logo
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಮಾರ್ಚ್ 21 ರಂದು ಮೇಲುಕೋಟೆ ವೈರಮುಡಿ, ಶುರುವಾಯ್ತು ಮಹತ್ವದ ಉತ್ಸವಕ್ಕೆ ಸಿದ್ದತೆ

Mandya News: ಮಾರ್ಚ್ 21 ರಂದು ಮೇಲುಕೋಟೆ ವೈರಮುಡಿ, ಶುರುವಾಯ್ತು ಮಹತ್ವದ ಉತ್ಸವಕ್ಕೆ ಸಿದ್ದತೆ

Umesha Bhatta P H HT Kannada

Jan 22, 2024 08:30 AM IST

google News

ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.

    • melkote news ಇದು ಒಟ್ಟು ಹನ್ನೆರಡು ದಿನಗಳ ಉತ್ಸವ. ಅದರಲ್ಲಿ ನಾಲ್ಕೈದು ದಿನದ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವವಿದೆ. ಒಡವೆ, ವೈಢೂರ್ಯಗಳಿಂದಲೇ ಆರಂಭವಾಗುವ ಇಲ್ಲಿನ ವಿಶೇಷ ಪೂಜಾ ಪದ್ಧತಿಗಳು ಮತ್ತು ಕಣ್ಮನ ಸೆಳೆವ ಆಭರಣಗಳು ವೈರಮುಡಿ ಉತ್ಸವದ ಆಕರ್ಷಣೆ.
ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.
ಮೇಲುಕೋಟೆಯಲ್ಲಿ ವೈರಮುಡಿ ಉತ್ಸವಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.

ಮಂಡ್ಯ: ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 21 ರಂದು ಈ ಬಾರಿಯ ಶ್ರೀ ವೈರಮುಡಿ ಉತ್ಸವ 2024 ನಡೆಯಲಿದೆ. ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 16 ರಿಂದ 28 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ ಚಟುವಟಿಕೆಗಳು ಮೇಲುಕೋಟೆಯಲ್ಲಿ ಜರುಗಲಿವೆ. ಇದರ ಭಾಗವಾಗಿ 21 ರಂದು ವೈರಮುಡಿ ವಿಶೇಷ ಆಕರ್ಷಣೆಯಾಗಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವೈರಮುಡಿಗೆ ಈಗಾಗಲೇ ಮಂಡ್ಯ ಜಿಲ್ಲಾಡಳಿತ, ಪಾಂಡವಪುರ ತಾಲ್ಲೂಕು ಆಡಳಿತ ಹಾಗೂ ಮೇಲುಕೋಟೆ ದೇವಸ್ಥಾನ ಸಮಿತಿಯಿಂದ ಸಿದ್ದತೆಗಳು ಶುರುವಾಗಿವೆ.

ಕರ್ನಾಟಕದ ಭವ್ಯ ಧಾರ್ಮಿಕ ಆಚರಣೆಗಳಲ್ಲಿ ವೈರಮುಡಿ ಉತ್ಸವಕ್ಕೆ ಪ್ರಮುಖ ಸ್ಥಾನ. ಸಮೃದ್ಧಿ ಮತ್ತು ಸಂಪತ್ತು ಹಾಗೂ ಸಂಭ್ರಮದ ಸಂಕೇತವಾದ ನವಧಾನ್ಯಗಳ ಅಂಕುರಾರ್ಪಣೆಯೊಂದಿಗೆ ಫಾಲ್ಗುಣ ಪುಷ್ಯ ನಕ್ಷತ್ರ (ಮೀನ) ದಲ್ಲೇ ವೈರಮುಡಿ ಪ್ರಾರಂಭವಾಗುತ್ತದೆ. ಪುಣ್ಯಕ್ಷೇತ್ರದ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಗೆ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಹು ವಿಜಂಭಣೆಯಿಂದ ವೈರಮುಡಿ ಬ್ರಹ್ಮೋತ್ಸವ ನಡೆದುಕೊಂಡು ಬಂದಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ವೈರಮುಡಿ ಕಿರೀಟಧಾರಣೆ

