Ram Mandir: ಮಂಡ್ಯ ರಾಮ ಮಂದಿರ ನಾಳೆ ಲೋಕಾರ್ಪಣೆ; ಅರುಣ್ ಯೋಗಿರಾಜ್ ಕೆತ್ತನೆಯ ಸಪರಿವಾರ ಸೀತಾರಾಮ ಪ್ರತಿಷ್ಠಾಪನೆ
Jan 21, 2024 08:20 AM IST
ಮಂಡ್ಯ ಲೇಬರ್ ಕಾಲನಿಯ ರಾಮ ಮಂದಿರ ಮತ್ತು ಅಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಸೀತಾರಾಮ ಪರಿವಾರ ದೇವರ ವಿಗ್ರಹಗಳು. ಈ ವಿಗ್ರಹಗಳನ್ನು ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ.
Ram Mandir in Mandya: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ, ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವ ನಾಳೆ (ಜ.22) ನಡೆಯಲಿದೆ. ಇದೇ ದಿನ ಮಂಡ್ಯದ ಲೇಬರ್ ಕಾಲನಿ ಶ್ರೀರಾಮ ಮಂದಿರವೂ ಉದ್ಘಾಟನೆಯಾಗಲಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯ ಸಪರಿವಾರ ಸೀತಾರಾಮ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ.
ಮಂಡ್ಯ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ. ಇದರೊಂದಿಗೆ ಮಂಡ್ಯದ ಲೇಬರ್ ಕಾಲನಿಯಲ್ಲೂ ರಾಮ ಮಂದಿರ ಉದ್ಘಾಟನೆ, ಸಪರಿವಾರ ಸೀತಾರಾಮ ದೇವರ ಪ್ರತಿಷ್ಠಾ ಮಹೋತ್ಸವದ ಸಡಗರವೂ ಸೇರಿಕೊಂಡಿದೆ.
ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಮಂಡ್ಯದ ಸೀತಾ ರಾಮ ಲಕ್ಷ್ಮಣ ಆಂಜನೇಯರ ಮೂರ್ತಿಗಳನ್ನು ಕೆತ್ತನೆ ಮಾಡಿರುವುದು.
ಮಂಡ್ಯದ ಲೇಬರ್ ಕಾಲನಿಯ ರಾಮ ಮಂದರಿಕ್ಕಾಗಿ ಅರುಣ್ ಯೋಗಿರಾಜ್ ಅವರು ವರ್ಷದ ಹಿಂದೆ ಕೃಷ್ಣ ಶಿಲೆಯಲ್ಲಿ ಶ್ರೀರಾಮ,ಸೀತೆ, ಆಂಜನೇಯ, ಲಕ್ಷ್ಮಣರನ್ನು ಒಳಗೊಂಡ ವಿಗ್ರಹಗಳನ್ನು ಕೆತ್ತನೆ ಮಾಡಿಕೊಟ್ಟಿದ್ದರು. ಈ ವಿಗ್ರಹಗಳ ಕೆತ್ತನೆ ಪೂರ್ಣಗೊಂಡ ಬಳಿಕ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ಶ್ರೀ ರಾಮ ವಿಗ್ರಹ ಕೆತ್ತನೆಗೆ ಹೋದರು ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಮಂಡ್ಯದ ಲೇಬರ್ ಕಾಲನಿಯ ರಾಮ ಮಂದಿರಕ್ಕೆ 70 ವರ್ಷದ ಇತಿಹಾಸ
ಮಂಡ್ಯದ ಲೇಬರ್ ಕಾಲನಿಯಲ್ಲಿರುವ 70 ವರ್ಷ ಹಳೆಯ ಶ್ರೀ ರಾಮ ಮಂದಿರವನ್ನು 14 ವರ್ಷಗಳ ಹಿಂದೆ ಕೆಡವಿ ಹೊಸ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹಲವಾರು ಅಡೆತಡೆಗಳ ನಡುವೆಯೂ ಪೂರ್ಣಗೊಂಡು ಸೋಮವಾರ (ಜ.22) ಉದ್ಘಾಟನೆಗೆ ಸಜ್ಜಾಗಿದೆ. ಈ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀ ರಾಮ, ಸೀತೆ, ಹನುಮಂತ, ಲಕ್ಷ್ಮಣ ವಿಗ್ರಹಗಳು ಅದ್ಭುತವಾಗಿ ಮೂಡಿಬಂದಿವೆ. ವಿಗ್ರಹಗಳ ಜೀವಂತಿಕೆಯನ್ನು ಕಂಡು ಭಕ್ತಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಗ್ರಹಗಳ ಪ್ರತಿಷ್ಠಾಪನೆಗೆ ಮುನ್ನವೇ ಸುತ್ತಮುತ್ತಲಿನ ಹತ್ತೂರ ಜನರು ಬಂದು ಕಣ್ಮುಂಬಿಕೊಳ್ಳುತ್ತಿದ್ದಾರೆ.
