Mandya crime: ಮೇಲುಕೋಟೆಯಲ್ಲಿ ಶಿಕ್ಷಕಿ ಕೊಲೆ ಅತ್ಯಾಚಾರದ ಶಂಕೆ, ಹೂತು ಹಾಕಿ ಪರಾರಿಯಾದ ಆರೋಪಿ
Jan 23, 2024 05:47 PM IST
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಶಿಕ್ಷಕಿ ದೀಪಿಕಾ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
- Melukote ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಶಿಕ್ಷಕಿಯಾಗಿದ್ದ ದೀಪಿಕಾ ಎನ್ನುವವರ ದೇಹ ಸಮೀಪದಲ್ಲಿಯೇ ಹೂತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತನಿಖೆ ಚುರುಕುಗೊಂಡಿದೆ.
ಮಂಡ್ಯ: ಮೇಲುಕೋಟೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯೊಬ್ಬರನ್ನು ಕೊಲೆ ಮಾಡಿ ಸಮೀಪದಲ್ಲಿಯೇ ಹೂತು ಹಾಕಿರುವ ಘಟನೆ ನಡೆದಿದೆ. ಮೇಲುಕೋಟೆ ಸಮೀಪದ ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ(28) ಕೊಲೆಯಾದವರು. ಅದೇ ಗ್ರಾಮದ ಯುವಕ ಆಕೆಯನ್ನು ಹಿಂಬಾಲಿಸಿ ಕೊಲೆ ಮಾಡಿರಬಹುದು, ಅತ್ಯಾಚಾರವೂ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿ ತಲೆಮರೆಸಿಕೊಂಡಿದ್ದು. ಆತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆತ ಸಿಕ್ಕಿ ಹಾಕಿಕೊಂಡರೆ ಘಟನೆಗೆ ನಿಖರ ಕಾರಣ ತಿಳಿಯಬಹುದು.
ಇದನ್ನೂ ಓದಿರಿ:Bangalore News: ಬೆಂಗಳೂರಿನಲ್ಲಿ ಮಾಜಿ ಸಚಿವ ಎಲ್ ಜಿ ಹಾವನೂರು ಪುತ್ರ ಆತ್ಮಹತ್ಯೆ
ಘಟನೆ ಏನು
ಮಾಣಿಕ್ಯನಹಳ್ಳಿಯ ವೆಂಕಟೇಶ್ಎಂಬುವರ ಪುತ್ರಿಯಾದ ದೀಪಿಕಾ ಅದೇ ಗ್ರಾಮದ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದಳು. ಇವರಿಗೆ 8ವರ್ಷದ ಮಗು ಸಹ ಇದ್ದು ಮೇಲುಕೋಟೆ ಎಸ್.ಇ.ಟಿ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದರು. ಪ್ರತಿದಿನ ತಮ್ಮ ಸ್ಕೂಟರ್ ಮೂಲಕ ಶಾಲೆಗೆ ಬಂದು ಹೋಗುತ್ತಿದ್ದ ದೀಪಿಕಾ ಜನವರಿ20ರ ಶನಿವಾರ ಶಾಲಾ ಕರ್ತವ್ಯಮುಗಿಸಿ ಹೊರಟಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಯಾವುದೋ ಪೋನ್ ಕರೆ ಬಂದ ಕಾರಣ ಬೈಕ್ ಮೂಲಕ ತೆರಳಿದ್ದಾರೆ. ಶನಿವಾರ ಯಾರದೋ ಬೈಕ್ ಬಹಳಹೊತ್ತಿನಿಂದ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ನಿಂತಿರುವ ಬಗ್ಗೆ ಮಾಹಿತಿ ಬಂದಾಗ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ತೆರಳಿ ಬೈಕ್ ವಶಕ್ಕೆ ಪಡೆದು ಸುತ್ತಮುತ್ತ ಹುಡುಕಿದ್ದಾರೆ .
ಕಾಣೆಯಾದ ದೂರು
ಯಾರೂ ಪತ್ತೆಯಾಗದ ಕಾರಣ ಬೈಕ್ ನಂಬರ್ ಆಧರಿಸಿ ಶಿಕ್ಷಕಿಯ ತಂದೆ ವೆಂಕಟೇಶ್ ಎಂಬುರನ್ನು ಕರೆಸಿ ಮಾಹಿತಿ ನೀಡಿದ್ದಾರೆ. ಆಗ ಸಂಜೆಯಾದರೂ ಆಕೆ ಮನೆಗೆ ಬಾರದೇ ಇರುವುದು ಗಮನಕ್ಕೆ ಬಂದಿದೆ.