ವೈರಮುಡಿ ಉತ್ಸವದ ಅಂಗವಾಗಿ ವರ್ಷಕ್ಕೊಮ್ಮೆ ಮಾತ್ರ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರ ತೆಗೆಯಲಾಗುತ್ತದೆ. ಮೈಸೂರಿನ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ವಾಹನದಲ್ಲಿ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆ ಮೇಲುಕೋಟೆಗೆ ಕೊಂಡೊಯ್ಯುವುದು ಸಂಪ್ರದಾಯ.ವೈರಮುಡಿಯ ದಿನ ಸಂಜೆಯ ಶುಭ ಮುಹೂರ್ತದಲ್ಲಿ ಪ್ರಧಾನ ಅರ್ಚಕರು ತಮ್ಮ ಕಣ್ಣಿಗೆ ರೇಷ್ಮೆ ವಸ್ತ್ರ ಕಟ್ಟಿಕೊಂಡು ವೈರಮುಡಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಶ್ರೀ ಚಲುವನಾರಾಯಣಸ್ವಾಮಿಯ ಶಿರದ ಮೇಲಿಟ್ಟು ಇತರ ಆಭರಣಗಳಿಂದ ಅಲಂಕರಿಸುತ್ತಾರೆ ಎನ್ನುವುದು ಸ್ಥಳೀಯರ ವಿವರಣೆ.

ಏನೇನು ಕಾರ್ಯಕ್ರಮ ಇರುತ್ತದೆ

ಮೊದಲಿಗೆ ಗರುಡನಿಗೆ ಪೂಜೆ ಸಲ್ಲಿಸಿ ಮೇಲುಕೋಟೆ ಗ್ರಾಮದ ಸುತ್ತಲೂ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಮೂರನೆಯ ದಿನ ಕಲ್ಯಾಣೋತ್ಸವ, ನಾಲ್ಕನೆಯ ದಿನ ವಸಂತೋಧ್ಯಾನ ಮತ್ತಿತರ ಮಂಟಪಗಳಿಗೆ ಚೆಲುವನಾರಾಯಣಸ್ವಾಮಿಯ ಮೆರವಣಿಗೆ ಸಾಗುತ್ತದೆ. ಬ್ರಹ್ಮೋತ್ಸವದ ಬಹುಮುಖ್ಯ ದಿನವೇ ವೈರಮುಡಿ ಉತ್ಸವ. ಅಂದು ವೈರಮುಡಿ, ರಾಜ ಒಡೆಯರು ಕೊಟ್ಟಿರುವ ರಾಜಮುಡಿ, ಮುಮ್ಮಡಿ ಕೃಷ್ಣರಾಜ ಒಡೆಯರು ನೀಡಿರುವ ಕೃಷ್ಣಮುಡಿ ಮತ್ತು ರಾಜ ಪರಂಪರೆಯಿಂದ ಬಂದಿರುವ ನವರತ್ನ ಖಚಿತ ಪದ್ಮಪೀಠ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಮುತ್ತಿನ ಮಣಿಕಟ್ಟು, ಗಂಡಭೇರುಂಡದ ವಜ್ರಾಹಾರ, ಮುತ್ತು ಮತ್ತು ಪಚ್ಚೆ ಕಲ್ಲಿನ ಕೂರಂಬ, ಶಂಖ, ಚಕ್ರ, ಗದೆ ಸೇರಿದಂತೆ ಬೆಲೆ ಕಟ್ಟಲಾಗದ ಅತ್ಯಮೂಲ್ಯ, ಅತ್ಯಪೂರ್ವ 24 ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ಭದ್ರತೆಯೊಡನೆ ವಿಶೇಷ ಪೆಟ್ಟಿಗೆಯಲ್ಲಿ ತಂದು ಶ್ರೀ ರಾಮಾನುಜರ ಗುಡಿಯಲ್ಲಿ ಇಡುತ್ತಾರೆ. ನಂತರ ಉತ್ಸವ ಹೊರಡುತ್ತದೆ. ಭಕ್ತರ ಪಾಲಿಗಂತೂ ಅದು ಸಾಕ್ಷಾತ್ ವೈಕುಂಠವೇ ಧರೆಗಿಳಿದಂತೆ. ಹೀಗೆ ಆರಂಭವಾಗುವ ವೈರಮುಡಿ ಬ್ರಹ್ಮೋತ್ಸವ ರಾತ್ರಿ ಆರಂಭವಾದರೆ ಬೆಳಗಿನ ಜಾವದವರೆಗೂ ಮುಂದುವರೆಯುತ್ತದೆ. ನಂತರ ಪೂಜೆಗಳು ನಡೆದು ಮತ್ತೆ ಖಜಾನೆಗೆ ಹಿಂದಿರುಗಿಸಲಾಗುತ್ತದೆ.