ರಾಮ ಮಂದಿರದಲ್ಲಿ ಶ್ರೀ ಮಹಾಗಣಪತಿ, ಶ್ರೀ ಧಾನ್ಯಲಕ್ಷ್ಮಿ, ಶ್ರೀ ಲಕ್ಷ್ಮಣ ಹನುಮಂತ ಸಮೇತ ಶ್ರೀ ಸೀತಾ ರಾಮಚಂದ್ರ ದೇವರ ಬಿಂಬ ಪ್ರತಿಷ್ಠಾಪನಾ ಅಷ್ಟ ಬಂಧ ಬ್ರಹ್ಮಕಳಶ ಮಹೋತ್ಸವ ಪ್ರಗತಿಯಲ್ಲಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ದಿನವೇ ಜ.22ರಂದೇ ಮಂಡ್ಯದ ಶ್ರೀರಾಮ ಮಂದಿರವೂ ಲೋಕಾರ್ಪಣೆಗೊಳ್ಳುತ್ತಿದೆ.
ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಶಿಷ್ಯರಿಂದಲೇ ಈ ಮಂದಿರದ ದೇವರ ಪ್ರಾಣ ಪ್ರತಿಷ್ಠಾಪನೆ, ಪೂಜಾ-ಕೈಂಕರ್ಯಗಳು ನಡೆಯುತ್ತಿದ್ದು, ಜನವರಿ 19 ರಿಂದ ಧಾರ್ಮಿಕ ವಿಧಿ ವಿಧಾನ ಶುರುವಾಗಿವೆ.
ಮಾಜಿ ಮುಖ್ಯ ಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ಕೃಷಿ ಸಚಿವ ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಜಿಲ್ಲೆಯ ಶಾಸಕರು, ಅಧಿಕಾರಿಗಳು, ಧಾನಿಗಳು, ಸ್ಥಳೀಯ ಮುಖಂಡರ, ಭಕ್ತರು ಭಾಗವಹಿಸುತ್ತಿದ್ದಾರೆ.
ಮಂಡ್ಯ ರಾಮ ಮಂದಿರದಲ್ಲಿ ಇಂದು ನಾಳೆ ಏನೇನು ಕಾರ್ಯಕ್ರಮ
ಮಂಡ್ಯ ರಾಮ ಮಂದಿರದಲ್ಲಿ ಜ.21 ರಂದು ಬೆಳಗ್ಗೆ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಸಂಕೀರ್ತನಾ ಕಾರ್ಯಕ್ರಮ, ಸಮೀರಾಚಾರ್ ಅವರಿಂದ ಶ್ರೀರಾಮನ ವ್ಯಕ್ತಿತ್ವ ಪ್ರವಚನ, ಸಂಜೆ ಬಿಂಬಾಧಿವಾಸ, ಚಕ್ರಾಮಂಡಲ ಪೂಜೆ, ಕಳಸ ಸ್ಥಾಪನೆ, ಮಹಾಮಂಗಳಾರತಿ ನಡೆಯಲಿದೆ.
ಅದಾಗಿ, ಜ.22 ರಂದು ಬೆಳಗ್ಗೆ ಅಧಿವಾಸ ಹೋಮ, ಪ್ರತಿಷ್ಠಾಪನಾಂಗ ಹೋಮ ನಂತರ ಶ್ರೀ ರಾಮದೇವರ ಪ್ರತಿಷ್ಠಾಪನೆ ನಂತರ ಶ್ರೀರಾಮತಾರಕ ಹೋಮ, ಗುರುಪ್ರಸಾದ್ ಆಚಾರ್ ಅವರಿಂದ ಅಯೋಧ್ಯಾ ಕ್ಷೇತ್ರ ಮಹಾತ್ಮ ಪ್ರವಚನ, ಫಲಪಂಚಾಮೃತ ಸಹಿತ ಮಹಾಕುಂಭಾಭಿಷೇಕ, ವಿಶೇಷ ಅಲಂಕಾರ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಅರವಿಂದಾಚಾರ್ ಇವರಿಂದ ಸೀತಾ ಕಲ್ಯಾಣ ಪ್ರವಚನ, ಸಿಂಚನ ಗೋಪಾಲ್ ಮತ್ತು ತಂಡದಿಂದ ದಾಸವಾಣಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮಿತಿ ತಿಳಿಸಿದೆ.
-------------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in