ಬೈಕ್ ತಮ್ಮ ಮಗಳದೇ ಎಂದು ಖಚಿತಪಡಿಸಿದ ವೆಂಕಟೇಶ್ ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಮೇಲುಕೋಟೆ ಠಾಣೆಯಲ್ಲಿ 20ರಂದೇ ದೂರು ನೀಡಿದ್ದರಿಂದ ಮೇಲುಕೋಟೆ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಎರಡು ದಿನ ಹುಡುಕಿದರೂ ದೀಪಿಕಾ ಇರುವಿಕೆ ಪತ್ತೆಯಾಗಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.
ಹೂತ ಸ್ಥಿತಿಯಲ್ಲಿ ದೇಹ ಪತ್ತೆ
ಸೋಮವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಯೋಗಾನರಸಿಂಹಸ್ವಾಮಿ ಬೆಟ್ಟದ ಹಿಂಭಾಗ ಮಣ್ಣಿನಲ್ಲಿ ಹೂತಿದ್ದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಸ್ಥಳೀಯರ ಸಹಕಾರದಿಂದ ದೇಹವನ್ನು ಹೊರಕ್ಕೆ ತೆಗೆಯಿಸಿದಾಗ ಅದು ದೀಪಿಕಾ ಎನ್ನುವುದು ಗೊತ್ತಾಗಿದೆ. ಕುಟುಂಬದವರೂ ಅದು ದೀಪಿಕಾ ದೇಹ ಎಂದು ಖಚಿತಪಡಿಸಿದ್ದಾರೆ. ಆನಂತರ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆಕೆಯನ್ನು ಹಿಂಬಾಲಿಸಿದವರೇ ಕೊಲೆ ಮಾಡಿ ಎರಡು ಅಡಿ ಗುಂಡಿ ತೆಗೆದು ಅಲ್ಲಿಯೇ ಹೂತು ಪರಾರಿಯಾಗಿರುವುದು ಗೊತ್ತಾಗಿದೆ. ಆಕೆಯ ಮೇಲೆ ಗುಂಪು ಅತ್ಯಾಚಾರವಾಗಿರಬಹುದು ಎನ್ನುವ ಶಂಕೆ ಪೊಲೀಸರದ್ದು. ಒಬ್ಬರೇ ಗುಂಡಿ ತೆಗೆದು ಹೂತು ಹಾಕಲು ಆಗುವುದಿಲ್ಲ ಎನ್ನುವುದು ಪೊಲೀಸರ ಅನುಮಾನದ ಮೂಲ. ಈ ಕುರಿತು ಮರಣೋತ್ತರ ಪರೀಕ್ಷೆಯೂ ನಡೆದಿದ್ದು. ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಯುವಕನ ಮೇಲೆ ಅನುಮಾನ
ಈ ನಡುವೆ ಮಾಣಿಕ್ಯನಹಳ್ಳಿ ಗ್ರಾಮದ ಯುವಕನ ಮೇಲೆ ದೀಪಿಕಾ ಪತಿ ಹಾಗೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಕಾಣೆಯಾಗಿರುವುದು ಕಂಡು ಬಂದಿದೆ. ಆತನೇ ದೀಪಿಕಾ ಮೊಬೈಲ್ ಹೊತ್ತೊಯ್ದಿರಬಹುದು ಎನ್ನುವ ಶಂಕೆಯೂ ಇದೆ. ಆತನ ಇರುವಿಕೆ ಪತ್ತೆ ಹೆಚ್ಚಿ ಸೆರೆ ಹಿಡಿಯಲು ಪೊಲೀಸ್ ತಂಡಗಳನ್ನು ಮಂಡ್ಯ ಎಸ್ಪಿ ಎನ್.ಯತೀಶ್ ರಚಿಸಿದ್ದಾರೆ. ಮೇಲುಕೋಟೆ ಇನ್ಸ್‌ಪೆಕ್ಟರ್ ಸಿದ್ದಪ್ಪ ಹಾಗೂ ಅವರ ತಂಡದವರು ತನಿಖೆ ಚುರುಕುಗೊಳಿಸಿದ್ದಾರೆ.