೂರು ಅಡಿಗೆ ತಲುಪಲಿದೆ.ಜಲಾಶಯದ ಗರಿಷ್ಠ ಮಟ್ಟವು 124.80 ಅಡಿಯಷ್ಟಿದೆ.

ಜಲಾಶಯದಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಸದ್ಯ ಜಲಾಶಯದಲ್ಲಿ 18.733 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂಗಾರು ಆರಂಭವಾದಾಗಿನಿಂದ ಸುಮಾರು ಹತ್ತು ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ.

ಜಲಾಶಯದ ಒಳಹರಿವು ಹೆಚ್ಚಿದ್ದರೂ ಇನ್ನೂ ತುಂಬಲು ಸಾಕಷ್ಟು ನೀರು ಬೇಕು. ಸದ್ಯ ಹೊರ ಹರಿವನ್ನು ಕುಡಿಯುವ ನೀರಿನ ಉದ್ದೇಶಕ್ಕೆಂದೇ ಬರೀ 507 ಕ್ಯುಸೆಕ್‌ ಮಾತ್ರ ಹೊರ ಹರಿಸಲಾಗುತ್ತಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಹದಿನೈದು ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಇನ್ನೂ ಮಳೆಯಾಗಬೇಕು. ಹಿಂದಿನ ವರ್ಷ ಹತ್ತು ಅಡಿ ಕೊರತೆ ಜಲಾಶಯದಲ್ಲಿತ್ತು. ಪೂರ್ಣ ತುಂಬಲೇ ಇಲ್ಲ. ಈ ಬಾರಿ ಮಳೆ ಉತ್ತಮ ಇರುವ ಮುನ್ಸೂಚನೆಯಿದೆ. ಮಳೆಯಾದರೆ ಜಲಾಶಯ ಆಗಸ್ಟ್‌ನಲ್ಲಿ ತುಂಬಬಹುದು ಎನ್ನುವ ನಿರೀಕ್ಷೆಯಂತೂ ಇದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಕೇರಳದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕಬಿನಿ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ ತಗ್ಗಿದೆ. ಭಾನುವಾರ ಬೆಳಿಗ್ಗೆ ಕಬಿನಿ ಜಲಾಶಯಕ್ಕೆ 9179 ಕ್ಯುಸೆಕ್‌ ನೀರು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 2276.30 ಅಡಿಯಷ್ಟಿದೆ. ಗರಿಷ್ಠ ಮಟ್ಟ 2284 ಅಡಿ. ಹೊರ ಹರಿವಿನ ಪ್ರಮಾಣವನ್ನೂ ಎರಡು ಸಾವಿರದಿಂದ 1250ಕ್ಯುಸೆಕ್‌ಗೆ ತಗ್ಗಿಸಲಾಗಿದೆ. ಜಲಾಶಯದಲ್ಲಿ ಸದ್ಯ 14.98 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ 19.52 ಟಿಸಿಎಂ ನೀರು ಸಂಗ್ರಹಿಸಬಹುದು.

ಅದೇ ರೀತಿ ಹಾರಂಗಿ ಜಲಾಶಯಕ್ಕೂ 1216 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 2837.22 ಅಡಿಯಷ್ಟಿದೆ. ಹೊರ ಹರಿವಿನ ಪ್ರಮಾಣವು 200 ಕ್ಯುಸೆಕ್‌ ಮಾತ್ರ ಇದೆ.ಜಲಾಶಯದಲ್ಲಿ 3.8 ಟಿಎಂಸಿ ನೀರು ಈವರೆಗೂ ಸಂಗ್ರಹವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