ವೈರಮುಡಿ ಮಹತ್ವ

ವೈರಮುಡಿ ಎಂಬುದು ಹೆಸರೇ ಹೇಳುವಂತೆ ಅದೊಂದು ವಜ್ರಾಭರಣದ ದೈವಶಕ್ತಿಯ ಮಹಾಕಿರೀಟ. ಒಮ್ಮೆ ವಿಷ್ಣು ಭಕ್ತ ಪ್ರಹ್ಲಾದನ ಮಗ ವಿರೋಚನ ಈ ವೈರಮುಡಿಯನ್ನು ಅಪಹರಿಸಿ ಪಾತಾಳದಲ್ಲಿ ಅಡಗಿಸಿಟ್ಟುಕೊಳ್ಳುತ್ತಾನೆ. ವಿಷಯ ತಿಳಿದ ವಿಷ್ಣುವಿನ ವಾಹನನಾದ ವೈನತೇಯ ವೀರೋಚನನೊಡನೆ ಯುದ್ಧ ಮಾಡಿ ಗೆದ್ದು ವೈರಮುಡಿಯೊಡನೆ ಶರವೇಗದಲ್ಲಿ ಆಕಾಶ ಮಾರ್ಗವಾಗಿ ಬರುವಾಗ ವೇಗ ಕಡಿಮೆಯಾಗುತ್ತದೆ. ಈ ಸ್ಥಳ ಯಾವುದು ಎಂದು ಗಮನಿಸಿದಾಗ ಅದು ಮಥುರಾ ನಗರವಾಗಿರುತ್ತದೆ. ಅಲ್ಲಿ ವೈನತೇಯನು ಭಗವಾನ್ ಕೃಷ್ಣನಿಗೆ ವೈರಮುಡಿಯನ್ನು ಅರ್ಪಿಸುತ್ತಾನೆ. ಕೃಷ್ಣನ ತಲೆಗೆ ವೈರಮುಡಿ ಸರಿಯಾಗಿ ಕೂರುವುದಿಲ್ಲ.ಕೃಷ್ಣನೇ ಇದನ್ನು ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಒಪ್ಪಿಸಬೇಕೆಂದು ವೈನತೇಯನಿಗೆ ಹೇಳುತ್ತಾನೆ. ವೈನತೇಯ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ಶಿರಕ್ಕೆ ವೈರಮುಡಿ ಸಮರ್ಪಿಸಿದಾಗ ಭವ್ಯವಾಗಿ ಕಾಣುತ್ತದೆ. ಇದರಿಂದ ಅತ್ಯಂತ ಹರ್ಷಗೊಂಡ ವೈನತೇಯನು ಚೆಲುವನಾರಾಯಣಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಮೆರವಣಿಗೆ ಮಾಡಿ ಭಕ್ತರಿಗೆ ಪರಮಾತ್ಮನ ದಿವ್ಯ ದರ್ಶನ ಮಾಡಿಸುತ್ತಾನೆ. ಅಂದಿನಿಂದಲೂ ವೈರಮುಡಿಗೆ ಮಹತ್ವ ಬಂದಿದೆ.

ಈ ವರ್ಷದ ಚಟುವಟಿಕೆ ಏನೇನು

  • ಮಾರ್ಚ್ 16 ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ
  • 17ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಠೆ
  • 18 ರಂದು 1 ನೇ ತಿರುನಾಳ್- ಧ್ವಜಾರೋಹಣ- ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾಪ್ರವೇಶ
  • 19 ರಂದು 2 ನೇ ತಿರುನಾಳ್ ಶೇಷವಾಹನ ಪಡೆಯೇತ್ತ
  • 20 ರಂದು 3 ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ
  • 21 ರಂದು 4 ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ -ಪಡಿಯೇತ್ತ
  • 22 ರಂದು 5 ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ
  • 23 ರಂದು 6 ನೇ ತಿರುನಾಳ್ - ಗಜೇಂದ್ರ ಮೋಕ್ಷ -ಆನೆವಸಂತ- ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ
  • 24 ರಂದು 7ನೇ ತಿರುನಾಳ್- ಪೊಂಗುನ್ಯೂತ್ತರಮ್- ಶ್ರೀ ಮನ್ಮಹಾರೋಥೋತ್ಸವ
  • 25 ರಂದು 8ನೇ ತಿರುನಾಳ್- ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ
  • 26 ರಂದು 9ನೇ ತಿರುನಾಳ್- ಸಂಧಾನಸೇವೆ -ಚೂರ್ಣಅಭಿಷೇಕ- ಅವಬೃಥ - ಪಟ್ಟಾಭಿಷೇಕ -ಪುಷ್ಪಮಂಟಪರೋಹಣ- ಸಮರಭೂಪಾಲವಾಹನ- ಪಡಿಮಾಲೆ - ಪೂರ್ಣಾಹುತಿ
  • 27 ರಂದು 10 ನೇ ತಿರುನಾಳ್ -ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ
  • 28 ರಂದು ಶ್ರೀ ಅಮ್ಮನವರಿಗೆ ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವ ಪ್ರಾರಂಭ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